ಗುಲ್ಬರ್ಗಾ

ರಾಜುಗೌಡರಿಲ್ಲದ ಜಿಲ್ಲಾ ಬಿಜೆಪಿಯಲ್ಲಿ ಅನಾಥಪ್ರಜ್ಞೆ

ಯಾದಗಿರಿ: ಜಿಲ್ಲಾ ಬಿಜೆಪಿಯಲ್ಲಿ ಈಗ ಅನಾಥಪ್ರಜ್ಞೆ ಕಾಡುತ್ತಿದೆ. ಸಚಿವ ರಾಜುಗೌಡ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು, ಶುಕ್ರವಾರ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಲಿದ್ದಾರೆ. ಅಲ್ಲದೇ ಅವರು ಕಾಂಗ್ರೆಸ್ ಸೇರುವುದೂ ನಿಶ್ಚಿತವಾಗಿದ್ದು, ಸದ್ಯ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆ ಬರಲಿದ್ದು ಜಿಲ್ಲಾ ಬಿಜೆಪಿಯಲ್ಲೀಗ ಗೊಂದಲ ಶುರುವಾಗಿದೆ.
  ಬಿಜೆಪಿ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗಲೇ ಅವರು ಪಕ್ಷ ತೊರೆಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ತಳಮಳ ಆರಂಭವಾಗಿದೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕರಾಗಿದ್ದ ಅವರು ಈಗ ಕಾಂಗ್ರೆಸ್ ಸೇರುತ್ತಿರುವುದು ಬಿಜೆಪಿಗೆ ತೀವ್ರ ಹೊಡೆತ ನೀಡಿದಂತಾಗಿದೆ.
  ಈಗಾಗಲೇ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಕೆಜೆಪಿಯು ಬಿಜೆಪಿಗೆ ಸಾಕಷ್ಟು ಹೊಡೆತ ನೀಡಿದ್ದು, ಈಗ ರಾಜುಗೌಡ ಕೂಡ ಆಪ್ತರನೇಕರ ಜೊತೆ ಹೊರನಡೆಯುತ್ತಿರುವುದು ಅಘಾತ ತಂದಿದೆ. ಆದ್ದರಿಂದ ಸಂಘಟನೆ ಬಲಗೊಳ್ಳಬೇಕಿದ್ದ ಚುನಾವಣಾ ಸಮಯದಲ್ಲಿ ಬಿಜೆಪಿಗೆ ಏನು ಮಾಡಬೇಕೆಂದು ತೋಚದಂತ ಸ್ಥಿತಿ ನಿರ್ಮಾಣವಾಗಿದೆ.
ದಿಢೀರ್ ನಿರ್ಧಾರವೇನಲ್ಲ: ರಾಜುಗೌಡರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರುತ್ತಾರೆಂಬ ಮಾತು ಕಳೆದ ಅನೇಕ ತಿಂಗಳಿಂದಲೇ ಹರಿದಾಡುತ್ತಿತ್ತು. ಕಾಂಗ್ರೆಸ್‌ನಿಂದ ಗ್ರೀನ್ ಸಿಗ್ನಲ್ ದೊರೆತ ತಕ್ಷಣ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ತಮ್ಮ ಆಪ್ತರಲ್ಲಿ ಅವರೂ ಹೇಳಿಕೊಂಡಿದ್ದರು. ಆದ್ದರಿಂದ ಬಿಜೆಪಿ ಸರ್ಕಾರದ ಮಂತ್ರಿಯಾಗಿದ್ದರೂ ಒಂದು ಕಾಲು ಹೊರಗಿಟ್ಟುಕೊಂಡೇ ಅವರು ರಾಜಕೀಯ ನಿರ್ಧಾರ ಕೈಗೊಳ್ಳುತ್ತಿದ್ದರು.
  ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರೆ ಮಾತ್ರ ಅವರು ಬಿಜೆಪಿಯಲ್ಲಿ ಉಳಿಯುವ ಸಾಧ್ಯತೆಯಿತ್ತು. ಇದೇ ಆಶಾಭಾವನೆಯಿಂದ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿದ್ದರು. ಆದರೆ ರಾಜುಗೌಡರು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಕಾಂಗ್ರೆಸ್‌ನಲ್ಲಿ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಅವರ ಈ ನಡೆ ಹಿಂದೆ ಅನೇಕ ಕಾರಣಗಳನ್ನು ಹುಡುಕಬಹುದು.
ಚತುರ ನಡೆ: ರಾಜುಗೌಡರ ಈ ಹಿಂದಿನ ರಾಜಕೀಯ ನಡೆಯನ್ನು ಗಮನಿಸಿದರೆ ಅವರೊಬ್ಬ ಅವಕಾಶವಾದಿ ರಾಜಕಾರಣಿ ಎಂಬುದು ಸಾಬೀತಾಗುತ್ತದೆ. ಬಿಜೆಪಿ ಶಾಸಕರಾಗಿದ್ದ 5 ವರ್ಷಗಳ ಅವಧಿಯಲ್ಲೇ ಅವರು ತಮ್ಮ ನಿಷ್ಠೆಯನ್ನು ಬದಲಿಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ಬಳ್ಳಾರಿ ರೆಡ್ಡಿ ಗುಂಪಿಗೆ ಆಪ್ತರಾಗಿದ್ದುಕೊಂಡು ತಮ್ಮ ಕೆಲಸ ಮಾಡಿಸಿಕೊಂಡಿದ್ದರು.
  ನಂತರ ಬಿಎಸ್‌ವೈ ನಾಯಕತ್ವದ ವಿರುದ್ಧ ಬಂಡಾಯವೆದ್ದಾಗ ಆರಂಭದಲ್ಲಿ ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಜನಾರ್ದನ ರೆಡ್ಡಿ ಸಾರಥ್ಯದಲ್ಲಿ ಬಿಎಸ್‌ವೈ ಗುಂಪಿಗೆ ಸೇರಿದರು. ಅಲ್ಲಿಂದ ಬಿಎಸ್‌ವೈ ಅವರಿಗೆ ಆಪ್ತರಾಗಿದ್ದುಕೊಂಡು ಇತ್ತೀಚಿನವರೆಗೂ ಅವರ ಹಿಂಬಾಲಕರಾಗಿಯೇ ಉಳಿದರು. ಇದೇ ಆಧಾರದಲ್ಲಿ ಸದಾನಂದಗೌಡ ಹಾಗೂ ಶೆಟ್ಟರ್ ಸಂಪುಟದಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡರು.
  ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದಾಗ ರಾಜುಗೌಡರೂ ಅಲ್ಲಿಗೇ ಹೋಗುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಈಗ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ, ಕೆಜೆಪಿ ಎರಡೂ ಪಕ್ಷಕ್ಕೆ ಕೈಕೊಟ್ಟು 'ಕೈ' ಹಿಡಿಯುತ್ತಿದ್ದಾರೆ. ಇದು ಅವರ ರಾಜಕೀಯ ಚತುರ ನಡೆಯನ್ನು ತೋರಿಸುತ್ತದೆ.
ಸೋಲಿನ ಭೀತಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಗೊಂದಲ, ಕಚ್ಚಾಟ, ರಾಜಕೀಯ ಕಿತ್ತಾಟ ನೋಡಿ ಮತದಾರ ಬೇಸತ್ತಿರುವುದು ಸುಳ್ಳಲ್ಲ. 2008ರ ಚುನಾವಣೆ ಕಾಲಕ್ಕೆ ಬಿಜೆಪಿಗಿದ್ದ ವರ್ಚಸ್ಸು ಈಗಿಲ್ಲ. ಇದು ರಾಜುಗೌಡರಿಗೆ ಮನವರಿಕೆ ಆಗಿದೆ. ಇಲ್ಲೇ ಉಳಿದರೆ ಉಳಿಗಾಲವಿಲ್ಲ ಎನ್ನುವುದನ್ನು ಅರಿತೇ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನುವುದು ಎಲ್ಲರ ಅಭಿಪ್ರಾಯ.
  ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಮತವಿದ್ದು, ಜತೆಗೆ ತಮ್ಮ ವೈಯಕ್ತಿಕ ಪ್ರಭಾವ ಬಳಸಿಕೊಂಡರೆ ಗೆಲವು ಸುಲಭ ಎಂದು ಅವರು ಅಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಸೇಫ್ ಜಾಗ ಹುಡುಕಿಕೊಂಡಿದ್ದಾರೆ.
ಬಿಜೆಪಿಗೆ ಮುಂದಾಳತ್ವವಿಲ್ಲ: ಜಿಲ್ಲೆಯಲ್ಲೀಗ ಬಿಜೆಪಿಯನ್ನು ಮುನ್ನಡೆಸುವಂಥವರೇ ಇಲ್ಲವಾಗಿದ್ದಾರೆ. ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಕೆಜೆಪಿ ಸೇರಿದಾಗಿನಿಂದ ಜಿಲ್ಲೆಯಲ್ಲಿ ಪಕ್ಷ ಬಡವಾಗಿದೆ. ಬಿಜೆಪಿಗೆ ಸಾಕಷ್ಟು ಸಂಖ್ಯೆಯ ಕಾರ್ಯಕರ್ತರಿದ್ದರೂ ಚುನಾವಣೆಯಲ್ಲಿ ಅವರನ್ನು ಮುನ್ನಡೆಸುವಂಥ ಹಾಗೂ ಸಂಘಟನೆಗೆ ಶಕ್ತಿ ತುಂಬುವಂಥವರು ಕಾಣುತ್ತಿಲ್ಲ. ವೈಯಕ್ತಿಕವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದರೂ ಅದು ಸದ್ಯದ ಮಟ್ಟಿಗೆ ತುರ್ತಾಗಿ ಚೇತರಿಕೊಳ್ಳಲು ಸಾಲದು.
  ಇದರ ಬೆನ್ನಲ್ಲೇ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರಿದ್ದು, ರಾಜುಗೌಡರ ಆಗಮನದಿಂದ ಯುವಕರು ಕಾಂಗ್ರೆಸ್‌ನತ್ತ ಚಿತ್ತ ಹರಿಸುವಂತಾಗಿದೆ. ಒಟ್ಟಿನಲ್ಲಿ ರಾಜುಗೌಡ ಅವರ ನಡೆ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಗೆ ಹೊಸ ರಂಗು ತಂದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ