ಚಿಂಚೋಳಿ: ಅಪರಿಚಿತರು ನಂಬಿಸಿ ಮೋಸ ಮಾಡುತ್ತಿದ್ದು, ಅವರಿಂದ ದೂರವಿರಬೇಕು. ನಿಮ್ಮ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಯತ್ನ ನಡೆದರೆ ಕೂಡಲೇ ಪೋಲಿಸರಿಗೆ ಮಾಹಿತಿ ನೀಡಬೇಕೆಂದು ಚಿಂಚೋಳಿ ಉಪ-ವಿಭಾಗದ ಡಿವೈಎಸ್ಪಿ ರವಿಕುಮಾರ ಪಾಟೀಲ್ ಮಕ್ಕಳಿಗೆ ಧೈರ್ಯ ತುಂಬಿದರು.
ಪಟ್ಟಣದ ವೀರೇಂದ್ರ ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಚಿಂಚೋಳಿ ಗೃಹ ಇಲಾಖೆಯಿಂದ ಏರ್ಪಡಿಸಿದ್ದ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳ ಕುರಿತು ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಮಹಿಳೆಯನ್ನು ಆದಿಶಕ್ತಿ ದೇವತೆ ಎಂದು ಪೂಜಿಸಿ ಗೌರವಿಸುವುದರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ. ಆದರೆ ಇಂದು ಮಹಿಳೆಯರು ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ಹೆಚ್ಚುತ್ತಿವೆ. ಇಂತಹ ಕೃತ್ಯಗಳನ್ನು ತಡೆಯಲು ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಯಾವುದೇ ಅಪರಿಚಿತ ವ್ಯಕ್ತಿಗಳನ್ನು ಕಂಡರೆ ಪೊಲೀಸರಿಗೆ ಧೈರ್ಯದಿಂದ ಮಾಹಿತಿ ನೀಡಬೇಕೆಂದು ಡಿವೈಎಸ್ಪಿ ತಿಳಿಸಿದರು.
ಚಿಂಚೋಳಿ ಪೊಲೀಸ್ ಠಾಣೆ ಸಬ್ಇನ್ಸಪೆಕ್ಟರ್ ರಾಘವೇಂದ್ರ ಜಿ.ಎಸ್., ವೀರೇಂದ್ರ ಪಾಟೀಲ್ ಪಬ್ಲಿಕ ಶಾಲೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಮಾತನಾಡಿದರು. ಶಾಲಾ ಮುಖ್ಯಸ್ಥ ಅಬ್ರಾಹಿಂ ಥಾಮಸ್ ಸ್ವಾಗತಿಸಿದರು.