ಚಿಂಚೋಳಿ: ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ನಾಮಫಲಕಗಳನ್ನು ಅಳವಡಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಂಪಣ್ಣ ಎಲ್.ವೈ. ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಮಾಣಿಕಮ್ಮ ಕಾಶಿನಾಥ ಗೋಸುಲ್ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಥಮ ಕೆಡಿಪಿ ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ಕೃಷಿ ಮತ್ತು ಸಾಮಾಜಿಕ ಅರಣ್ಯ ಮುಂತಾದ ಇಲಾಖೆಗಳಿಂದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಯಾವ ಕಾಮಗಾರಿಗಳು ಯಾವ ಇಲಾಖೆಯಿಂದ ನಡೆದಿವೆ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿಲ್ಲ. ಬಹಳಷ್ಟು ಕೆಲಸಗಳು ನಕಲು ಆಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಪ್ರತಿ ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯ ನಾಮಫಲಕಗಳನ್ನು ಅಳವಡಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ವೃತ್ತಿಗೆ ಧಕ್ಕೆ ಬಂದೀತು ಜೋಕೆ!: ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು ಕಚೇರಿ ಸಮಯದಲ್ಲಿ ಇರುವುದಿಲ್ಲ. ಗ್ರಾಮೀಣ ಪ್ರದೇಶದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದಾಗ ಅಧಿಕಾರಿಗಳಿಲ್ಲದ ಕಾರಣ ವಾಪಸ್ಸಾಗುತ್ತಿದ್ದಾರೆ. ಇದರಿಂದ ಸರ್ಕಾರ ಯೋಜನೆಗಳು ಜನರಿಗೆ ತಲುಪುತ್ತಿಲ್ಲವೆಂದು ಆರೋಪ ಕೇಳಿ ಬರುತ್ತಿದೆ. ವೃತ್ತಿಗೆ ಧಕ್ಕೆ ಬರದಂತೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಇಒ ಹಂಪಣ್ಣ ಎಚ್ಚರಿಸಿದರು.
ಸಭೆಯಲ್ಲಿ ಭಾಗವಹಿಸಿದ ಜಿಪಂ ಎಇಇ ರೇವಣಸಿದ್ದಪ್ಪ ಹಾಗರಗಿ, ಕೃಷಿ ಅಧಿಕಾರಿ ಬಿ.ಎನ್.ಚೂಡೆ, ಜಲಾನಯನ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಬೆಡಸೂರ, ಪ್ರಭಾರ ಸಿಡಿಪಿಒ ಭೀಮಸೇನ ಚವ್ಹಾಣ ತಮ್ಮ ಇಲಾಖೆ ಪ್ರಗತಿ ವಿವರಿಸಿದರು. ತಾಪಂ ಅಧಿಕಾರಿ ಹಂಪಣ್ಣ ಎಲ್.ವೈ ಸ್ವಾಗತಿಸಿದರು. ಮಾರುತಿ ಗಿರಿ ವಂದಿಸಿದರು.
12 ಇಲಾಖೆ ಅಧಿಕಾರಿಗಳ ಗೈರು
ತಾಪಂ ವ್ಯಾಪ್ತಿಯಲ್ಲಿ ಒಟ್ಟು 17 ಇಲಾಖೆಗಳಿದ್ದು ಪ್ರಥಮ ಕೆಡಿಪಿ ಸಭೆಯಲ್ಲಿ 5 ಅಧಿಕಾರಿಗಳು ಮಾತ್ರ ಹಾಜರಾಗಿ ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಸಭೆಯಲ್ಲಿ ವಿವರಿಸಿದರು. ಇನ್ನುಳಿದ ಅಧಿಕಾರಿಗಳು ಸಭೆಯಲ್ಲಿ ಗೈರಾಗಿರುವುದಕ್ಕೆ ತಾಪಂ ಅಧ್ಯಕ್ಷೆ ಮಾಣಿಕಮ್ಮ ಗೋಸುಲ್ ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಗೈರಾಗಿರುವ ಎಲ್ಲ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ತಾಪಂ ಅಧಿಕಾರಿಗಳಿಗೆ ಆದೇಶಿಸಿದಾಗ ವಲಯ ಸಾಮಾಜಿಕ ಅರಣ್ಯಾಧಿಕಾರಿ ಅನೇಕ ಸಭೆಗಳಿಗೆ ಭಾಗವಹಿಸಿಲ್ಲ. ಅವರನ್ನು ಅಮಾನತು ಗೊಳಿಸುವಂತೆ ಜಿಪಂ ವರದಿ ಸಲ್ಲಿಸಲಾಗುತ್ತಿದೆ ಎಂದು ತಾಪಂ ಅಧಿಕಾರಿ ಅಧ್ಯಕ್ಷರ ಗಮನಕ್ಕೆ ತಂದರು.