ಕ.ಪ್ರ.ವಾರ್ತೆ , ಹಾಸನ , ಏ. 25
ಜೀವನದಲ್ಲಿ ಶ್ರದ್ದೆ, ಸಂಯಮ, ತಾಳ್ಮೆ, ಶಿಸ್ತು ಇದ್ದಾಗ ಮಾತ್ರ ಯಾವುದೇ ಸಾಧನೆ ಸಾಧ್ಯ ಎಂದು ಕಾಲೇಜು ಶಿಕ್ಷಣ ಇಲಾಖೆ, ನಿರ್ದೇಶಕಿ ಡಾ. ಬಿ.ಎಲ್. ಭಾಗ್ಯಲಕ್ಷ್ಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮಲ್ಲಿ ತಾವು ಮೊದಲು ನಂಬಿಕೆ ಇಟ್ಟುಕೊಳ್ಳಬೇಕು. ಆತ್ಮವಿಶ್ವಾಸ, ಆತ್ಮಗೌರವ ಇದ್ದಾಗ ಮಾತ್ರ ಯಾವುದೇ ಸಾಧನೆ ಸಾಧ್ಯ ಎಂದರು.
ನಗರದ ಸರ್ಕಾರಿ ಕಲಾ ಕಾಲೇಜನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ಕಾಲೇಜಿನ ಸಮಗ್ರ ಚಟುವಟಿಕೆಗಳ ಬಗ್ಗೆ ಐದು ವರ್ಷಗಳ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ಸಿ.ಡಿ.ಸಿ.ಯ ಮೂಲಕ ಯುಜಿಸಿಗೆ ಸಲ್ಲಿಸಿ ವಿಶೇಷ ಅನುದಾನ ಪಡೆಯಬೇಕು ಎಂದು ಸಲಹೆ ನೀಡಿದರು.
ಕಲಾ ಕಾಲೇಜು ಈ ವರ್ಷದಿಂದ ಸಮುದಾಯ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗೌರವಿಸುವ ಪರಂಪರೆಯನ್ನು ಹುಟ್ಟುಹಾಕಿ ವರ್ಷದ ವ್ಯಕ್ತಿ ಎಂಬ ಕಾರ್ಯಕ್ರಮ ರೂಪಿಸಿ, ಈ ವರ್ಷ ಹಾಸನದ ಹೆಸರಾಂತ ಶಿಕ್ಷಣ ಮತ್ತು ಸಮಾಜ ಸೇವಕರಾದ ಹಲವಾರು ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ದುಡಿದ ಜಿ.ಎಲ್. ಮುದ್ದೇಗೌಡ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುದ್ದೇಗೌಡರು, ಮನಸಿನಲ್ಲಿ ಸ್ಥೈರ್ಯವಿಟ್ಟುಕೊಂಡು ದೃಢವಾಗಿ ನಡೆದರೆ ಯಶಸ್ಸು ಸಾಧ್ಯ ಎಂದರು. ಸಮಾರೋಪ ಭಾಷಣ ಮಾಡಿದ ಮೈಸೂರು ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಂ. ಮೋಹನ್ ಮಾತನಾಡಿದರು.
ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ. ಕಾಳೇಗೌಡ ಮುಖ್ಯ ಅತಿಥಿಗಳಾಗಿ ಭಾವಹಿಸಿದ್ದರು. ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಿ.ಜಿ. ಕೃಷ್ಣೇಗೌಡ, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಚಂದ್ರೇಗೌಡ, ಎನ್.ಸಿ.ಸಿ. ಅಧಿಕಾರಿ ಗಿರೀಶ ಎಂ.ಸಿ., ಎನ್.ಎಸ್‌ಎಸ್ ಅಧಿಕಾರಿ ಉಮೇಶ್ ಬಿ.ಆರ್. ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಉದಯ್‌ಕುಮಾರ್, ಹೇಮಾವತಿ ಇದ್ದರು.
ಇದೇ ಸಂದರ್ಭದಲ್ಲಿ ಹಲವು ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.