ಗುರುಮಠಕಲ್: ಸಮೀಪದ ಸೈದಾಪುರದದಲ್ಲೇ ಉತ್ತಮ ಹಾಗೂ ವ್ಯವಸ್ಥಿತ ಬಡಾವಣೆ ಎಂದೇ ಹೆಸರಾಗಿದ್ದ ತಾಯಿ ಕಾಲನಿಯಲ್ಲಿ ಈಗ ಎಲ್ಲವೂ ಅವ್ಯವಸ್ಥೆ ತಾಂಡವಾಡುತ್ತಿದೆ. ಇಲ್ಲಿ ರಸ್ತೆ ಸುಧಾರಣೆ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದು ಚರಂಡಿಯ ನೀರೆಲ್ಲ ರಸ್ತೆಯ ಮೇಲೆ ಹರಿಯುವಂತಾಗಿದೆ.
ಚರಂಡಿಯ ನೀರು ಬೇರೆ ಕಡೆ ಹರಿಯಲು ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆ ಮೇಲೆ ನಿಂತಿವೆ. ಇದರಿಂದ ಸೊಳ್ಳೆ ಮತ್ತು ನೊಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕದಲ್ಲಿ ನಿವಾಸಿಗಳಿದ್ದಾರೆ. ಸಾರ್ವಜನಿಕರು ಹಾಗೂ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಚರಂಡಿಯ ನೀರಿನಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಸರಕುಗಳನ್ನು ಹೊತ್ತ ಚಿಕ್ಕ ವಾಹನವೂ ಸಾಗಲು ಅಸಾಧ್ಯವಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನಿವಾಸಿ ಶರಣಗೌಡ ಮಾಲಿಪಾಟೀಲ ಕ್ಯಾತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ರಸ್ತೆ ಹಾಗೂ ಚರಂಡಿ ಸುಧಾರಣಾ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ತಾಯಿ ಕಾಲನಿ ನಿವಾಸಿಗಳ ವತಿಯಿಂದ ಹೋರಾಟ ಮಾಡಲಾಗುವುದು ಎಂದು ವೆಂಕಟರೆಡ್ಡಿ ಮಾಲಿಪಾಟೀಲ, ಬನ್ನಯ್ಯ ಸ್ವಾಮಿ ಬದ್ದೇಪಲ್ಲಿ, ಶರಣಗೌಡ ದದ್ದಲ್, ದೇವಪ್ಪಗೌಡ ದುಪ್ಪಲ್ಲಿ, ಚಂದ್ರಯ್ಯಗೌಡ ಮಾಲಿಪಾಟೀಲ ಸೈದಾಪೂರ, ಬಸರೆಡ್ಡಿ ಸಾವೂರ ಎಚ್ಚರಿಸಿದ್ದಾರೆ.