ಹಾಸನ: ನಾವಿರುವ ಪರಿಸರದ ಸುತ್ತ ಅನೇಕ ವಿಸ್ಮಯ ಸಂಗತಿಗಳಿವೆ. ಅವುಗಳನ್ನು ಗ್ರಹಿಸಿ ಅಧ್ಯಯನ ಕೈಗೊಂಡಾಗ ಮಾತ್ರ ನಾವಂದುಕೊಂಡ ಗುರಿ ಮುಟ್ಟಬಹುದು ಎಂದು ಸಾಹಿತಿ ಡಾ.ಕೃಷ್ಣಮೂರ್ತಿ ಹೇಳಿದರು.
ಅವರು ನಗರದ ಎನ್ಡಿಆರ್ಕೆ ಪ್ರಥಮ ದರ್ಜೆ ಕಾಲೇಜು ಸಂಸ್ಥಾಪಕ ನಾರಾಯಣಿ ಡಿ.ಆರ್. ಕರೀಗೌಡರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಜನ ಸಾಮಾನ್ಯರ ಸಂಸ್ಕೃತಿ ಎಲ್ಲದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಇರಬೇಕು. ಆಗ ಪರಿಪೂರ್ಣ ಸಮಾಜವನ್ನು ಕಟ್ಟಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣವನ್ನು ಶ್ರದ್ಧೆ ಆಸಕ್ತಿಗಳಿಂದ ಅಧ್ಯಯನ ಮಾಡಬೇಕು. ಇರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ಮೌಲ್ಯಯುತ ಶಿಕ್ಷಣಕ್ಕೆ ಎಲ್ಲ ಕಡೆಯು ಬೆಲೆ ಇರುತ್ತದೆ. ಕುವೆಂಪು ಅವರ ವೈಚಾರಿಕ ಸಂಗತಿಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳ ವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಕೆ.ಶ್ಯಾಮಭಟ್ ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಜ್ಞಾನವೇ ಮುಖ್ಯವಾಗಿದೆ. ಆದುದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕೃತಿಗಳನ್ನು ಓದಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಅಲ್ಲದೆ ನಮ್ಮ ಭಾಷೆ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಪರಂಪರೆ ಉಳಿಸಿ ಬೆಳೆಸಬೇಕೆಂದು ಕಿವಿಮಾತು ಹೇಳಿದರು.
ಹಾಸನಬಾಬು ಜನಪದಗೀತೆ ಹಾಡಿದರು. ವಿದ್ಯಾರ್ಥಿ ರಾಕೇಶ್ ಕಶ್ಯಪ್ ಪ್ರಾರ್ಥನೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಎ.ಜಿ.ಶಾಂತೇಗೌಡ ಸ್ವಾಗತಿಸಿದರು. ವೆಂಕಟೇಶ್ ವಂದಿಸಿದರು. ಚಲುವೇಗೌಡ ನಿರೂಪಿಸಿದರು.
ವಿಎಚ್ಪಿ, ಬಜರಂಗದಳ ಪ್ರತಿಭಟನೆ
ಸಕಲೇಶಪುರ: ಹೈದರಾಬಾದ್ ಬಾಂಬ್ ಸ್ಫೋಟ ಖಂಡಿಸಿ ತಾಲೂಕು ವಿಎಚ್ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಾಕಾರರು ಸುಮಾರು 5 ನಿಮಿಷ ಮಾನವ ಸರಪಳಿ ಮಾಡಿ ಉಗ್ರರ ಅಟ್ಟಹಾಸದ ವಿರುದ್ಧ ಘೋಷಣೆ ಕೂಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ವಿಎಚ್ಪಿ ತಾಲೂಕು ಕಾರ್ಯದರ್ಶಿ ಸಂತೋಷ್ ಮಾತನಾಡಿ, ಕೃತ್ಯ ಎಸಗಿದ ಉಗ್ರರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದರು. ಸಂಘಟನೆಯ ಪ್ರಮುಖರಾದ ವಿಜಯಕುಮಾರ್, ಧರ್ಮೇಶ್, ರಮೇಶ್, ಸತೀಶ್, ರಾಜು, ತಮ್ಮಯ್ಯ ಹಾಜರಿದ್ದರು.
ಶಾಸಕರಿಗೆ ಸವಾಲು ಹಾಕಿದ ಸಣ್ಣಸ್ವಾಮಿ
ಸಕಲೇಶಪುರ: ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಪ್ರಾಮಾಣಿಕರೇ ಆಗಿದ್ದು, ತಮ್ಮ ಮಾತಿನಿಂದ ನಿಜವಾಗಲೂ ನೊಂದಿದ್ದರೆ, ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಕಾಂಗ್ರೆಸ್ ಮುಖಂಡ ಡಿ.ಸಿ.ಸಣ್ಣಸ್ವಾಮಿ ಸವಾಲು ಹಾಕಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ಕಾಮಗಾರಿಗಳಲ್ಲಿ ನಡೆದಿರುವ ಕಳಪೆ ಕಾಮಗಾರಿಗಳಲ್ಲಿ ಶಾಸಕರು ಕಮಿಷನ್ ಪಡೆದಿರುವುದು ಎಲ್ಲಿ ಬಯಲಾಗುತ್ತದೋ ಎಂಬ ಭಯದಿಂದ ಅವರು ಜನರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿರುವ ಜೊತೆಗೆ ತಮ್ಮ ಸ್ಥಾನಕ್ಕೆ ಶೋಭೆಯಲ್ಲದ ಹೇಳಿಕೆಗಳನ್ನು ನೀಡಲು ಮುಂದಾಗಿದ್ದಾರೆ ಎಂದರು. ಶಾಸಕರೆಂಬುದನ್ನೇ ಮರೆತು ಅಸಭ್ಯ ಶಬ್ಧಗಳಿಂದ ನಿಂದಿಸುವುದು ಸರಿಯಲ್ಲ ಎಂದ ಸಣ್ಣಸ್ವಾಮಿ, ಶಾಸಕರ ಭ್ರಷ್ಟಾಚಾರದ ಕೆಲಸಗಳಿಗೆ ಈ ಕ್ಷೇತ್ರದ ರಸ್ತೆಗಳು ಸಾಕ್ಷಿಯಾಗಿವೆ. ಬಡ ದಲಿತರಿಂದ ಕಮೀಷನ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಯಾರಿಗೂ ಬಾವಿ ನೀಡಲಿಲ್ಲ, ಕ್ಯಾಮನ ಹಳ್ಳಿ, ಯಸಳೂರಿನ ಗ್ರಾಪಂ ಅವ್ಯವಹಾರ ಪಕ್ಕ ಸಾಕ್ಷಿಯಾಗಿವೆ. ಸಿಲ್ವರ್ಗಿಡಗಳ ವಿತರಣೆಗಿಂತ ಬೇರೆ ಸಾಕ್ಷಿ ಬೇಕೆ ಎಂದಿದ್ದಾರೆ.
ಇಂದು ಮಾವಿನಕೆರೆ ಮಹಾರಥೋತ್ಸವ
ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿ ಮಾವಿನಕೆರೆ ಗ್ರಾಮದಲ್ಲಿ ಇರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಮಹಾರಥೋತ್ಸವ ಹಾಗೂ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಫೆ.23 ರಂದು ಬೆಳಗ್ಗೆ 11 ಕ್ಕೆ ವೈಖಾನಸ ಆಗಮೋಕ್ತವಾಗಿ ನೆರವೇರಲಿದೆ. ಮಾವಿನಕೆರೆ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ರಥೋತ್ಸವದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಜಿಲ್ಲಾಧಿಕಾರಿಮೋಹನ್ರಾಜ್ , ಉಪ ವಿಭಾಗಾಧಿಕಾರಿಜಗದೀಶ್, ತಹಸೀಲ್ದಾರ್, ಈಶ್ವರಪ್ಪ ಭಾಗವಹಿಸುವರು.
ಕರಾವಳಿ ಉತ್ಸವ, ಸಂಘ ಉದ್ಘಾಟನೆ ನಾಳೆ
ಹಾಸನ: ಕರಾವಳಿ ಮಿತ್ರ ಮಂಡಳಿಯಿಂದ ಫೆ.24ರಂದು ಕರಾವಳಿ ಉತ್ಸವ ಮತ್ತು ಸಂಘದ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಬೇಲೂರು ತಾಲೂಕು ಆರೇಹಳ್ಳಿಯಲ್ಲಿ ಬೆಳಗ್ಗೆ 9.30 ಕ್ಕೆ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷ ಚಂದ್ರಶೇಖರ್ಶೆಟ್ಟಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ, ಧರ್ಮಸ್ಥಳ ಶ್ರೀರಾಮಕ್ಷೇತ್ರ ನಿತ್ಯಾನಂದನಗರದ ಸದ್ಗುರು ಬ್ರಹ್ಮನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾದ್ವಿಶ್ರೀ ಮಾತಾನಂದ ಮಯೀ, ಮಂಗಳೂರಿನ ಮೌಲನ ಅಬು ಸೂಫಿಯನ್, ಫಾತಿಮಾ ಮಾತೆಯ ಕ್ರಿಸ್ತಾಲಯದ ಸ್ವಾಮಿ ವಿಲೀಯಂ ಪೆರೇರಾ ಸಾನಿಧ್ಯ ವಹಿಸುವರು ನಾಯಕ ಎಚ್.ಡಿ.ರೇವಣ್ಣ, ಶಾಸಕ ವೈ.ಎನ್.ರುದ್ರೇಶ್ಗೌಡ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸೋಮನಾಥ್, ಫೆಲಿಕ್ಸ್, ಇಬ್ರಾಹಿಂ, ಪ್ರಭಾಕರ್ ಶೆಟ್ಟಿ, ಪ್ರಕಾಶ್ ಇದ್ದರು.
ಹಿಂದೂ ಜನ ಜಾಗೃತಿ ಖಂಡನೆ
ಹಾಸನ: ಹೈದ್ರಾಬಾದ್ ಬಾಂಬ್ ಸ್ಫೋಟ ಪ್ರಕರಣವನ್ನು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದ್ದು, ವಿಧ್ವಂಸಕ ಕೃತ್ಯ ನಡೆಸಿದ ದೇಶದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. ಘಟನೆಯಲ್ಲ್ಲಿ 2-3 ಶಕ್ತಿಶಾಲಿ ಬಾಂಬ್ ಸ್ಪೋಟಿಸಿ, 18 ಜನ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೃತ್ಯದ ಹಿಂದೆ ಪಾಕಿಸ್ಥಾನ ಮೂಲದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕೈವಾಡ ಶಂಕಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ರಮೇಶ್ ನಾಯಕ ತಿಳಿಸಿದ್ದಾರೆ. ಹೆಚ್ಚುತ್ತಿರುವ ಭಯೋತ್ಪಾದನೆಯಿಂದ ದೇಶ ತತ್ತರಿಸಿ ಹೋಗಿದೆ. ಉಗ್ರರಿಗೆ ಶಿಕ್ಷೆಯಾಗದ ಇಂಥ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಭಯೋತ್ಪಾದಕ ಸಂಘಟನೆಗಳ ಮೇಲೆ ಕಟು ಕಾರ್ಯಚರಣೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಆಯುಕ್ತ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಫೆ 12ರ ಸುತ್ತೋಲೆ ಪತ್ರದಲ್ಲಿ 2008ರ ಜ.1 ರಿಂದ 20102ರ ಡಿ.31 ರವರೆಗೆ ನೇಮಕವಾದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಶಿಕಸ್ಷಕರ ಎರಡನೇ ಪರಿಷ್ಕೃತ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಹಾಗೂ 2007ರ ಡಿ. 31 ರ ಅಂತಿಮ ಜೇಷ್ಠತಾ ಪಟ್ಟಿಯನ್ನು ಇಲಾಖಾ ವೆಬ್ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಿರುತ್ತಾರೆ. ಈ ಪಟ್ಟಿಯಲ್ಲಿ ಯಾವುದೇ ಆಕ್ಷೇಪಣೆ, ಬಿಟ್ಟುಹೋಗಿರುವ ಪ್ರಕರಣಗಳ ಹೊಸ ಸೇರ್ಪಡೆ ಇದ್ದರೆ ಹಾಗೂ ಉನ್ನತ ವ್ಯಾಸಂಗ ವಿದ್ಯಾರ್ಹತೆಯ ಮಾಹಿತಿ ದಾಖಲಾಗದಿದ್ದರೆ ಇಂತಹ ಪ್ರಕರಣಗಳಿದ್ದರೆ ಅಂತಹ ಶಿಕ್ಷಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಇಂತಹ ಶಿಕ್ಷಕರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 2ರೊಳಗೆ ಸಲ್ಲಿಸಲು ತಿಳಿಸಿದೆ. ನಂತರ ಬಂದ ಅರ್ಜಿ ಸ್ವೀಕರಿಸಲಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಅಪೂರ್ಣ ಕಾಮಗಾರಿ: ಸಾರ್ವಜನಿಕರಿಗೆ ಕಿರಿಕಿರಿ
ಹಾಸನ: ನಗರದ ಅರಳೇಪೇಟೆ ರಸ್ತೆಯಲ್ಲಿ ಕಳೆದ 4-5 ತಿಂಗಳಿಂದ ಚರಂಡಿ ಕಾಮಗಾರಿ ಹಾಗೂ ಸ್ಲ್ಯಾಬ್ ಹಾಕುವ ಕಾಮಗಾರಿಯನ್ನು ಗುತ್ತಿಗೆದಾರರು ಬೇಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ಣವಾಗಿ ಕೆಲಸ ಮಾಡದೇ ರಸ್ತೆ ಬದಿಯಲ್ಲಿ ಅನೇಕ ಮನೆಗಳ ಮುಂಭಾಗದ ಗೋಡೆಗಳನ್ನು ಬೀಳಿಸಿದ್ದಾರೆ. ಇನ್ನು ಕೆಳಗೆ ಹಾಕಿರುವ ಗಾರೆಯನ್ನು ಕಿತ್ತು ಎಸೆಯಲಾಗಿದ್ದು, ಈಗ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಕೆಲ ಮನೆಗಳ ಮುಂದೆ ಸ್ಲ್ಯಾಬ್ ಹಾಕದೆ ಹಾಗೇ ಬಿಟ್ಟಿರುವುದರಿಂದ ಮನೆಯಿಂದ ಹೊರಕ್ಕೆ ಬರಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯ ಸಂಬಂಧಪಟ್ಟವರಿಗೆ ತಿಳಿಸಿದರೆ ಸರಿಪಡಿಸುವುದಾಗಿ ಹೇಳಿಕೆ ಮಾತ್ರ ನೀಡುತ್ತಾರೆ. ಯಾವುದೆ ಕೆಲಸ ಆಗುತ್ತಿಲ್ಲ ಎಂದು ಬೇಸರಗೊಂಡರು. ಈ ಕೂಡಲೇ ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುವಂತೆ ಆಗ್ರಹಿಸಿದರು.
ಈ ಕುರಿತು ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ನಾಗಭೂಷಣ್, ಚರಂಡಿ ಕಾಮಗಾರಿಯಲ್ಲಿ ಲೋಪ ಹಾಗೂ ಪೂರ್ಣವಾಗಿ ಆಗದೆ ಸಾರ್ವಜನಿಕರಿಗೆ ತೊಂದರೆ ಎಂದು ಗೊತ್ತಾದರೇ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರರಿಗೆ ಸೂಚನೆ ನೀಡುವುದಾಗಿ ಹೇಳಿದರು.
ಪತಿಯಿಂದಲೇ ಪತ್ನಿ ಮೇಲೆ ಆ್ಯಸಿಡ್ ದಾಳಿ
ಹಾಸನ: ಕ್ಷುಲ್ಲಕ ಕಾರಣಕ್ಕೆ ಪತಿಯೇ ತನ್ನ ಪತ್ನಿ ಮೇಲೆ ಆಸಿಡ್ ಎರಚಿದ ಘಟನೆ ಗುರುವಾರ ಸಂಜೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬಾಳಗದ್ದೆ ಸಿಪಿಸಿ ಕಾಲೋನಿಯಲ್ಲಿರುವ ಅಲ್-ಅಮಿನ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್.ಎ. ಶಾನ್ ಎಂಬುವರೇ ಆಸಿಡ್ ದಾಳಿಗೆ ತುತ್ತಾದವರು.
ಅವರು 16 ವರ್ಷಗಳ ಹಿಂದೆ ಅಬ್ದುಲ್ಖಾದರ್ ಎಂಬುವರ ಪುತ್ರ ಅಬ್ದುಲ್ರೆಹಂ ಜತೆ ಮದುವೆ ಆಗಿದ್ದು, ಮೂವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬ ಪುತ್ರಿ ಸಾವನ್ನಪ್ಪಿದ್ದು, ಈಗ ಇಬ್ಬರು ಮಕ್ಕಳು ಇದ್ದಾರೆ.
5-6 ವರ್ಷಗಳಿಂದ ಸಂಸಾರದಲ್ಲಿ ಬಿರುಕು ಉಂಟಾಗಿ ದಿನನಿತ್ಯ ಜಗಳ ಆಡುತ್ತಿದ್ದರು. ಪತಿ ಅಬ್ದುಲ್ ದಿನನಿತ್ಯ ಕುಡಿದುಕೊಂಡು ಬಂದು ಜಗಳ ಮಾಡುತ್ತಿದ್ದನು. ಇದೇ ಕಲಹವೇ ಆ್ಯಸಿಡ್ ದಾಳಿಗೆ ಕಾರಣವಾಯಿತು ಎಂದು ಚಿಕಿತ್ಸೆ ಪಡೆಯುತ್ತಿರುವ ಎಸ್.ಎ. ಶಾನ್ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿದು ತಕ್ಷಣ ಸಂಬಂಧಪಟ್ಟವರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಕಾಸ್ಮೋ ಫೆಸ್ಟ್ ಇಂದು ಸ್ಪರ್ಧಾ ಕಾರ್ಯಕ್ರಮ
ಹಾಸನ: ಸಂತ ಫಿಲೋಮಿನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 23ರಂದು ಬೆಳಿಗ್ಗೆ 9 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಮಹಿಳೆಯರಿಗಾಗಿ(ಮಾರ್ಕೆಟಿಂಗ್-ಉತ್ಸವ) ಕಾಸ್ಮೋ ಫೆಸ್ಟ್ 2ಕೆ13 ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿದೆ. ಸಂತ ಫಿಲೋಮಿನಾ ಸಂಸ್ಥೆಯ ಸಂಚಾಲಕ ಮರ್ಸಲಿನ್ವೇಗಸ್ ಅಧ್ಯಕ್ಷತೆ ವಹಿಸಲಿದ್ದು ನಗರದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್ ಅತಿಥಿಗಳಾಗಿದ್ದಾರೆ.
ಸಂಶೋಧನಾ ಶಿಷ್ಯ ವೇತನಕ್ಕೆ ಆಹ್ವಾನ
ಹಾಸನ: ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಹಾಗೂ ಇಂಡಸ್ಟ್ರಿಯಲ್ ರೀಸರ್ಚ್ ಇವರು ಜಂಟಿಯಾಗಿ ಕಿರಿಯ ಸಂಶೋಧನಾ ಶಿಷ್ಯವೇತನ (ಒ.ಖ.ಋ.) ಮತ್ತು ಉಪನ್ಯಾಸಕರ ಹುದ್ದೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (N.E.T.) ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.
ಕೆಮಿಕಲ್ ಸೈನ್ಸ್, ಅರ್ತ್ಸೈನ್ಸ್, ಲೈಫ್ ಸೈನ್ಸ್ ಮ್ಯಾಥಮೆಟಿಕಲ್ ವಿಷಯಗಳಲ್ಲಿ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿಯಲ್ಲಿ ಶೇಕಡ 55 ಅಂಕಗಳಿಸಿ ಉತ್ತೀರ್ಣರಾಗಿರಬೇಕು. (ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೇ.50 ರಷ್ಟು) ಅಂತಿಮ ವರ್ಷದಲ್ಲಿ ಎಂ.ಎಸ್ಸಿ. ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. ಜೆಅರ್ಎಫ್ಗೆ 19 ವರ್ಷ ಮೇಲ್ಪಟ್ಟಿದ್ದು 28 ವರ್ಷದೊಳಗಿರಬೇಕು. (1-1-2013ಕ್ಕೆ) (ಎಸ್ಸಿಎಸ್ಟಿ ಒಬಿಸಿ ಪಿಎಚ್ಪಿ ವಿದ್ಯಾರ್ಥಿಗಳಿಗೆ 5 ವರ್ಷಗಳ ಸಡಿಲಿಕೆಯುಂಟು).
ಪರೀಕ್ಷಾ ಶುಲ್ಕ - ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 100 ರು. ಒಬಿಸಿ(ಕೇಂದ್ರ) ಅಭ್ಯರ್ಥಿಗಳಿಗೆ 200 ರು, ಇತರರಿಗೆ 400 ರು. ಆಗಿದೆ.
ಮೈಸೂರಿನ ಗಾಂಧಿ ಸರ್ಕಲ್ ಹತ್ತಿರ ಇರುವ ಇಂಡಿಯನ್ ಬ್ಯಾಂಕಿನಲ್ಲಿ ದೊರೆಯುವ ಅರ್ಜಿ ನಮೂನೆ ಪಡೆದು ಅರ್ಜಿ ಸಲ್ಲಿಸಬಹುದು. ಅಥವಾ www.csirhrdg.res.in ವೈಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ಮಾರ್ಚ್ 2 ಕೊನೆ ದಿನ.
ಎಲ್ಲಾ ದಾಖಲೆಗಳೊಂದಿಗೆ ಮುದ್ರಿತ ಅರ್ಜಿ ಸಲ್ಲಿಸಲು ಮಾರ್ಚ್ 7 ಕೊನೆಯ ದಿನ. ಪರೀಕ್ಷಾ ವಿಧಾನ, ಪಠ್ಯಕ್ರಮ ಮಾದರಿ ಪ್ರಶ್ನೆಪತ್ರಿಕೆ ಹಾಗೂ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನಕ್ಕೆ ಉಪಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ , ಮಾನಸಗಂಗೋತ್ರಿ ಮೈಸೂರು-6 ದೂರವಾಣಿ 0821-2516844 ಅಥವಾ 8892019297 ಸಂಪರ್ಕಿಸಿ ಪಡೆಯಬಹುದು.
ಲೋಕಾಯುಕ್ತ ಡಿವೈಎಸ್ಪಿ ಭೇಟಿ
ಹಾಸನ: ಲೋಕಾಯುಕ್ತ ಡಿವೈಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮತ್ತು ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ಫೆ.23 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಚನ್ನರಾಯಪಟ್ಟಣ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ರಿಂದ 5.30 ರವರೆಗೆ ಅರಸೀಕೆರೆ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಭೇಟಿ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ಅಹವಾಲು ಸಲ್ಲಿಸಬಹುದಾಗಿದೆ.