ಕ.ಪ್ರ. ವಾರ್ತೆ, ಗುಲ್ಬರ್ಗ, ಆ.6
ಹೈ-ಕ ಪ್ರದೇಶದ ವಿಶೇಷ ಮೀಸಲು ಅರ್ಹತಾ ಪತ್ರ(ಕಲಂ 371ಜೆ) ಪಡೆಯಲು ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮತ್ತೆ ಅಭ್ಯರ್ಥಿಗಳ ಪರದಾಟ ಮುಂದುವರಿದಿದ್ದು, ಅರ್ಜಿ ಸ್ಥಿತಿಗತಿ ವಿಚಾರಿಸಲು ಹೋದ ಅಂಗವಿಕಲನಿಗೆ ಸ್ಥಾನಿಕ ತಹಸೀಲ್ದಾರ್ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ಮುಂಚೆ ಸಿಇಟಿ ಸಂದರ್ಭದಲ್ಲಿ ಸಾವಿರಾರು ಅಭ್ಯರ್ಥಿಗಳು ಒಮ್ಮೆಲೇ ಪ್ರಮಾಣ ಪತ್ರಕ್ಕೆ ಮುಗಿಬಿದ್ದು ಗೊಂದಲವಾಗಿತ್ತು. ಅದಾದ ನಂತರ ಮತ್ತೀಗ ಅದೇ ರೀತಿಯ ಗೊಂದಲ ಕಚೇರಿ ಸುತ್ತ ಕಂಡಿದ್ದರಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ಪ್ರಮಾಣ ಪತ್ರ ಹೊಂದುವ ಪದ್ಧತಿ ಸರಳಗೊಳಿಸಲು ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆಯಾದರೂ ಇಲ್ಲಿನ ಕೆಲಸ ಮಾಡುವ ಕೆಲ ಅಧಿಕಾರಿಗಳು ಅಭ್ಯರ್ಥಿಗಳಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಜೊತೆಗೆ ಅವರ ಅನುಚಿತ ವರ್ತನೆ ತೀವ್ರ ಗೊಂದಲಗಳಿಗೆ ಕಾರಣವಾಗಿದೆ. ಇಲ್ಲಿನ ಪತ್ರಿಕೋದ್ಯಮ ವಿದ್ಯಾರ್ಥಿ, ಅಂಗವಿಕಲ ಹಣಮಂತ ಖಜೂರಿ ಎಂಬವರು ತಮ್ಮ ಬಂಧುಗಳೊಬ್ಬರು ಸಲ್ಲಿಸಿದ್ದ ಅರ್ಜಿ ಯಾವ ಹಂತದಲ್ಲಿದೆ ಎಂದು ಮಾಹಿತಿ ಪಡೆಯಲು ಸಹಾಯಕ ಆಯುಕ್ತರ ಕಚೇರಿಗೆ ಹೋದಾಗ ಅಲ್ಲಿನ ರೆಸಿಡೆಂಟ್ ತಹಸೀಲ್ದಾರರು ನೂಕಿದ್ದಾರೆ. ಜೊತೆಗೇ ಕೇಳುವ ಮಾಹಿತಿ ನೀಡದೆ ವಾದ ಮಂಡಿಸಿದ್ದಾರೆ. ಇದರಿಂದ ತೀವ್ರ ನೊಂದ ಹನುಮಂತ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ತಾವು ಎಸಿ ಕಚೇರಿಯಲ್ಲಿ ಅನುಭವಿಸಿದ ಹಿಂಸೆ ವಿವರಿಸಿ ಲಿಖಿತ ದೂರು ಸಲ್ಲಿಸಿದ್ದಾನೆ.