ಧಾರವಾಡ

ಹಳ್ಳ ಹಿಡಿದ ಕಸ ಸಂಗ್ರಹ ಯೋಜನೆ

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 19
ಮಹಾನಗರವನ್ನು ಕಸಮುಕ್ತವನ್ನಾಗಿಸುವ ಉದ್ದೇಶದಿಂದ ಪ್ರಾರಂಭಗೊಂಡಿದ್ದ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಬಹುತೇಕ ವಿಫಲಗೊಂಡಿದೆ.
ಇದರೊಂದಿಗೆ ಕಂಟೇನರ್ಗಳೂ ನಾಪತ್ತೆಯಾಗಿರುವ ಕಾರಣ ಅವಳಿ ನಗರದ ಹೆಚ್ಚಿನ ಪ್ರದೇಶದಲ್ಲಿ ಮೊದಲಿನಂತೆ ಕಸದ ತೊಟ್ಟಿಗಳು ತಲೆ ಎತ್ತುತ್ತಿವೆ. ಬಿಡಾಡಿ ದನ, ನಾಯಿ, ಹಂದಿಗಳಿಂದಾಗಿ ಕಸ ಮುಖ್ಯ ರಸ್ತೆಯನ್ನೂ ಆವರಿಸುತ್ತಿದ್ದು, ಅಕ್ಕಪಕ್ಕದ ಮನೆಗಳಿಗೂ ನುಗ್ಗುತ್ತಿದೆ. ಕಸದ ಗಬ್ಬು ವಾಸನೆ ಎಲ್ಲೆಡೆ ಹರಡುವ ಭೀತಿ ಜನತೆಯಲ್ಲಿ ಮನೆಮಾಡಿದೆ. ಈ ಹಿಂದಿನ ಅವಧಿಯ ಮೇಯರ್ ಡಾ. ಪಾಂಡುರಂಗ ಪಾಟೀಲ ಆಡಳಿತದಲ್ಲಿ ಜಾರಿಗೊಂಡಿದ್ದ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಬಲಿಯಾಗಿದ್ದು ಅಧಿಕಾರಿಗಳ ನಿಷ್ಕಾಳಜಿಗೆ.
ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವ ವೇಳೆ ಅಧಿಕಾರಿಗಳು ಮಾಡಿದ್ದೇ ಆಟವೆನ್ನುವಂತಾಗಿತ್ತು. ಈ ಅವಧಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವಂಥ ಮಹತ್ವದ ಯೋಜನೆ ಜನಪ್ರತಿನಿಧಿಗಳ ಆಡಳಿತದೊಂದಿಗೆ ಕೊನೆಗೊಂಡಂತಾಯಿತು.
2013ರ ಮಾರ್ಚ್ನಲ್ಲಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು, ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿತ್ತು. ಅಂದಿನಿಂದ ಮೊನ್ನೆ ಮೊನ್ನೆಯವರೆಗೂ ಪಾಲಿಕೆಯಲ್ಲಿದ್ದದ್ದು ಅಧಿಕಾರಿಗಳದ್ದೇ ಆಡಳಿತ.
ಮೇಯರ್ ಡಾ. ಪಾಂಡುರಂಗ ಪಾಟೀಲ ಅವಳಿ ನಗರವನ್ನು ಕಸಮುಕ್ತವನ್ನಾಗಿಸುವ ಉದ್ದೇಶದಿಂದ ತಮ್ಮ ಆಡಳಿತಾವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು. ಪೌರ ಕಾರ್ಮಿಕರಿಗೆ ಕಸ ಸಾಗಿಸಲು ಕೈಗವಸು ಮತ್ತಿತರ ವಸ್ತುಗಳನ್ನೂ ಆ ಸಂದರ್ಭದಲ್ಲಿ ನೀಡಲಾಗಿತ್ತು. ಕೆಲ ವಾರ್ಡ್ಗಳಲ್ಲಿ ಖಾಸಗಿಯವರಿಗೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಜವಾಬ್ದಾರಿಯನ್ನೂ ವಹಿಸಿಕೊಡಲಾಗಿತ್ತು.
ಕಳೆದ ಆಡಳಿತಾವಧಿಯ ಕೊನೆಯ ಮೇಯರ್ ಆಗಿದ್ದ ಡಾ. ಪಾಂಡುರಂಗ ಪಾಟೀಲ ಅಧಿಕಾರದಲ್ಲಿರುವವರೆಗೂ ಈ ಯೋಜನೆ ಜಾರಿಯಲ್ಲಿತ್ತು. ಆಗಲು ಸಹ ಅವಳಿ ನಗರದ ಎಲ್ಲ ವಾರ್ಡ್ಗಳಿಗೆ ಈ ಯೋಜನೆ ವಿಸ್ತರಿಸಿರಲಿಲ್ಲವಾದರೂ, ಮುಂದಿನ ದಿನಗಳಲ್ಲಿ ಯೋಜನೆ ಎಲ್ಲ ವಾರ್ಡ್ಗಳಿಗೆ ಪರಿಣಾಮಕಾರಿಯಾಗಿ ವಿಸ್ತರಿಸಬಹುದೆಂದು ಅಂದಾಜಿಸಲಾಗಿತ್ತು.
ಆದರೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಗೊಂಡು ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿದ್ದೇ ತಡ, ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ವಿಸ್ತಾರಗೊಳ್ಳುವ ಬದಲು ಒಂದೊಂದೇ ಪ್ರದೇಶದಿಂದ ಕಾಲ್ಕೀಳುತ್ತ ಬಂದಿತು. ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದಾಗ ಜಾರಿಗೊಂಡು ಈ ಮನೆ ಮನೆಯಿಂದ ಕಸ ಸಂಗ್ರಹಿಸುವ ಪ್ರಮುಖ ಯೋಜನೆಯನ್ನು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗಬೇಕಿದ್ದ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲವೆನ್ನುವಂತೆ ವರ್ತಿಸಿದರು.
ಸದ್ಯ ಬೆರಳೆಣಿಕೆ ವಾರ್ಡ್ಗಳಲ್ಲಿ ಮಾತ್ರ ಯೋಜನೆ ಜಾರಿಯಲ್ಲಿದೆಯಾದರೂ, ಕೆಲವೆಡೆ ಪೌರ ಕಾರ್ಮಿಕರು ಎರಡೋ ಅಥವಾ ಮೂರು ದಿನಗಳಿಗೊಮ್ಮೆ ಬಂದು ಕಸ ಸಂಗ್ರಹಿಸುತ್ತಾರೆಂಬ ದೂರು ಸಾರ್ವಜನಿಕರದ್ದು. ಹೀಗಾಗಿ ಮನೆ ಸಮೀಪದ ಮರಗಳ ಸುತ್ತಲಿನ ಪ್ರದೇಶ ಕಸ ಹಾಕುವ ಕೇಂದ್ರವಾಗಿ ಮಾರ್ಪಡುತ್ತಿದೆ.
ಇದೀಗ ಮಹಾನಗರ ಪಾಲಿಕೆಯಲ್ಲಿ ಮತ್ತೆ ಜನಪ್ರತಿನಿಧಿಗಳ ಆಡಳಿತ ಪ್ರಾರಂಭಗೊಳ್ಳಲಿದ್ದು, ಇನ್ನಾದರೂ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಅವಳಿ ನಗರವನ್ನು ಕಸಮುಕ್ತವನ್ನಾಗಿಸಲು ಪ್ರಯತ್ನಿಸಬೇಕಿದೆ.
-ಆನಂದ ಅಂಗಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ