ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 30
ಪ್ರಸಕ್ತ ಆರ್ಥಿಕ ವರ್ಷದ ಶೇ. 5ರ ರಿಯಾಯಿತಿಯಡಿ ರು. 7 ಕೋಟಿ ತೆರಿಗೆ ಮೊತ್ತ ಸಂಗ್ರಹಿಸಿರುವ ಮಹಾನಗರ ಪಾಲಿಕೆ, ಈ ಆರ್ಥಿಕ ವರ್ಷಾಂತ್ಯಕ್ಕೆ ರು. 46 ರಿಂದ 47 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.
ತೆರಿಗೆ ಸಂಗ್ರಹಕ್ಕಾಗಿ ಮಹಾನಗರ ಪಾಲಿಕೆ ಏ. 1ರಿಂದ ಏ. 30ರವರೆಗಿನ ಅವಧಿಯಲ್ಲಿ ಘೋಷಿಸಿದ್ದ ಶೇ. 5ರ ರಿಯಾಯಿತಿಯಿಂದಾಗಿ ರು. 7 ಕೋಟಿ ಸಂಗ್ರಹಗೊಂಡಿದ್ದು, ಈ ಅವಧಿಯಲ್ಲಿ ತೆರಿಗೆ ಸಂಗ್ರಹದ ಗುರಿ ಶೇ. 100ರಷ್ಟು ತಲುಪಿದಂತಾಗಿದೆ.
ಶೇ. 5ರ ರಿಯಾಯಿತಿ ಅನ್ವಯ ತೆರಿಗೆ ಪಾವತಿಸುವುದಕ್ಕೆ ಏ. 30 ಕೊನೆಯ ದಿನವಾಗಿದ್ದು, ಈ ದಿನ ಸುಮಾರು ರು. 1 ಕೋಟಿಯಷ್ಟು ತೆರಿಗೆ ಸಂಗ್ರಹಗೊಂಡಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಎಚ್ಡಿಒನ್ ಕೇಂದ್ರ ಸೇರಿದಂತೆ ಪಾಲಿಕೆಯ ವಿವಿಧ ಕಚೇರಿಗಳಲ್ಲಿ ತೆರಿಗೆ ತುಂಬುವವರ ಸಂಖ್ಯೆ ಕೊನೆಯ ದಿನವಾದ ಬುಧವಾರ ಹೆಚ್ಚಿತ್ತು. ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸುವವರಲ್ಲಿ ಬಹುತೇಕರು ಮಂಗಳವಾರದವರೆಗೆ ತೆರಿಗೆ ಪಾವತಿಸಿದ್ದು, ಇನ್ನುಳಿದವರು ಅಂತಿಮ ದಿನವಾದ ಬುಧವಾರ ಸಾಲುಗಟ್ಟಿ ತೆರಿಗೆ ಪಾವತಿಸುವ ಮೂಲಕ ಶೇ. 5ರಷ್ಟು ರಿಯಾಯಿತಿ ಪಡೆದಿದ್ದಾರೆ. ಎಚ್ಡಿಒನ್ ಕೇಂದ್ರಗಳಲ್ಲಿ ರಾತ್ರಿ 8ರವರೆಗೂ ಸಾರ್ವಜನಿಕರು ತೆರಿಗೆ ಪಾವತಿಸಿದ್ದಾರೆ.
ಬುಧವಾರದಂದು ಶೇ. 5ರ ರಿಯಾಯಿತಿಯಡಿ ಪಾವತಿಗೊಂಡಿರುವ ತೆರಿಗೆ ಮೊತ್ತ ರು. 1 ಕೋಟಿಯೆಂದು ಅಂದಾಜಿಸಲಾಗಿದ್ದರೂ, ಈ ಒಂದು ದಿನದ ತೆರಿಗೆಯ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ.
ಶೇ. 5ರ ರಿಯಾಯಿತಿಯಡಿ ತೆರಿಗೆ ಪಾವತಿಸುವ ಅವಧಿ ಕೊನೆಗೊಂಡಿದ್ದು, ಮೇ ಹಾಗೂ ಜೂನ್ನಲ್ಲಿ ದಂಡ ರಹಿತ ತೆರಿಗೆ ವಸೂಲಿ ಮಾಡಲಾಗುವುದು. ಜುಲೈ 1 ರಿಂದ ಪ್ರತಿ ತಿಂಗಳು ಒಟ್ಟಾರೆ ತೆರಿಗೆ ಮೊತ್ತಕ್ಕೆ ಶೇ. 2ರಷ್ಟು ದಂಡ ವಿಧಿಸಿ ತೆರಿಗೆ ವಸೂಲಿ ಮಾಡಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇನ್ನು 2012-13ರ ಆರ್ಥಿಕ ವರ್ಷದಲ್ಲಿ ಒಟ್ಟು ರು. 32.82 ಕೋಟಿ ತೆರಿಗೆ ಸಂಗ್ರಹಿಸಿದ್ದ ಮಹಾನಗರ ಪಾಲಿಕೆ, 2013-14ನೇ ಸಾಲಿನಲ್ಲಿ ರು. 36.49 ಕೋಟಿ ತೆರಿಗೆ ಸಂಗ್ರಹಿಸಿತ್ತು.
ಸ್ವಯಂ ಘೋಷಿತ ತೆರಿಗೆ ಪಾವತಿಸುವುದಕ್ಕಾಗಿ ಕರದಾತರನ್ನು ಪ್ರೋತ್ಸಾಹಿಸಲು ಡಂಗುರ ಬಾರಿಸುವುದು ಸೇರಿದಂತೆ ಹಲವಾರು ಮಾರ್ಗಗಳನ್ನು ಕಂಡುಕೊಂಡಿರುವ ಮಹಾನಗರ ಪಾಲಿಕೆ, ಈ ಬಾರಿ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.
ಶೇ. 5ರಷ್ಟು ತೆರಿಗೆ ಸಂಗ್ರಹದಲ್ಲಿ ಈ ಬಾರಿಯೂ ಕಳೆದ ಆರ್ಥಿಕ ವರ್ಷದಷ್ಟೇ ತೆರಿಗೆ ಸಂಗ್ರಹಗೊಳ್ಳುವುದೆಂದು ಅಂದಾಜಿಸಲಾಗಿತ್ತು. ಈ ಯೋಜನೆಯಡಿ ಕಳೆದ ಬಾರಿ ತೆರಿಗೆ ಪಾವತಿಸಿದವರೇ ಈ ಬಾರಿಯೂ ತೆರಿಗೆ ಪಾವತಿಸಲು ಮುಂದಾಗುತ್ತಾರೆ. ಇನ್ನೂ ಹೊಸತಾಗಿ ಬೆರಳೆಣಿಕೆಯ ಕರದಾತರು ಮಾತ್ರ ಹೆಚ್ಚುವರಿಯಾಗಿ ಈ ಯೋಜನೆಯಡಿ ತೆರಿಗೆ ಪಾವತಿಸಿದ್ದಾರೆ.
- ಎಂ.ಬಿ. ಸೊಬರದ,
ಕಂದಾಯ ಅಧಿಕಾರಿ, ಹು-ಧಾ ಮಹಾನಗರ ಪಾಲಿಕೆ
-ಆನಂದ ಅಂಗಡಿ