ಧಾರವಾಡ

ಸಿದ್ದಿಗಳ ನಿಕೃಷ್ಟ ಜೀವನ

-ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 30
ಇವರದು ತಲೆತಲಾಂತರದಿಂದ ಕಾಡಲ್ಲೇ ವಾಸ. ಓದು-ಬರಹ ಗೊತ್ತಿಲ್ಲ. ಕೃಷಿ ಹಾಗೂ ಅರಣ್ಯ ಕೂಲಿ ಹಾಗೂ ದನ-ಕರುಗಳನ್ನು ಸಾಕಿಕೊಂಡು ಬರುವ ಅಲ್ಪ ಆದಾಯದಲ್ಲೇ ಜೀವನದ ಬಂಡಿ ನೂಕುತ್ತಾರೆ...
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಅರಣ್ಯ ಪ್ರದೇಶದ ಬೈಚವಾಡ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ನಿಕೃಷ್ಟ ಜೀವನ ನಡೆಸುತ್ತಿರುವ ಸಿದ್ದಿ ಜನಾಂಗದ ನೈಜ ಸ್ಥಿತಿ ಇದು.
ಸಮಸ್ಯೆಗಳು: ಸುಮಾರು 200 ವರ್ಷಗಳಿಂದ ಅರಣ್ಯ ಭೂಮಿಯಲ್ಲಿಯೇ ಬದುಕುತ್ತಿರುವ ಅವರಿಗೆ ವಸತಿ ಸೌಲಭ್ಯವಿಲ್ಲ. ಅತಿಕ್ರಮಣ ಜಮೀನು ಮಂಜೂರಿ ಮಾಡಿಕೊಡಬೇಕು ಎಂದು ಹತ್ತಾರು ವರ್ಷಗಳಿಂದ ಸರ್ಕಾರದ ದುಂಬಾಲು ಬಿದ್ದಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮೂಲ ಸೌಕರ್ಯಗಳ ಹಕ್ಕಿಗಾಗಿ ನಡೆಸಿದ ಹೋರಾಟಗಳು ಲೆಕ್ಕಕ್ಕಿಲ್ಲ. ಇತ್ತೀಚೆಗೆ ಅರಣ್ಯ ಇಲಾಖೆ ಬೈಚವಾಡದ ಸಿದ್ದಿ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದು ಇನ್ನಷ್ಟು ಚಿಂತೆಗೀಡು ಮಾಡಿದೆ.
ಎಸ್ಟಿಗೆ ಸೇರಿಸಿ: ಬೈಚವಾಡದ ಸಿದ್ದಿ ಜನಾಂಗ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ. ಕಾರಣ, ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ಈ ಜನಾಂಗವನ್ನು ಮುಸ್ಲಿಂ ಸಿದ್ದಿಗೆ ಸೇರಿಸಲಾಗಿದೆ. ಧಾರವಾಡದ ಬೈಚವಾಡ ಹಾಗೂ ಬೆಳಗಾವಿ ಖಾನಾಪುರದಲ್ಲಿರುವ ಸಿದ್ದಿ ಜನಾಂಗ ಹೊರತುಪಡಿಸಿ ಸಿದ್ದಿ ಜನಾಂಗವನ್ನು ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಈ ಕಾರಣದಿಂದ ಬೈಚವಾಡ ಹಾಗೂ ಖಾನಾಪುರದ ಸಿದ್ದಿ ಜನಾಂಗ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿವೆ. ತಮ್ಮನ್ನೂ ಎಸ್ಟಿಗೆ ಸೇರಿಸಬೇಕೆಂದು ನಡೆಸಿದ ಹೋರಾಟಗಳಿಗೆ ಬೆಲೆ ಇಲ್ಲದಂತಾಗಿದೆ.
ನಿಕೃಷ್ಟ ಜೀವನ: ಪ್ರಸ್ತುತ ಬೈಚವಾಡದಲ್ಲಿರುವ ಸಿದ್ದಿಗಳು ಪಡಿತರ ತರಲು, ಆಸ್ಪತ್ರೆಗೆ ದೂರದ ದೇವಿಕೊಪ್ಪ ಅಥವಾ ಕಲಘಟಗಿಗೆ ಹೋಗಬೇಕು. ರಸ್ತೆ, ಸಾರಿಗೆ ವ್ಯವಸ್ಥೆ ಇಲ್ಲ. ಗುಡಿಸಲುಗಳಲ್ಲಿ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು. ಪುರುಷರು ದೂರದ ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೂಲಿಗೆ ಹೋಗಿರುತ್ತಾರೆ. ಈ ಜನಾಂಗ ಶಿಕ್ಷಣ ಕ್ಷೇತ್ರದಲ್ಲಿ ಒಬ್ಬ ವಿದ್ಯಾರ್ಥಿಯೂ ಎಸ್ಸೆಸ್ಸೆಲ್ಸಿ ದಾಟಿಲ್ಲ. ಇಂದು-ನಾಳೆ ಬೀಳುವ ಸ್ಥಿತಿಯಲ್ಲಿ ಅಂಗನವಾಡಿ ಕೇಂದ್ರವಿದ್ದು, ಅಪೌಷ್ಟಿಕತೆ ಮಕ್ಕಳನ್ನು ಕಾಡುತ್ತಿದೆ.

ನಮಗೇನೂ ಬದುಕಲು ಹಕ್ಕಿಲ್ಲವೇ? ನಮ್ಮ ಜನಾಂಗದ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಸರ್ಕಾರ ನಿರ್ಲಕ್ಷಿಸುತ್ತಿದೆ. ಹಿರಿಯರ ಕಾಲದಿಂದ ಇಲ್ಲಿಯೇ ಬದುಕಿದ್ದರೂ ಭೂಮಿ ನಮ್ಮದಾಗುತ್ತಿಲ್ಲ. ಕೂಲಿ ಮಾಡಿಯೇ ಬದುಕಬೇಕಾದ ಕಾರಣ ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿಲ್ಲ. ರೇಷನ್ ಕಾರ್ಡ್, ಆಸ್ಪತ್ರೆ, ಬಸ್ಸಿಲ್ಲ. ಎಸ್ಟಿ ಪಂಗಡಕ್ಕೆ ಸೇರಿಸಿದರೆ ತುಸು ಸೌಲಭ್ಯಗಳು ದೊರೆಯುತ್ತವೆ. ಆ ಮೂಲಕವಾದರೂ ಸಿದ್ದಿ ಜನಾಂಗ ಮುಂದೆ ಬರಲಿ. ಸರ್ಕಾರ ನಮ್ಮತ್ತ ತುಸು ತಿರುಗಿ ನೋಡಿ ಕರುಣೆ ತೋರಬೇಕು.
-ಉಮರ ಸಿದ್ದಿ

ಪ್ರಪಂಚದಲ್ಲೇ ಅತ್ಯಂತ ಶೋಷಣೆಗೆ ಒಳಗಾದ ನಮ್ಮ ಜನರನ್ನು ಗುಲಾಮಗಿರಿಗಾಗಿ ಸ್ವಾತಂತ್ರ್ಯಪೂರ್ವ ಭಾರತಕ್ಕೆ ತರಲಾಗಿದೆ. ನಮ್ಮ ಸಂತೋಷ, ಸಂಸ್ಕೃತಿ, ಜನಪದ ಸಂಪ್ರದಾಯ, ಉಡುಗೆ-ತೊಡುಗೆ, ನೃತ್ಯ ಎಲ್ಲವೂ ನಾಶವಾಗುತ್ತಿದೆ. ಸಿದ್ದಿ ಜನಕ್ಕೆ ತಮ್ಮದೆ ದೇವರು, ಸಂಸ್ಕೃತಿ ಇಲ್ಲವಾಗಿದ್ದು, ತಮ್ಮನ್ನಿಟ್ಟು ಆಳುತ್ತಿರುವ ಧಣಿಗಳ ಧರ್ಮ ಸ್ವೀಕರಿಸುವ ಅನಿವಾರ್ಯ ಉಂಟಾಗಿದೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಸಿದ್ದಿ ಜನಾಂಗಕ್ಕೆ ಸೌಲಭ್ಯ ಒದಗಿಸಿ ಪುಣ್ಯ ಕಟ್ಟಿಕೊಳ್ಳಲಿ.
-ಕುನಸುಂಬಿ ಗುಂಜಾವತಿ, ಸಿದ್ದಿ ಜನಾಂಗದ ಸದಸ್ಯೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!