ಯಾದಗಿರಿ: ತಾಲೂಕಿನ ಬಾಲಚೇಡ ಗ್ರಾಮದಲ್ಲಿ ಮೊರಾರ್ಜಿ ವಸತಿ ಶಾಲೆಯ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹಾಗೂ ಜಿಲ್ಲಾಧಿಕಾರಿ ಮನೋಜ್‌ಕುಮಾರ ಜೈನ್ ಸೋಮವಾರ ಪರಿಶೀಲಿಸಿದರು.
ಗ್ರಾಮದ ಸರ್ವೇ ನಂ. 336ರಲ್ಲಿ ಸರ್ಕಾರಿ ಸ್ವಾಮ್ಯದ ಒಟ್ಟು 188 ಎಕರೆ ಜಮೀನಿದ್ದು ಅದರಲ್ಲಿ 38 ಎಕರೆ ಜಮೀನನ್ನು ಈಗಾಗಲೇ ಅಕ್ರಮ ಸಕ್ರಮದಲ್ಲಿ ಫಲಾನುಭವಿಗಳಿಗೆ ಹಂಚಲಾಗಿದೆ. ಉಳಿದ 150 ಎಕರೆ ಜಮೀನಿನಲ್ಲಿ ಮೊರಾರ್ಜಿ ವಸತಿ ಶಾಲೆಗೆ 10 ಎಕರೆ, ಐಟಿಐ ಕಾಲೇಜಿಗೆ 20 ಎಕರೆ, ನವೋದಯ ವಸತಿ ಶಾಲೆಗೆ 35 ಎಕರೆ ಸೇರಿದಂತೆ ಒಟ್ಟು 65 ಎಕರೆ ಜಮೀನನ್ನು ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಕಾಶೆಯನ್ನೂ ಸಿದ್ಧಪಡಿಸಲಾಗಿದೆ ಎಂದು ಡಿಸಿ ಜೈನ್ ಸಚಿವರಿಗೆ ವಿವರಿಸಿದರು.
ಜವಳಿ ಪಾರ್ಕ್ ಸ್ಥಾಪನೆ: ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಸೈದಾಪುರ ಸಮೀಪದ ಬಾಡಿಯಾಲ ಹಾಗೂ ಕಡೇಚೂರ ಮಧ್ಯ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಸ್ಥಾಪನೆ, ಮೊರಾರ್ಜಿ ಹಾಗೂ ಐಟಿಐ ಕಾಲೇಜು ಮಂಜೂರಾಗಿದ್ದು, ನವೋದಯ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅದು ಕೂಡ ಮಂಜೂರಾಗಲಿದೆ ಎಂದು ಸಚಿವರು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಮನೋಜ್‌ಕುಮಾರ ಜೈನ್, ತಹಸೀಲ್ದಾರ್ ಶಿವಶರಣಪ್ಪ ಕಟ್ಟೊಳಿ, ಉಪ ತಹಸೀಲ್ದಾರ್ ಗೋಪಾಲ ಕಪೂರ, ಕಂದಾಯ ನಿರೀಕ್ಷಕ ಮುಸ್ತಾಫ್, ತಾಲೂಕು ಭೂಮಾಪಕ ರಬ್ಬಾನಿ ಸೇರಿದಂತೆ ಜಿಪಂ ಸದಸ್ಯ ಶರಣಿಕ ಕುಮಾರ ದೋಖಾ, ಸೈದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಗುರುಮಿಠಕಲ್ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣಿ, ಭೀಮರೆಡ್ಡಿ ಪಾಟೀಲ್, ಭೀಮಣ್ಣಗೌಡ ಕ್ಯಾತ್ನಾಳ, ಬಸವರಾಜಯ್ಯಸ್ವಾಮಿ ಬದ್ದೇಪಲ್ಲಿ, ಚಿದಾನಂದಪ್ಪ ಕಾಳಬೆಳಗುಂದಿ, ಚಂದ್ರಶೇಖರ ವಾರದ, ಪ್ರಭುಲಿಂಗ ವಾರದ, ಭೀಮಶಪ್ಪ ಜೇಗರ, ಜಿಪಂ ಸದಸ್ಯ ಭೀಮರಾಯ ಕಂದಕೂರ, ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಕಣೇಕಲ್, ತಾಪಂ ಸದಸ್ಯ ಮಾರುತಿ ಮುಂಡಾಸ್, ಹಣಮಂತಪ್ಪ ಬಳಿಚಕ್ರ, ಸೇರಿದಂತೆ ಮುಂತಾದವರು ಹಾಜರಿದ್ದರು.