ಗದಗ: ರಾಜ್ಯದಲ್ಲಿ ಸತತವಾಗಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ವಿರೋಧಿಸಿ ಹಾಗೂ ಅತ್ಯಾಚಾರಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಂಗಳವಾರ ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ಸರ್ಕಾರ ಹಾಗೂ ಗೃಹ ಸಚಿವರು ಯಾವುದೇ ರೀತಿಯಲ್ಲಿ ರಾಜ್ಯದ ಜನರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಪ್ರತಿಭಟನಾ ನಿರತರ ಮೇಲೆ ಗೂಂಡಾಗಿರಿ, ಪೊಲೀಸ್ ಬಲ ಪ್ರಯೋಗಿಸಿ ಅತ್ಯಾಚಾರಿಗಳ ವಿರುದ್ಧ ಹೋರಾಟ ನಡೆಸುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ತಕ್ಷಣವೇ ತನ್ನ ಜವಾಬ್ದಾರಿಯನ್ನು ಅರಿತು ಸಾಮಾಜಿಕ ಕಳಕಳಿಯನ್ನು ತೋರಿಸಬೇಕಾಗಿದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತರನ್ನು ಗೃಹ ಸಚಿವರು ಖುದ್ದು ಭೇಟಿ ಮಾಡಿ ನ್ಯಾಯವನ್ನು ಒದಗಿಸಬೇಕು. ಅತ್ಯಾಚಾರ ಪ್ರಕರಣಗಳ ಕುರಿತು ಕೇವಲ ಚರ್ಚೆ ಮಾತ್ರ ನಡೆಸದೇ ಕುಕೃತ್ಯವೆಸಗಿರುವವರ ಮೇಲೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವ ಸಾಮಾಜಿಕ ಭದ್ರತೆಯನ್ನು ತೋರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಲಾಗಿದೆ.
ಎಲ್ಲ ಶಾಲಾ, ಕಾಲೇಜು ಹಾಗೂ ವಿವಿ ಕ್ಯಾಂಪಸ್ಗಳಲ್ಲಿ ಮಹಿಳಾ ಸುರಕ್ಷಾ ಸಮಿತಿಯನ್ನು ರಚಿಸಲು ಆದೇಶಿಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿದ್ದು, ಮೈಲಾರಪ್ಪ ಚಲವಾದಿ, ಹನುಮಂತ ರಾಮಗಿರಿ, ಪ್ರಮೋದ ಶಾಲಗಾರ, ಶಿಲ್ಪಾ ಬಂಡಿಹಾಳ, ಶ್ರೀದೇವಿ ಮುದಗಲ್, ಸುಪ್ರೀಯಾ ಜಂಬಗಿ, ಜ್ಯೋತಿ, ಹೇಮಲತಾ, ಈಶ್ವರ ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.