ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 16
ಅಪಾರ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ವಿದ್ಯಾಗಿರಿ ಠಾಣೆ ಪೊಲೀಸರು ಶನಿವಾರ ಯಶಸ್ವಿಯಾಗಿದ್ದಾರೆ.
ಸುಮಾರು ರು. 25 ಲಕ್ಷ ಮೌಲ್ಯದ 266 ಕೆಜಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು, ನವಲೂರು ಬಳಿ ದಾಳಿ ನಡೆಸಿ ಗಾಂಜಾ ಸಾಗಾಟಕ್ಕೆ ಬಳಿಸಿದ್ದ ಮಾರುತಿ ಓಮಿನಿ ವ್ಯಾನ್ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಪದ್ಮನಯನ, ನವಲಗುಂದದಿಂದ ಕಲಘಟಗಿಗೆ ಗಾಂಜಾ ಸಾಗಿಸಲಾಗುತ್ತಿತ್ತು. ಈ ಬಗ್ಗೆ ತೀವ್ರ ಶೋಧ ನಡೆಸಿ ಇದರ ಹಿಂದಿನ ಜಾಲ ಪತ್ತೆ ಹಚ್ಚುವ ಪ್ರಯತ್ನ ನಡೆಸಲಾಗುತ್ತದೆ ಎಂದರು. ಬಂಧಿತ ಆರೋಪಿಗಳನ್ನು ಮಲ್ಲೇಶಪ್ಪ ಹಾಗೂ ರಮೇಶ ಗೌಡರ ಎಂದು ಗುರುತಿಸಲಾಗಿದೆ.
ಡಿಸಿಪಿ ಶ್ರೀನಾಥ ಜೋಶಿ ಹಾಗೂ ಎಸಿಪಿ ಎಸ್.ಎನ್. ಹೊಳೆಹೊಸುರ ಮಾರ್ಗದರ್ಶನಲ್ಲಿ ಪಿಎಸ್ಐ ಪರಶುರಾಮ ಪೂಜೇರಿ ನೇತೃತ್ವದ ಆರ್.ಎಂ. ಮಿಸ್ಕಿನ್, ಎಂ.ಆರ್. ದೊಡ್ಡಮನಿ, ಜಿ.ಜಿ. ಚಿಕ್ಕಮಠ, ಎಸ್.ಪಿ. ಲಮಾಣಿ, ಆರ್.ಜಿ. ಬಂಗಾರಿ, ಎಸ್.ಎಸ್. ನೆಸ್ರೇಕರ, ಎಂ.ಎಂ. ದೊಡ್ಡಮನಿ ಹಾಗೂ ಜಿ.ಎಂ. ಸಾತನ್ನವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.