ಧಾರವಾಡ: ಶಾಸನ ವರದಿಗಳಲ್ಲಿ ಮತ್ತು ಸಂಪುಟಗಳಲ್ಲಿ ಗದಗ ಜಿಲ್ಲೆಯಲ್ಲಿ 40 ಶಾಸನಗಳನ್ನು ಗುರುತಿಸಲಾಗಿದ್ದು, ಈಚೆಗೆ ಗದಗ ಶಹರದಲ್ಲಿ ಮತ್ತೆ ಮೂರು ಶಾಸನಗಳು ಪತ್ತೆಯಾಗಿವೆ ಎಂದು ಶಾಸನ ಸಂಶೋಧಕಿ ಹನುಮಾಕ್ಷಿ ಗೋಗಿ ತಿಳಿಸಿದ್ದಾರೆ.
ಈಚೆಗೆ ಶಾಸನಗಳ ಪರಿವೀಕ್ಷಣೆಗೆ ಹೋದಾಗ ಸರಸ್ವತಿ ದೇವಾಲಯ ಹಿಂಭಾಗದ ಭಿತ್ತಿ ಮೇಲೆ ಕಾಜೋಜನ ಗ್ರಿಹ ಎಂದು 12ನೇ ಶತಮಾನದ ಅಕ್ಷರಗಳಲ್ಲಿ ಬರೆಯಲಾದ ಶಾಸನ ಸಿಕ್ಕಿದೆ. ಬಹುಶಃ ಕಾಜೋಜ ಎನ್ನುವ ರೂವಾರಿ ದೇವಸ್ಥಾನದ ಈ ಭಾಗವನ್ನು ರೂಪಿಸಿರುವ ಕಾರಣ ತನ್ನ ಹೆಸರನ್ನು ಕೆತ್ತಿರಬಹುದು. ಬೆಟಗೇರಿ ಜರ್ಮನ್ ಆಸ್ಪತ್ರೆ ಆವರಣದಲ್ಲಿ ಬಿದ್ದಿದ್ದ ಕಲ್ಲನ್ನು ಈಚೆಗೆ ಲಕ್ಕುಂಡಿ ವಸ್ತು ಸಂಗ್ರಹಾಲಯದಲ್ಲಿ ತಂದಿಟ್ಟಿದ್ದು, ಅದನ್ನು 12ನೇ ಶತಮಾನದ ಅಕ್ಷರಗಳಲ್ಲಿ ಬರೆದಿದೆ. ಆ ಕಾಲದಲ್ಲಿ ದೇವಸ್ಥಾನದ ಕೆಲವು ಕಂಬಗಳ ಮೇಲೆ ನಿರ್ದಿಷ್ಟ ದಿನ ಸೂರ್ಯನ ಕಿರಣಗಳು ಬೀಳುತ್ತಿದ್ದವು. ಹಾಗೆಯೇ ಆಯಾ ಕೋನಗಳಲ್ಲಿ ಕಂಬಗಳನ್ನು ನಿಲ್ಲಿಸುತ್ತಿದ್ದರು. ಅವುಗಳನ್ನು ಕಿರಣದ ಕಂಬಗಳೆಂದೇ ಗುರುತಿಸಲಾಗುತ್ತಿತ್ತು ಎಂದು ಗೋಗಿ ತಿಳಿಸಿದ್ದಾರೆ.
ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬಿದ್ದ ಶಾಸನ ಕರಿಕಲ್ಲಿನ ಮೇಲೆ ಕೆತ್ತಲಾಗಿದೆ. ಪೂರ್ಣ ಮೇಲಿನ ತೀರ್ಥಂಕರನ ವಿಗ್ರಹ, ಸೂರ್ಯ-ಚಂದ್ರರ ಉಬ್ಬು ಶಿಲ್ಪಗಳಿರುವ ಭಾಗವನ್ನು ಒಡೆದು ಹಾಕಲಾಗಿದೆ. ಕಲ್ಲಿನ ಬಲ ಭಾಗದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಆಕಳು ಮತ್ತು ಖಡ್ಗಗಳ ಉಬ್ಬು ಶಿಲ್ಪಗಳಿವೆ. ಈ ಉಬ್ಬು ಶಿಲ್ಪಗಳ ಪಕ್ಕ 3 ಸಾಲುಗಳ ಶಾಸನವಿದೆ ಎಂದು ಗೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.