ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳ ಮತ್ತು ಸಿಬ್ಬಂದಿ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ನೂರಾರು ನೌಕರರು ಸೋಮವಾರ ಪಾಲಿಕೆಯ ಎಲ್ಲ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟಿಸಿದರು. ಮಹಾನಗರ ಪಾಲಿಕೆ ನೌಕರರ ಸಂಘದ ನೇತೃತ್ವದಲ್ಲಿ ಪಾಲಿಕೆಯ ಇಲ್ಲಿಯ ಮುಖ್ಯ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ವಿಭಾಗಗಳಿಗೆ ಬೀಗ ಹಾಕಿದರು.
ವಲಯ ಕಚೇರಿ ನಂ. 9ರ ಸಹಾಯಕ ಆಯುಕ್ತ ಸುಭಾಷ ಕಾಂಬಳೆ ಅವರು ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿದ್ದು, ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ನಡೆಯುವ ಬ್ಲಾಕ್ಮೇಲ್ ತಂತ್ರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಪಾಲಿಕೆಯ ಎಲ್ಲ ವಿಭಾಗಗಳ ಕಚೇರಿಗಳಿಗೆ ಬೀಗ ಜಡಿದಿದ್ದರಿಂದ ಮಧ್ಯಾಹ್ನದವರೆಗೂ ಕಚೇರಿಗಳು ತೆರೆಯಲಿಲ್ಲ. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಮೇಯರ್ ಶಿವು ಹಿರೇಮಠ ಹಾಗೂ ಆಯುಕ್ತ ರಮಣದೀಪ ಚೌಧರಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ನಂತರ ನೌಕರರು ಪ್ರತಿಭಟನೆಯಿಂದ ಹಿಂದೆ ಸರಿದರು.
ಬೆದರಿಕೆ ದೂರು: ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೇಯರ್ ಶಿವು ಹಿರೇಮಠ, ಪಾಲಿಕೆಯ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ ಆರೋಪ ಎದುರಿಸುತ್ತಿದ್ದ ವಲಯ ಕಚೇರಿ ನಂ. 9ರ ವಲಯ ಸಹಾಯಕ ಆಯುಕ್ತ ಸುಭಾಷ ಕಾಂಬಳೆಯವರನ್ನು ತಾಂತ್ರಿಕ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದರು. ವಲಯ ಕಚೇರಿ ನಂ. 9 ರಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ಸಾಂಬ್ರಾಣಿ ಎಂಬುವರಿಗೆ ಮಾಜಿ ಮೇಯರ್ವೊಬ್ಬರು ಬೆದರಿಕೆ ಹಾಕಿರುವ ಬಗ್ಗೆ ನೌಕರರು ದೂರು ನೀಡಿದ್ದಾರೆ. ಈ ಕುರಿತು ಶೀಘ್ರ ತನಿಖೆ ನಡೆಸಲಾಗುವುದು. ನೌಕರರ ರಕ್ಷಣೆಗಾಗಿ ಸಮಿತಿ ರಚಿಸಲಾಗುವುದು ಎಂದರು. ಪಾಲಿಕೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗಾಗಿ ಕಳೆದ ಜು. 14 ಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹೌಸಿಂಗ್ ಲೋನ್(ಗೃಹ ಸಾಲ) ಎಲ್ಲ ನೌಕರರಿಗೂ ವಿಸ್ತರಿಸುವಂತೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಪ್ರಸ್ತುತ ಸೇವಾ ಹಿರಿತನದ ಮೇಲೆ 20 ಸಿಬ್ಬಂದಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಡಿಡಿಟಿಪಿ ಕಚೇರಿಯಲ್ಲಿ ಅವ್ಯವಾಹರಗಳ ಕುರಿತು ದೂರುಗಳು ಬಂದಿದ್ದು, ಮುಂಬರುವ ದಿನಗಳಲ್ಲಿ ಈ ಕಚೇರಿಯನ್ನ್ನು ಮೊದಲನೇ ಮಹಡಿಗೆ ಸ್ಥಳಾಂತರಿಸಲಾಗುವುದು. ಸಾರ್ವಜನಿಕರೊಂದಿಗೆ ವ್ಯವಹರಿಸಲು ನೆಲ ಅಂತಸ್ತಿನ ಕಚೇರಿಯ ಒಬ್ಬ ಸಿಬ್ಬಂದಿಯನ್ನು ಮಾತ್ರ ನೇಮಿಸಲಾಗುವುದು. ಪಾಲಿಕೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಪಾಲಿಕೆ ಸಿಬ್ಬಂದಿ ಭಯ ಮುಕ್ತವಾತಾವರಣದಲ್ಲಿ ಕಾರ್ಯನಿರ್ವಹಿಸಲು ಪೊಲೀಸರ ಸಣ್ಣ ತುಕಡ್ನಿ ನಿಯೋಜಿಸಲಾಗುವುದು ಎದರು.
ಪಾಲಿಕೆ ಉಪ ಮೇಯರ್ ಮಂಜುಳಾ ಅಕ್ಕೂರ, ಸುಧೀರ ಸರಾಫ್, ಪಾಂಡುರಂಗ ಪಾಟೀಲ, ವೀರಣ್ಣ ಸವಡಿ, ನೌಕರರ ಸಂಘದ ಶ್ರೀಶೈಲಪ್ಪ ಶೆಟ್ಟರ್, ಎಚ್.ಎಂ. ಕರಲಿಂಗಣ್ಣವರ ಇದ್ದರು.