ಕನ್ನಡಪ್ರಭ ವಾರ್ತೆ, ಗದಗ, ಫೆ. 9
ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಇದಕ್ಕೆ ಇಂದು ನೂತನವಾಗಿ ನಿರ್ಮಾಣವಾಗಿರುವ ಗದಗ ಪ್ರಾದೇಶಿಕ ಸಾರಿಗೆ ಕಚೇರಿಯ ಕಟ್ಟಡವೇ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಶನಿವಾರ ನಗರದ ಮುಳಗುಂದ ರಸ್ತೆಯಲ್ಲಿ ನಿರ್ಮಾಣವಾಗಿರುವ ನೂತನ ಗದಗ ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸುಮಾರು 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿರುವ ಈ ಗದಗ ಪ್ರಾದೇಶಿಕ ಸಾರಿಗೆ ಕಚೇರಿಯ ಕಾಮಗಾರಿಯನ್ನು ಕೇವಲ 2 ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ. ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ 5 ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹಲವು ರೀತಿಯ ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ ಎಂದರು.
ಈಗಾಗಲೇ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಡಿಪ್ಲೋಮಾ ಕಾಲೇಜು, ನೂತನ ಸರ್ಕಾರಿ ಆಸ್ಪತ್ರೆ ಅಲ್ಲದೇ ರಸ್ತೆ ಅಭಿವೃದ್ಧಿಗೆ ನೂರಾರು ಕೋಟಿ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಕೇವಲ ರೋಣ ಮತಕ್ಷೇತ್ರಕ್ಕೆ ರಸ್ತೆ ಅಭಿವೃದ್ಧಿಗಾಗಿ ರು. 200 ಕೋಟಿ, ಕುಡಿವ ನೀರಿನ ಯೋಜನೆಗಾಗಿ ರು. 200 ಕೋಟಿ ಬಿಡುಗಡೆ ಮಾಡಲಾಗಿದೆ. ಹೀಗೆಯೇ ಜಿಲ್ಲೆಯ ಎಲ್ಲ ಮತಕ್ಷೇತ್ರಗಳಿಗೂ ನೂರಾರು ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
4 ಶಾಸಕರೂ ಮತ್ತೆ ಅಧಿಕಾರಕ್ಕೆ: ಈಚೆಗೆ ಹುಟ್ಟಿಕೊಂಡಿರುವ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿಲ್ಲ. ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತನ್ನ 5 ವರ್ಷದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಆದ್ದರಿಂದ ಜನತೆ ಮುಂಬರುವ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಲಿದ್ದು, ಜಿಲ್ಲೆಯ 4 ಶಾಸಕರೂ ಮತ್ತೆ ಅಧಿಕಾರಕ್ಕೆ ಬರುವುದು ಖಂಡಿತ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ರು. 3.36 ಕೋಟಿಯಲ್ಲಿ ನಿರ್ಮಾಣವಾಗಿರುವ ಈ ನೂತನ ಗದಗ ಪ್ರಾದೇಶಿಕ ಸಾರಿಗೆ ಕಚೇರಿಯು ಉತ್ತಮವಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹಕರಿಸುವ ಮೂಲಕ ಉತ್ತಮ ಕೆಲಸ ನಿರ್ವಹಿಸಿಕೊಂಡು ಹೋಗಬೇಕು. ಜನತೆಯಿಂದ ಚುನಾಯಿತರಾಗಿರುವ ನಾವೆಲ್ಲರೂ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ನೀಡಬೇಕು. ಇದರಿಂದ ಮಾತ್ರ ಜನತೆ ನಮ್ಮನ್ನು ಮುಂದಿನ ದಿನಗಳಲ್ಲಿ ಗುರುತಿಸುವರು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸಾರಿಗೆ ಇಲಾಖೆಯ ಧಾರವಾಡದ ಜಂಟಿ ಸಾರಿಗೆ ಆಯುಕ್ತ ಸಿ.ಆರ್. ಮಹ್ಮದ್ ಸುಲೇಮಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಕೃಷ್ಣ ಹೊಂಬಾಳಿ, ಎಸ್.ಎಂ. ಪಾಟೀಲ, ಆರ್.ಡಿ. ಕೊಂಡಿಕೊಪ್ಪ, ಸಿ.ಆರ್. ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು. ನರೇಂದ್ರ ಹೊಳ್ಕರ ಸ್ವಾಗತಿಸಿದರು. ಕವಿತಾ ದಂಡಿನ ನಿರೂಪಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪುರುಷೋತ್ತಮ ವಂದಿಸಿದರು.