ಅರಸೀಕೆರೆ: ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಆದರೆ ಅದನ್ನು ಕಾನೂನುಬದ್ಧವಾಗಿ ತೆಗೆದುಹಾಕುವ ಕಾರ್ಯ ಮಾತ್ರ ಬಾಕಿ ಇದೆ. ರಾಜಕೀಯ ಅರಾಜಕತೆಗೆ ಬಿಜೆಪಿ-ಕೆಜೆಪಿ ಎರಡೂ ಕಾರಣ ಎಂದು ಪ್ರಸಕ್ತ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ವಿಶ್ಲೇಷಿಸಿದ್ದು ಹೀಗೆ. ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜೆಪಿ ಬೆಂಬಲಿಗ ಶಾಸಕರು ಹಾಗೂ ಮಂತ್ರಿಗಳು ರಾಜಿನಾಮೆ ನೀಡಿದ ನಂತರವಷ್ಟೇ ಕಾಂಗ್ರೆಸ್ ತನ್ನ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು. ಮಂತ್ರಿಗಳು, ಸಿಎಂಗೆ ರಾಜಿನಾಮೆ ನೀಡಬೇಕು. ಶಾಸಕರು ವಿಧಾನಸಭಾಧ್ಯಕ್ಷರಿಗೆ ಮಾತ್ರ ರಾಜಿನಾಮೆ ಸಲ್ಲಿಸಬೇಕೆಂಬ ನಿಯಮವಿದೆ. ಈ ಪ್ರಕಾರ ರಾಜಿನಾಮೆ ಅಂಗೀಕಾರವಾದ ವಿಧಾನಸಭೆ ವಿಸರ್ಜಿಸಬೇಕೆ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂಬುದನ್ನು ರಾಜ್ಯಪಾಲರು ತೀರ್ಮಾನಿಸಲಿದ್ದಾರೆ.