ನೂರು ಕೋಟಿ ರು. ಹೇಗೆ ಖರ್ಚಾಗಿದೆ?: ಲಾಡ್
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿ ಶಾಸಕರು ಅವಳಿ ನಗರಕ್ಕೆ ತಂದಿರುವ ಅನುದಾನ ಯಾವ ರೀತಿ ಉಪಯೋಗವಾಗಿದೆ ಎನ್ನುವ ಸಂಗತಿಯನ್ನು ಮೊದಲು ಹುಬ್ಬಳ್ಳಿಯ ಜನರಿಗೆ ತಿಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಅವಳಿ ನಗರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂದಿರುವ ಅನುದಾನ ಹೇಗೆ ಉಪಯೋಗವಾಗಿದೆ. ನೂರು ಕೋಟಿ ಅನುದಾನ ತರಲಾಗಿದೆ ಎಂದು ಹೇಳುತ್ತಿರುವ ಶೆಟ್ಟರ್, ಆ ನೂರು ಕೋಟಿ ಹುಬ್ಬಳ್ಳಿಯಲ್ಲಿ ಹೇಗೆ ವೆಚ್ಚವಾಗಿದೆ? ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಈಗ 3 ತಿಂಗಳಾಗಿದ್ದು, ಅವಳಿ ನಗರದ ಅಭಿವೃದ್ದಿ ಅಗತ್ಯ ಅನುದಾನ ತರುವ ಯತ್ನ ಇಲ್ಲಿನ ಶಾಸಕರು ಮಾಡಲಿದ್ದಾರೆ ಎಂದರು.
ಎಲ್ಲ ನಗರಗಳಿಗೂ ನೂರು ಕೋಟಿ ಅನುದಾನ ನೀಡುವ ಯೋಜನೆ ಮುಂದುವರಿಯಲಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಕಾಂಗ್ರೆಸ್ ಮುಂದುವರಿಸಬೇಕು ಎಂದೇನೂ ಇಲ್ಲ. ಜನಪರ ಇರುವ ಯೋಜನೆಗಳನ್ನು ಸರ್ಕಾರ ಮುಂದುವರಿಸಲಿದೆ ಎಂದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದ ಬಿಜೆಪಿಗೆ ದಲಿತರ ಪರ ಮಾತನಾಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ ಮೊದಲಿನಿಂದಲೂ ದಲಿತರ ಪರ, ಈ ವಿಚಾರದಲ್ಲಿ ಬಿಜೆಪಿಯಿಂದ ಪಾಠ ಕಲಿಯಬೇಕಾದ ಅಗತ್ಯ ಕಾಂಗ್ರೆಸ್ಗೆ ಇಲ್ಲ ಎಂದಿದ್ದಾರೆ.