ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಸಂಪರ್ಕ ಹಾಗೂ ಸಂವಹನದಲ್ಲಿ ಮಹಾನ್ ಕ್ರಾಂತಿ ಮಾಡಿರುವ ಮೊಬೈಲ್ ಅದ್ಹೇಗೆ ಯಡವಟ್ಟುಗಳಿಗೆ ಕಾರಣವಾಗುತ್ತಿದೆ ಎಂಬುದಕ್ಕೆ ಗುಲ್ಬರ್ಗ ತಾಲೂಕಿನ ಕಮಲಾಪುರ ಬಾಲಕಿಯ ಈ ಪ್ರೇಮ ಪ್ರಸಂಗ ಸಾಕ್ಷಿ ಎನ್ನಬಹುದು.
ತನ್ನ ಮೊಬೈಲ್‌ಗೆ ಬಂದ ಮಿಸ್ಡ್ ಕಾಲ್‌ಗೆ ಸ್ಪಂದಿಸಿದ ಬಾಲಕಿ(ಪಿಯುಸಿ ವಿದ್ಯಾರ್ಥಿನಿ), ಆ ಕರೆ ಮಾಡಿದ ಹುಡುಗನನ್ನೇ ವರ್ಷಕಾಲ ಪ್ರೀತಿಸಿ(ಒಮ್ಮೆಯೂ ಆತನ ಮುಖ ನೋಡಿಲ್ಲ) ಕೊನೆಗೆ ಮನೆ ಬಿಟ್ಟು ಹೋಗಿ ಆತನೊಂದಿಗೆ ಮದುವೆಯಾದ ಪ್ರಸಂಗ ನಡೆದಿದೆ. ಬಾಲಕಿ ಪೋಷಕರು ತಮ್ಮ ಪುತ್ರಿ ಅಪ್ರಾಪ್ತೆ, ಹೀಗಾಗಿ ಇದು ಅಪಹರಣ ಹಾಗೂ ಒತ್ತಾಯದ ಮದುವೆ ಎಂದು ಹೇಳಿ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕೆ ಮೊರೆ ಇಟ್ಟಿದ್ದಾರೆ.
24 ದಿನ ಕಾಣೆಯಾಗಿದ್ದಳು: ಕಳೆದ ಜುಲೈ 7ರಂದು ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ಹೋಗಿ ಬರುವೆ ಎಂದು ಮನೆಬಿಟ್ಟು ಹೊರಬಂದ ಬಾಲಕಿ ಮೊಬೈಲ್ ಪ್ರಿಯಕರನೊಂದಿಗೆ ಹೋದವಳು ಆ.1ರಂದು ಪತ್ತೆಯಾಗಿದ್ದಾಳೆ. ಮೊಬೈಲ್ ಗೆಳೆಯ ಹಾಗೂ ತಾನು ಮೊದಲೇ ಮಾತನಾಡಿಕೊಂಡು ನಿರ್ಧರಿಸಿದಂತೆ ಕಮಲಾಪುರ ಬಸ್ ನಿಲ್ದಾಣಕ್ಕೆ ಬಂದಿದ್ದ ರಘು ನಾಯಕ್‌ನೊಂದಿಗೆ ಆತನ ಊರಾದ ತುಮಕೂರು ಜಿಲ್ಲೆಯ ಪಂಚವಟಿ ತಾಂಡಾಕ್ಕೆ ಹೋಗಿದ್ದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ.
ಜು.20ರಂದು ತಾಂಡಾದ ದೇವಾಲಯದಲ್ಲೇ ತಾವಿಬ್ಬರೂ ಮದುವೆ ಆಗಿದ್ದಾಗಿ ಹೇಳಿರುವ ಬಾಲಕಿ, ದೈಹಿಕವಾಗಿಯೂ ಗೆಳೆಯನೊಂದಿಗೆ ಸಂಪರ್ಕ ಮಾಡಿದ್ದಾಗಿ ಹೇಳಿದ್ದಾಳೆ. ಬಾಲಕಿ ಮನೆಯಿಂದ ಹೋದ ಸಂದರ್ಭ ಹಾಗೂ ತಾಂಡಾದಲ್ಲಿ ಮದುವೆಯಾದ ದಿನದಂದು ಅಪ್ರಾಪ್ತಳಿರುತ್ತಾಳೆ ಎಂದು ಆಕೆಯ ಪೋಷಕರು ದಾಖಲೆ ಸಮೇತ ದೂರು ನೀಡಿದ್ದಾರೆ. ಕಮಲಾಪುರ ಪೊಲೀಸರು ಈ ಪ್ರಕರಣವನ್ನು ಅಪಹರಣ ಮತ್ತು ಅತ್ಯಾಚಾರ ಎಂದು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಮುಖ ನೋಡ್ದೆ ಲವ್ವಲ್ಲಿ ಬಿದ್ದೆ
ಕಮಲಾಪುರ ಪೊಲೀಸರ ತನಿಖೆಯಲ್ಲಿ ಬಯಲಾದ ಅಚ್ಚರಿಯ ಸಂಗತಿ ಎಂದರೇ ಮೊಬೈಲ್ ಪ್ರೀತಿ ಜಾಲದಲ್ಲಿ ಸಿಲುಕಿದ ಬಾಲಕಿ ವರ್ಷ ಪರ್ಯಂತ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದರೂ ಸಹ ಯುವಕನನ್ನು ಒಮ್ಮೆಯೂ ಕಾಣಲಿಲ್ಲ. ರಘು ನಾಯಕ್‌ನನ್ನು ತಾನು ಕಮಲಾಪುರ ಬಸ್ ನಿಲ್ದಾಣದಲ್ಲಿ ಊರು ಬಿಟ್ಟು ಹೋಗುವ ಸಂದರ್ಭದಲ್ಲೇ ಕಂಡದ್ದು ಎಂದು ವಿಚಾರಣೆಯಲ್ಲಿ ಬಾಲಕಿ ಹೇಳಿದ್ದಾಳೆ.
ವರ್ಷದಿಂದ ಪ್ರೇಮ ಸಲ್ಲಾಪ
ತನ್ನ ಮೊಬೈಲ್‌ಗೆ ಬಂದ ಮಿಸ್ಡ್ ಕಾಲ್‌ಗೆ ಸ್ಪಂದಿಸಿದ್ದ ಬಾಲಕಿ ಅಂದಿನಿಂದಲೇ ವರ್ಷದವರೆಗೂ ಫೋನ್‌ನಲ್ಲೇ ಯುವಕನೊಂದಿಗೆ ಸಂಪರ್ಕದಲ್ಲಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿದೆ. ಬಾಲಕಿಯ ಬಳಿ ಪ್ರತ್ಯೇಕ ಸಿಮ್ ಕಾರ್ಡ್ ಇತ್ತು. ಆಕೆ ಅದನ್ನು ಬಳಸಿ ಮಧ್ಯರಾತ್ರಿಯಲ್ಲಿ ರಘು ನಾಯಕ್ ಜೊತೆ ಹರಟುತ್ತಿದ್ದಳು ಎಂಬುದು ಸಂಗತಿಗಳೆಲ್ಲವೂ ಬಯಲಾಗಿವೆ. ಬಾಲಕಿಯ ಸಿಮ್‌ನ ಮಾಹಿತಿಯಲ್ಲಿ ಹೆಚ್ಚಿನ ಬಾರಿ ಒಂದೇ ನಂಬರ್‌ಗೆ ಕರೆ ಹೋಗಿತ್ತು. ಆ ನಂಬರ್‌ನ ಮೂಲ ಜಾಲಾಡಿದಾಗ ಅದು ತುಮಕೂರು ಜಿಲ್ಲೆಯ ಕುಣಿಗಲ್‌ನತ್ತ ಬೆರಳು ತೋರಿತ್ತು. ಅಲ್ಲೇ ತಾಂಡಾದಲ್ಲಿರುವ ರಘು ನಾಯಕ್ ನಂಬರ್ ಇದೆಂಬುದು ತನಿಖೆಯಿಂದ ಖಚಿತವಾಯ್ತು ಎಂದು ಈ ಪ್ರಕರಣದ ತನಿಖೆ ಮಾಡಿರುವ ತಂಡದ ಅಧಿಕಾರಿ, ಮಹಾಗಾಂವ್ ಪಿಎಸ್‌ಐ ಬಿ.ಎಸ್. ಪಾಟೀಲ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.