ಖುದಿರಾಂ ಬೋಸ್ ಹುತಾತ್ಮ ದಿನಾಚರಣೆ
ಗುಲ್ಬರ್ಗ: ಬಡಜನರ ಬಗ್ಗೆ ಅಪಾರವಾದ ಪ್ರೀತಿ, ಕಳಕಳಿ ಇದ್ದರೆ ಮಾತ್ರ ಮಹಾನ್ ವ್ಯಕ್ತಿಯಾಗಲು ಸಾಧ್ಯ ಎಂದು ಎಐಡಿಎಸ್‌ಒ ರಾಜ್ಯಾಧ್ಯಕ್ಷ ವಿ.ಎನ್. ರಾಜಶೇಖರ ಹೇಳಿದರು. ಎಐಡಿಎಸ್‌ಒ ಜಿಲ್ಲಾ ಸಮಿತಿಯು ನಗರದ ಕನ್ನಡ ಭವನದಲ್ಲಿ ಅಗ್ನಿ ಯುಗದ ಹರಿಕಾರ ಖುದಿರಾಮ್ ಬೋಸ್ ಅವರ 105ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಖುದಿರಾಮ್ ಬೋಸ್ ಬ್ರಿಟಿಷರ ಕ್ರೂರ ದಬ್ಬಾಳಿಕೆ ಹಾಗೂ ಬ್ರಿಟಿಷ್ ಅಧಿಕಾರಿ ರೆಂಗ್ಸ್ ಫರ್ಡ್‌ರ ವಿರುದ್ಧ ಹೋರಾಡಿ ಅವರ ಮೇಲೆ ಬಾಂಬ್ ಎಸೆದು ಇಡೀ ಬ್ರಿಟಿಷರ ಸಾಮ್ರಾಜ್ಯವನ್ನು ನಡುಗಿಸಿದ ಮಹಾನ್ ವೀರ ಎಂದರು. ಗುವಿವಿ ಎಲ್‌ಎಲ್‌ಎಂ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದೇವಿದಾಸ್ ಮಾಲೆ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್ ಅಧ್ಯಕ್ಷತೆ, ನಗರ ಅಧ್ಯಕ್ಷ ಮಲ್ಲಿನಾಥ ಸಿಂಘೆ, ಕಾರ್ಯದರ್ಶಿ ಹಣಮಂತ, ಸದಸ್ಯರಾದ ಅಭಯ ದಿವಾಕರ್, ವಿಠ್ಠಲ್ ರಾಠೋಡ, ವೀರೇಶ, ಶರಣು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯುವತಿ ಮೇಲೆ ಅತ್ಯಾಚಾರ
ಗುಲ್ಬರ್ಗ: ಮದುವೆಯಾಗುವುದಾಗಿ ನಂಬಿಸಿ ಪ್ರಿಯತಮ ಯುವತಿಯ ಮೇಲೆ ಅತ್ಯಾಚಾರ ವೆಸಗಿ ಮದುವೆ ನಿರಾಕರಿಸಿದ ಘಟನೆ ಸೇಡಂ ತಾಲೂಕಿನ ಮಳಖೇಡನಲ್ಲಿ ನಡೆದಿದೆ. ಮಾದೇಶ ತಂದೆ ಹಣಮಂತ ಮರಪಳ್ಳಿ ಎಂಬಾತ ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಗಾಗ ಅತ್ಯಾಚಾರ ನಡೆಸಿದ್ದಾನೆ. ಬುಧವಾರ ಆತ ಮತ್ತೆ ಹೊಲದಲ್ಲಿ ಅತ್ಯಾಚಾರ ನಡೆಸಿದ್ದು, ಯಾವಾಗ ಮದುವೆ ಎಂದು ಯುವತಿ ಪ್ರಶ್ನಿಸಿದಾಗ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದಾ ಯುವತಿ ಪಾಲಕರಿಗೆ ವಿಷಯ ತಿಳಿಸಿ ಮಳಖೇಡ ಠಾಣೆಯಲ್ಲಿ ದೂರು ನೀಡಿ ಆತನ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾಳೆ.
ಅಹಿಂದಗೆ ಆಯ್ಕೆ
ಗುಲ್ಬರ್ಗ: ಕರ್ನಾಟಕ ರಾಜ್ಯ ಅಹಿಂದ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಎಚ್. ಪ್ರಕಾಶ ಅಧ್ಯಕ್ಷತೆಯಲ್ಲಿ ನಡೆದಜಿಲ್ಲೆಯ ಅಲ್ಪ ಸಂಖ್ಯಾತರ ಹಿಂದುಳಿದ ಮತ್ತು ದಲಿತ ನೌಕರರ(ಅಹಿಂದ) ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಹಾಬಾದ್ ಸರ್ಕಾರಿ ಪದವೀಧರ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಶಿವಪುತ್ರ ಕೋಣಿನ್ ಅವರನ್ನು ಅಹಿಂದ ಜಿಲ್ಲಾಧ್ಯಕ್ಷರಾಗಿ, ಭೀಮಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಠ್ಠಲ ವಗ್ಗನ ಪ್ರಧಾನ ಕಾರ್ಯದರ್ಶಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಲ್ಲಾವುದ್ದೀನ್ ಸಾಗರ ಅವರನ್ನು ಗೌರವಾಧ್ಯಕ್ಷರಾಗಿ, ಅಫಜಲ್ಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಪೂಜಾರಿಯನ್ನು ಖಜಾಂಚಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಮಸ್ತ ಜಿಲ್ಲೆಯ ಅಹಿಂದ ನೌಕರರ ಹಕ್ಕುಗಳಿಗಾಗಿ ಮತ್ತು ಅವರ ರಕ್ಷಣೆಗಾಗಿ ಕಾರ್ಯತತ್ಪರಾಗಲು ರಾಜ್ಯಾಧ್ಯಕ್ಷ ಸೂಚಿಸಿದರು.