ಧಾರವಾಡ

ಜಿಲ್ಲೆಯಲ್ಲಿ ಜಿಂಕೆ ಹಾವಳಿ ಜೋರು

ಕನ್ನಡಪ್ರಭ ವಾರ್ತೆ, ಗದಗ, ಜೂ. 20
ದಶಕದಿಂದ ತೀವ್ರ ಜಿಂಕೆ ಹಾವಳಿಯಿಂದ ತತ್ತರಿಸಿರುವ ಜಿಲ್ಲೆಯ ರೈತ ವರ್ಗ, ಅದ್ಯಾವಾಗ ಜಿಂಕೆಗಳಿಂದ ನಮಗೆ ಮುಕ್ತಿ ಸಿಗುತ್ತದೆ ಎನ್ನುತ್ತಲೇ ಪ್ರತಿ ವರ್ಷ ಬಿತ್ತನೆ ಮಾಡುತ್ತಾರೆ. ಅದೇ ಮಾದರಿಯಲ್ಲಿ ಈ ವರ್ಷವೂ ಬಿತ್ತನೆ ಮಾಡಿದ್ದು, ಹುಟ್ಟುತ್ತಲೇ ಬೆಳೆಗಳು ಜಿಂಕೆಗಳ ಹಾವಳಿಗೆ ತುತ್ತಾಗುವಂತಾಗಿದೆ.
ಜಿಲ್ಲೆಯಲ್ಲಿ ಯರಿ ಭೂಮಿ ಹೊಂದಿರುವ ರೋಣ ಹಾಗೂ ಗದಗ ತಾಲೂಕುಗಳಲ್ಲಿ ಸದ್ಯ ಜಿಂಕೆಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಪಕ್ಕದ ಕೊಪ್ಪಳ ಜಿಲ್ಲೆಯಿಂದ ಗದಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ನರೇಗಲ್ಲ, ಲಕ್ಕುಂಡಿ, ಸವಡಿ, ಕೋಟುಮಚಗಿ ಸುತ್ತಲಿನ ಹೊಲಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಜಿಂಕೆಗಳು ಬೆಳೆಗಳಿಗೆ ಹಾನಿ ಮಾಡುತ್ತಿವೆ.
ಪರಿಹಾರ ನೀಡುತ್ತಿಲ್ಲ: 2009, 2010, 2011ರಲ್ಲಿ ಜಿಂಕೆ ಹಾವಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಹೇಳುತ್ತದೆ. ಆದರೆ, ಅದು ಪ್ರತಿ ಹೆಕ್ಟೇರ್‌ಗೆ ರು. 200ರಿಂದ 800 ಮಾತ್ರ. ರೈತ ಪ್ರತಿ ಎಕರೆ ಹೆಸರು ಬಿತ್ತನೆ ಮಾಡಲು ರು. 4ರಿಂದ 5 ಸಾವಿರ ಖರ್ಚು ಮಾಡುತ್ತಾನೆ. ಸರ್ಕಾರ ಹೆಕ್ಟೇರ್‌ಗೆ (ಒಂದು ಹೆಕ್ಟೇರ್ ಎಂದರೆ 2.5 ಎಕರೆ) 1 ಸಾವಿರದೊಳಗೆ ಪರಿಹಾರ ನೀಡಿತ್ತು. 2 ವರ್ಷಗಳಿಂದ ಪರಿಹಾರ ನೀಡಿಲ್ಲ. ಹಾಗಾಗಿ ರೈತರಿಗೆ ಜಿಂಕೆಗಳದ್ದೆ ದೊಡ್ಡ ಸಮಸ್ಯೆಯಾಗಿದೆ.
ಒಂದೆಡೆ ಬಿತ್ತನೆಯಾದರೆ ಸಮಸ್ಯೆ: ಪ್ರತಿ ಬಾರಿಯೂ ಜಿಲ್ಲಾದ್ಯಂತ ಒಮ್ಮೆಲೇ ಉತ್ತಮ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲ ರೈತರು ಬಿತ್ತನೆ ಮಾಡುತ್ತಿದ್ದರು. ಇದರಿಂದ ಜಿಂಕೆಗಳು ಎಲ್ಲ ರೈತರ ಹೊಲಗಳಿಗೂ ದಾಳಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರೈತರಿಗೂ ಸ್ವಲ್ಪ ತೊಂದರೆಯಾಗುತ್ತಿತ್ತು. ಆದರೆ, ಮಳೆ ಒಂದೇ ಭಾಗದಲ್ಲಿ ಆಗಿರುವುದರಿಂದ ಅಲ್ಲಿ ಮಾತ್ರ ಬಿತ್ತನೆಯಾಗಿದ್ದು, ಬಿತ್ತನೆಯಾಗಿರುವ ಪ್ರದೇಶಕ್ಕೆ ಜಿಂಕೆಗಳು ಒಮ್ಮೆಲೇ ಅಪಾರ ಸಂಖ್ಯೆಯಲ್ಲಿ ಲಗ್ಗೆ ಇಡುವುದರಿಂದ ಬೆಳೆ ಉಳಿಸಿಕೊಳ್ಳುವುದು ದುಸ್ತರ.
ಜಿಂಕೆ  ಲಕ್ಷಾಂತರ ಬೆಳೆ ಹಾನಿ: ನರೇಗಲ್ಲ ಭಾಗದಲ್ಲಿ ಜಿಂಕೆಗಳ ಹಾವಳಿ ತೀವ್ರವಾಗಿದ್ದು, ಇದರಿಂದ ರೈತರ ಹೊಲಗಳಲ್ಲಿನ ಬೆಳೆಗಳು ನಾಶವಾಗುತ್ತಿರುವುದಕ್ಕೆ ರೈತಾಪಿ ವರ್ಗ ತೀವ್ರ ಆತಂಕ ವ್ಯಕ್ತಪಡಿಸಿದೆ. ಈಚೆಗೆ ಇಲ್ಲಿನ ಶಶಿಧರ ಓದುಸುಮಠ ಎಂಬುವವರು ಹೊಲಕ್ಕೆ ನುಗ್ಗಿದ ಚಿಗರೆಗಳ ಆವಾಂತರದಿಂದ ಲಕ್ಷಾಂತರ ಬೆಳೆ ಹಾನಿ ಸಂಭವಿಸಿದೆ. ಓದುಸುಮಠ ಅವರ 6 ಎಕರೆ ಜಮೀನಿನಲ್ಲಿ ಹತ್ತಿ ಪ್ಲಾಟ್‌ನ್ನು (ಸೀಡ್ಸ್ ಪ್ರೊಡಕ್ಷನ್) ಮತ್ತು ಎರಡು ಎಕರೆ ಜಮೀನಿನಲ್ಲಿ ಹೆಸರನ್ನು ಬಿತ್ತಿದ್ದರು. ಎರಡೂ ಬೆಳೆಗಳು ಜಿಂಕೆಗಳಿಗೆ ಆಹುತಿಯಾಗಿದ್ದು, ರೈತ ಸಂಕಷ್ಟದಲ್ಲಿದ್ದಾನೆ.
ಜಿಂಕೆಗಳ ದೊಡ್ಡ ಗುಂಪು: 40ರಿಂದ 50 ಜಿಂಕೆಗಳಿರುವ ದೊಡ್ಡ ಗುಂಪು ಈ ಭಾಗದಲ್ಲಿದೆ. ಇಲ್ಲಿನ ಎಲ್ಲ ಹೊಲಗಳಲ್ಲಿನ ಬೆಳೆಗಳನ್ನು ಜಿಂಕೆಗಳು ತಿಂದು ಹಾಕುತ್ತಿವೆ. ಜಿಂಕೆ ಹಾವಳಿ ತಡೆಯುವುದು ಇಲ್ಲಿನ ರೈತರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ಹೊಲಗಳಲ್ಲಿ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿ ಪರಿಹಾರ ಕಲ್ಪಿಸಿ ಎಂದರೆ ಅರಣ್ಯಾಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಾರೆ ಎಂದು ರೈತ ಮುಖಂಡ ಗಂಗಾಧರ ಕೊಟಗಿ ಆರೋಪಿಸಿದ್ದಾರೆ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್