ಹುಣಸಗಿ: ಅಮ್ಮಾಪುರ ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಲು ಆಗ್ರಹಿಸಿ ಆ.8ರಂದು ಸುರಪುರದ ಗಾಂಧಿ ವೃತ್ತದ ತಮ್ಮ ನೇತೃತ್ವದಲ್ಲಿ ನಡೆಸಲಿರುವ ಧರಣಿಯಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆಂದು ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಹೇಳಿದರು. ಹುಣಸಗಿಯಲ್ಲಿ ಬುಧವಾರ ಮಧ್ಯಾಹ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮದಲ್ಲಿ ಗೂಂಡಾಗಳಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿರುವ ಅಮಾಯಕರ ಮೇಲೆ 307 ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಅಮ್ಮಾಪುರ ಗ್ರಾಮದಲ್ಲಿ ನಡೆದ ದಲಿತ ಯುವಕನೊಬ್ಬನ ಕೊಲೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು. ಅಮಾಯಕರ ಮೇಲೆ ದಾಖಲಿಸಿಕೊಂಡಿರುವ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು ರಾಜುಗೌಡ ಒತ್ತಾಯಿಸಿದರು. ಜಿ.ಪಂ ವಿಪಕ್ಷ ನಾಯಕ ಎಚ್.ಸಿ. ಪಾಟೀಲ್, ಎಪಿಎಂಸಿ ಸದಸ್ಯ ಚಂದ್ರಶೇಖರ ದಂಡಿನ್, ಜಿಪಂ ಮಾಜಿ ಅಧ್ಯಕ್ಷರಾದ ರಾಜಾ ಹಣಮಪ್ಪನಾಯಕ ತಾತಾ, ಯಲ್ಲಪ್ಪ ಕುರುಕುಂದಿ, ಮುಖಂಡರಾದ ಟಿ.ಎಸ್. ಚಂದಾ, ವೀರೇಶ ಚಿಂಚೋಳಿ, ಸೋಮನಗೌಡ ಅಗತೀರ್ಥ, ಬಸಣ್ಣ ದೇಸಾಯಿ, ಸಿದ್ದನಗೌಡ ಕರಿಭಾವಿ, ದೇವಣ್ಣ ದೊಡಮನಿ, ಮೇಲಪ್ಪ ಗುಳಗಿ, ಬಸವರಾಜ ವೈಲಿ, ವೆಂಕಟೇಶ ಅರಳಿಗಿಡದ, ಆನಂದ ಬಾರಿಗಿಡದ ಸೇರಿದಂತೆ ಅನೇಕ ಪ್ರಮುಖರು ಇದ್ದರು.
--
ಸಿಬ್ಬಂದಿ ವರ್ಗಾಯಿಸಿ
ಯಾದಗಿರಿ: ತಾಲೂಕಿನ ಠಾಣಗುಂದಿ ಗ್ರಾಮದ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿನ ಸಿಬ್ಬಂದಿಯನ್ನು ಕೂಡಲೇ ಬದಲಿಸಬೇಕು ಎಂದು ಆಗ್ರಹಿಸಿ ಜೈಕರವೇ ಸಂಘಟನೆ ಮತ್ತು ಗ್ರಾಮಸ್ಥರು ಬುಧವಾರ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ವಿದ್ಯುತ್ ಕೇಂದ್ರದಲ್ಲಿನ ಸಿಬ್ಬಂದಿ ಠಾಣಗುಂದಿ ಮತ್ತು ಸುತ್ತಮುತ್ತಲಿನ ಗ್ರಾಮಗಳಾದ ಹೆಡಗಿಮದ್ರಾ, ತಳಕ, ಅರಿಕೇರಾ(ಬಿ), ಅಬ್ಬೆತುಮಕೂರು ಮತ್ತು ಮುದ್ನಾಳ ಗ್ರಾಮದ ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಒದಗಿಸದೆ, ಆಂಧ್ರದಿಂದ ಬಂದ ರೈತರಿಗೆ ಹೆಚ್ಚಿನ ವಿದ್ಯುತ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಇಲ್ಲದ ಕಾರಣ ರೈತರ ಬೆಳೆ ಹಾಳಾಗುತ್ತಿವೆ. ಲಕ್ಷಾಂತರ ರು. ಸಾಲ ಮಾಡಿ ಗದ್ದೆಯಲ್ಲಿ ಬತ್ತ ಬಿತ್ತನೆ ಮಾಡಿದ್ದು, ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗದ ಕಾರಣ ನೀರಿಲ್ಲದೆ ಬೆಳೆ ಒಣಗುತ್ತಿವೆ ಎಂದು ಆರೋಪಿಸಿದರು. ಇದಕ್ಕೆಲ್ಲ ಇಲ್ಲಿನ ಸಿಬ್ಬಂದಿಯೇ ಕಾರಣರಾಗಿದ್ದು, ಕೂಡಲೇ ಅವರನ್ನು ಬದಲಿಸಿ, ಬೇರೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಇಲ್ಲದಿದ್ದಲ್ಲಿ ಯಾದಗಿರಿ ಜೆಸ್ಕಾಂ ಕಚೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.