ಧಾರವಾಡ

ರಂಗಾಯಣ ರಗಳೆಗೆ ಉಮಾಶ್ರಿ ಇತಿಶ್ರೀ?

Srinivasamurthy VN

-ಬಸವರಾಜ ಹಿರೇಮಠ
ಕ.ಪ್ರ.ವಾರ್ತೆ ಧಾರವಾಡ ಮೇ 20

ನಿರಂತರ ರಂಗ ಚಟುವಟಿಕೆ ನಡೆಯಬೇಕು, ರಂಗಭೂಮಿಗೆ ಹೊಸ ಆಯಾಮ ದೊರಕಬೇಕೆನ್ನುವ ಮಹದಾಸೆಯಿಂದ ಬಿ.ವಿ. ಕಾರಂತರು ಹುಟ್ಟು ಹಾಕಿದ ರಂಗಾಯಣ ಒಣ ಪ್ರತಿಷ್ಠೆಯಿಂದಾಗಿ ದಿನಕ್ಕೊಂದು ರಗಳೆಗೆ ಕಾರಣವಾಗುತ್ತಿದೆ.
ಮೈಸೂರು ರಂಗಾಯಣದ 12 ಕಲಾವಿದರನ್ನು ಧಾರವಾಡ ಹಾಗೂ ಶಿವಮೊಗ್ಗ ರಂಗಾಯಣಗಳಿಗೆ ವರ್ಗಾವಣೆ ಮಾಡಿದ ನಂತರದ ಬೆಳವಣಿಗೆಯಿಂದ ರಂಗಾಯಣ ಮತ್ತೆ ಚರ್ಚೆಯಲ್ಲಿದೆ. ಸರ್ಕಾರದ ಆದೇಶದಂತೆ ವರ್ಗಾವಣೆಗೊಂಡ ಈ ಕಲಾವಿದರು ಇಲ್ಲಿನ ಯಾವುದೇ ರಂಗ ಚಟುವಟಿಕೆಗಳಲ್ಲೂ ಭಾಗವಹಿಸದೇ ತಟಸ್ಥ ನಿಲುವು ಪ್ರದರ್ಶಿಸುತ್ತಿರುವುದು ಸರಿಯಲ್ಲ ಎನ್ನುವುದು ರಂಗಾಸಕ್ತರ ಅಭಿಪ್ರಾಯ.
ತಿಂಗಳ ಹಿಂದೆ ಮೈಸೂರು ರಂಗಾಯಣದಲ್ಲಿ ಬೇರು ಬಿಟ್ಟಿದ್ದ ಕಲಾವಿದರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿತ್ತು. ಮೈಸೂರಿನಲ್ಲಿ ನಿರ್ದೇಶಕ ಬಿ.ವಿ. ರಾಜಾರಾಂ ಮತ್ತಿತರ ಕಲಾವಿದರು ಇದಕ್ಕೆ ಪ್ರತಿಭಟಿಸಿ, ತಮ್ಮ ಅಸಮ್ಮತಿ ತೋರಿದ್ದರು. ಆಮೇಲೆ ಬಿ.ವಿ. ರಾಜಾರಾಂ ಅವರನ್ನು ನಿರ್ದೇಶಕ ಹುದ್ದೆಯಿಂದಲೂ ಸರ್ಕಾರ ಪದಚ್ಯುತಗೊಳಿಸಿತ್ತು. ಸರ್ಕಾರ ತನ್ನ ಬಿಗಿ ನಿಲುವಿಗೆ ಅಂಟಿಕೊಂಡ ಪರಿಣಾಮ ಒಲ್ಲದ ಮನಸ್ಸಿನಿಂದ 12 ಕಲಾವಿದರು ಧಾರವಾಡ ಹಾಗೂ ಶಿವಮೊಗ್ಗ ರಂಗಾಯಣಕ್ಕೆ ಪ್ರಯಾಣ ಬೆಳೆಸಿದರು. ಬಂದ ದಿನವೇ ಕೆಲವರು ವೈದ್ಯಕೀಯ ಕಾರಣ ಕೊಟ್ಟು ರಜೆ ಪಡೆಯಲು ಯತ್ನಿಸಿದರೆ, ಇನ್ನು ಕೆಲವರು ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದೆ ತಟಸ್ಥರಾಗಿ ಉಳಿದರು. ಈ ಎಲ್ಲ ಬೆಳವಣಿಗೆಗಳಿಂದ ಒಂದು ತಿಂಗಳು ಯಾವುದೇ ಚಟುವಟಿಕೆಯಿಲ್ಲದೆ ಕಳೆದ ಕಲಾವಿದರು, ಮೇ 15ರಿಂದ ಒಂದು ತಿಂಗಳು ಬೇಸಿಗೆ ರಜೆ ಪಡೆದಿದ್ದಾರೆ.
ತಿಂಗಳಿಗೆ 38 ಸಾವಿರ: ಏನೇ ವಿವಾದ, ಭಿನ್ನಾಭಿಪ್ರಾಯಗಳು ಇದ್ದರೂ ಸರ್ಕಾರದಿಂದ ತಿಂಗಳಿಗೆ 38 ಸಾವಿರ ಸಂಬಳ ಪಡೆಯುವ ಈ ಕಲಾವಿದರು, ಸರ್ಕಾರಿ ಆದೇಶವನ್ನು ಪಾಲಿಸಬೇಕಾದ್ದು ಕರ್ತವ್ಯ. ತಮ್ಮ 25 ವರ್ಷಗಳ ರಂಗಭೂಮಿ ಅನುಭವವನ್ನು ಈ ಭಾಗದ ಕಲಾವಿದರಿಗೆ, ತಂತ್ರಜ್ಞರಿಗೆ ದೊರಕಿಸಿಕೊಡಬೇಕು. ಅದನ್ನು ಬಿಟ್ಟು ವರ್ಗಾವಣೆ ಆದೇಶವೇ ತಪ್ಪೆಂದು ಹಠಮಾರಿ ಧೋರಣೆ ತೆಳೆದಿರುವುದು ಸರಿಯಲ್ಲ.
ಸೌಹಾರ್ದ ಆವಶ್ಯ: ರಂಗಾಯಣ ಹಾಗೂ ಅಲ್ಲಿನ ನಿರ್ದೇಶಕರು ಹಾಗೂ ಕಲಾವಿದರ ಬಗ್ಗೆ ರಂಗ ನಿರ್ದೇಶಕ ಪ್ರಕಾಶ ಗರುಡ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ವರ್ಗಾವಣೆಯಾಗಿ ಬಂದ ಕಲಾವಿದರಿಗೆ ಕೆಲವು ವೈಯಕ್ತಿಕ ತೊಂದರೆಗಳಿರುತ್ತವೆ. ಆದರೆ,ಅವನ್ನೆಲ್ಲ ಸರಿಪಡಿಸಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಕೆಲಸ ಪಡೆದುಕೊಳ್ಳಬೇಕಿರುವುದು ನಿರ್ದೇಶಕರ ಕರ್ತವ್ಯ. ಇದನ್ನು ಬಿಟ್ಟು ಕಲಾವಿದರು ಕೆಲಸ ಮಾಡುತ್ತಿಲ್ಲ ಎಂದು ದೂರುವುದು ಸರಿಯಲ್ಲ. ಮೂಲಭೂತವಾಗಿ ನಿರ್ದೇಶಕರು ಇಲ್ಲಿ ಗಟ್ಟಿಯಾಗಿ ಕೆಲಸ ಮಾಡಬೇಕು ಎಂದರು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಂಗಾಯಣ ಕುರಿತಂತೆ ಸ್ಪಷ್ಟ ನೀತಿ, ನಿಯಮಾವಳಿ ರೂಪಿಸುವ ಜವಾಬ್ದಾರಿ ಈ ಸರ್ಕಾರದ ಮೇಲಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಉಮಾಶ್ರೀ ಅವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಣೆ ಹೊತ್ತಿರುವುದರಿಂದ ರಂಗಾಯಣದ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.

ಧಾರವಾಡ ರಂಗಾಯಣಕ್ಕೆ ಬಂದ ಕಲಾವಿದರು ಸಾಕಷ್ಟು ಅನುಭವಿಗಳು. ಅವರು ಬಂದಾಗ ನಡೆಯುತ್ತಿದ್ದ ಮಕ್ಕಳ ಶಿಬಿರದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ನೆಪವೊಡ್ಡಿ ತಟಸ್ಥರಾಗಿ ಉಳಿದು ಬಿಟ್ಟರು. ಮೇ 15ರಿಂದ ಬೇಸಿಗೆ ರಜೆ ಹೋಗಿದ್ದು, ಬಂದ ಮೇಲಾದರೂ ಎಷ್ಟರ ಮಟ್ಟಿಗೆ ಸಹಕರಿಸುತ್ತಾರೆಂದು ನೋಡಬೇಕಿದೆ.
- ಕೆ.ಎಚ್. ಚೆನ್ನೂರ, ರಂಗಾಯಣದ ಆಡಳಿತಾಧಿಕಾರಿ

SCROLL FOR NEXT