ಗದಗ

ಗದಗ ಚಿತ್ತ ಬಜೆಟ್‌ನತ್ತ

ಕನ್ನಡಪ್ರಭ ವಾರ್ತೆ, ಗದಗ, ಫೆ. 7
ಜನತೆಗೆ ಉತ್ತಮ ಬಜೆಟ್ ನೀಡಬೇಕೆಂಬ ಮಹಾದಾಸೆಯೊಂದಿಗೆ, ಕೆಜೆಪಿಯವರ ರಾಜಿನಾಮೆ ಗೊಂದಲ ಮಧ್ಯೆಯೇ ಶುಕ್ರವಾರ ಸಿಎಂ ಜಗದೀಶ ಶೆಟ್ಟರ್ ಬಜೆಟ್ ಮಂಡಿಸಲಿದ್ದಾರೆ.
ಈ ಬಜೆಟ್‌ನತ್ತ ರಾಜ್ಯದ ಜನತೆಯ ಗಮನ ಕೇಂದ್ರೀಕೃತವಾಗಿದ್ದು, ಅದರಲ್ಲಿಯೂ ಬರದ ನಾಡಾದ ಗದಗ ಜಿಲ್ಲೆಯ ಜನತೆಯ ದೃಷ್ಟಿ ಸಹಜವಾಗಿ ಬಜೆಟ್ ಮೇಲಿದೆ. ಹೊಸ ಯೋಜನೆಗಳೇನಾದರೂ ಜಿಲ್ಲೆಗೆ ಲಭ್ಯವಾಗಲಿವೆಯೋ ಎನ್ನುವ ಕುತೂಹಲ ಮೂಡಿಸಿದೆ.
ಹೆಚ್ಚಿನ ಕೊಡುಗೆ ಸಾಧ್ಯತೆ: ಬದಲಾದ ಪರಿಸ್ಥಿತಿಯಲ್ಲಿ 2008ರಲ್ಲಿ ಬಿಜೆಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆಯನ್ನು ಮಾಡಿತ್ತು. ಆದರೆ, ಬಿಎಸ್‌ವೈ ಬಿಜೆಪಿಯಿಂದ ಸಿಡಿದು ಬಂದು ಕೆಜೆಪಿ ಸ್ಥಾಪನೆ ಮಾಡಿದ್ದಾರೆ. ಬಿಎಸ್‌ವೈ ಗದಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದು, 4 ಶಾಸಕರಲ್ಲಿ ಮೊದಲು 3 ಜನ ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ನಂತರ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾತ್ರ ಬಿಜೆಪಿಯಲ್ಲಿ ಉಳಿಯುವುದಾಗಿ ರಾಗ ಬದಲಿಸಿದ್ದು, ಇಂದಿಗೂ ಇಬ್ಬರು ಶಾಸಕರು ಕೆಜೆಪಿಗೆ ಹೋಗುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಕೆಜೆಪಿಗೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಯೋಜನೆಗಳು ಲಭ್ಯವಾಗಲಿವೆ ಎನ್ನುವ ನಿರೀಕ್ಷೆ ಹೆಚ್ಚಿದೆ.
ವೈದ್ಯಕೀಯ ಕಾಲೇಜಿಗೆ ಸೌಲಭ್ಯ: ಈಚೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಸರ್ಕಾರ ರಾಜ್ಯದಲ್ಲಿ ನೂತನ 7 ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದೆ. ಅದರಲ್ಲಿ ಗದಗ ಜಿಲ್ಲೆಯಲ್ಲಿಯೂ ಪ್ರಸಕ್ತ ಸಾಲಿನಿಂದಲೇ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಸೂಚನೆ ನೀಡಿದ್ದು, ಇದಕ್ಕಾಗಿ 400 ಹಾಸಿಗೆಯ ಆಸ್ಪತ್ರೆ ನೂತನ ಕಟ್ಟಡ ಸಿದ್ಧವಾಗಿದೆ. ಆದರೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬೇಕಾಗುವ ಯಾವುದೇ ಸಲಕರಣೆಗಳು ಅಲ್ಲಿ ಲಭ್ಯವಿಲ್ಲ. ಹಾಗಾಗಿ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಸೌಲಭ್ಯಕ್ಕೆ ವಿಶೇಷ ಅನುದಾನ ಮೀಸಲಿಟ್ಟಲ್ಲಿ ಹೆಚ್ಚಿನ ಅನುಕೂಲವಾಗಲಿದೆ.
ಶೈತ್ಯಾಗಾರ ಸ್ಥಾಪನೆಯಾಗಲಿ: ಕಳೆದ 10 ವರ್ಷದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಈರುಳ್ಳಿ ಬೆಳೆವ ಜಿಲ್ಲೆಯಾಗಿ ಹೊರಹೊಮ್ಮಿರುವ ಗದಗ ಜಿಲ್ಲೆಯ ರೈತರು ಪ್ರತಿ ವರ್ಷವೂ ಈರುಳ್ಳಿ ಬೆಲೆಯಲ್ಲಿ ತೀವ್ರ ಏರಿಳಿತದಿಂದ ಅಪಾರ ಪ್ರಮಾಣದ ಹಾನಿ ಅನುಭವಿಸುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾ ಕೇಂದ್ರ ಸೇರಿದಂತೆ ಈರುಳ್ಳಿಯನ್ನು ಹೆಚ್ಚಾಗಿ ಬೆಳೆವ ರೋಣ ಹಾಗೂ ಮುಂಡರಗಿ ತಾಲೂಕಿನಲ್ಲಿ ಅತ್ಯುತ್ತಮ ಗುಣಮಟ್ಟದ ಶೈತ್ಯಾಗಾರವನ್ನು ನಿರ್ಮಿಸಲು ಆದ್ಯತೆ ನೀಡಬೇಕಿದೆ. ಇದು ಹಲವಾರು ವರ್ಷದ ಬೇಡಿಕೆಯಾಗಿದ್ದು, ಇಂದಿಗೂ ಅದು ಸಾಕಾರಗೊಂಡಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅದಕ್ಕೆ ಸಿಎಂ ಆದ್ಯತೆ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಜಿಲ್ಲೆಯ 2 ಸಾವಿರಕ್ಕೂ ಹೆಚ್ಚಿನ ರೈತರು ಪುಷ್ಪೋದ್ಯಮವನ್ನು ನಂಬಿದ್ದು, ಅವರಿಗೂ ಅಂತರ್ ರಾಷ್ಟ್ರೀಯ ಗುಣಮಟ್ಟದ ಶೈತ್ಯಾಗಾರ ಬೇಕು ಎನ್ನುವುದು ರೈತರ ಒಕ್ಕೋರಲಿನ ಬೇಡಿಕೆಯಾಗಿದ್ದು, ಈ ಕುರಿತು ರೈತರು ಆಳುವ ವರ್ಗಕ್ಕೆ ಮನವಿ ಸಲ್ಲಿಸಿ ಸುಸ್ತಾಗಿ ಹೋಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಾದರೂ ಅದು ಸಾಕಾರಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನುವ ಮಾತು ಈಗಾಗಲೇ ಕೇಳಿ ಬರುತ್ತಿದೆ. ಇನ್ನು ಗದಗ-ಹುಬ್ಬಳ್ಳಿ ಮಧ್ಯೆಯ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವ ಕನಸು ಮತ್ತೊಮ್ಮೆ ಚಿಗುರಿದೆ. ಈ ವಿಷಯವನ್ನು ಸಿಎಂ ಶೆಟ್ಟರ್ ಅವರೇ ಗದಗಕ್ಕೆ ಭೇಟಿ ನೀಡಿದಾಗ ಪ್ರಸ್ತಾಪಿಸಿ ಹೋಗಿದ್ದು, ಈ ಯೋಜನೆ ಪ್ರಸಕ್ತ ಬಜೆಟ್‌ನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನು ಜಿಲ್ಲೆಯ ಗಜೇಂದ್ರಗಡ ಹಾಗೂ ಲಕ್ಷ್ಮೇಶ್ವರ ಪಟ್ಟಣಗಳು ತಾಲೂಕು ಕೇಂದ್ರಗಳಾಗಬೇಕು ಎನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕಾಗಿ ಎರಡೂ ಪಟ್ಟಣಗಳಲ್ಲಿ ಈಗಾಗಲೇ ವಿಶೇಷ ತಹಸೀಲ್ದಾರ್ ಕಚೇರಿಗಳು ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೂತನ ತಾಲೂಕು ಕೇಂದ್ರಗಳ ಘೋಷಣೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಅನುದಾನವನ್ನು ಸಿಎಂ ಶೆಟ್ಟರ್ ಮೀಸಲಿಡುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಜಿಲ್ಲೆಯ ಜನತೆ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಮುಖ್ಯವಾಗಿ ಸಿಎಂ ಶೆಟ್ಟರ್ ಉತ್ತರ ಕರ್ನಾಟಕದವರಾಗಿದ್ದು, ಅವರ ಸರ್ಕಾರದ ಕೊನೆಯ ಬಜೆಟ್ ಮಂಡಿಸುತ್ತಿದ್ದು, ಸಹಜವಾಗಿ ಉತ್ತರ ಕರ್ನಾಟಕದ ಹಿಂದುಳಿದ ವರ್ಗದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಹಾಗೂ ಯೋಜನೆಗಳು ಲಭ್ಯವಾಗಲಿವೆ ಎನ್ನುವ ನೀರಿಕ್ಷೆಯನ್ನು ಜನತೆ ಹೊಂದಿದ್ದಾರೆ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!