ಆಲೂರು: ಪಂಚಶೀಲಗಳು ಹಾಗೂ ಅಷ್ಟ ಮಾರ್ಗಗಳು ವೈಜ್ಞಾನಿಕ ಹಾಗೂ ವಿಶ್ವ ನಿಯಮ ತತ್ವಗಳಾಗಿದ್ದು ಇವುಗಳ ಅನುಸರಣೆಯಿಂದ ದು:ಖ ನಿವಾರಣೆಯಾಗಿ ಪ್ರೀತಿ, ಶಾಂತಿ, ವಿವೇಕ ಮತ್ತು ಜ್ಞಾನೋದಯದ ಅರಿವು ಮೂಡುತ್ತದೆ ಎಂದು ತಾಲೂಕು ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಇ.ಗುರುಮೂರ್ತಿ ಹೇಳಿದರು.ಅವರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ 2557ನೇ ಬುದ್ದ ಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಕ್ಕೆಲ್ಲ ಒಪ್ಪುವ ಧರ್ಮವನ್ನು ಎಲ್ಲರೂ ಮೆಚ್ಚುತ್ತಾರೆ. ಆದರೆ ಆತ್ಮ ಪರಮಾತ್ಮ ಎಂದು ಹೇಳುತ್ತಾ ಮೂಢ ನಂಬಿಕೆಯನ್ನು ಬಿತ್ತುವ ಧರ್ಮ ಧರ್ಮವಲ್ಲವೆಂದರು.ಕಾರ್ಯಕ್ರಮ ಉದ್ಘಾಟಿಸಿದ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಡಿ.ಕೆ. ಮಂಜಯ್ಯ ಮಾತನಾಡಿ, ಸನಾತನ ಧರ್ಮದ ಅನುಯಾಯಿಗಳು ವ್ಯವಸ್ಥಿತವಾಗಿ ಬೌದ್ಧ ಧರ್ಮದ ವಿರುದ್ಧ ಪಿತೂರಿ ನಡೆಸಿ ಅದನ್ನು ಹೊರಗಟ್ಟಿದರು. ಏಷ್ಯಾದ ದೀಪವೆಂದೇ ಗುರುತಿಸಲ್ಪಟ್ಟಿದ್ದ ಈ ಧರ್ಮವನ್ನು ಮರಳಿ ಭಾರತಕ್ಕೆ ತಂದ ಕೀರ್ತಿ ಡಾ. ಅಂಬೇಡ್ಕರ್‌ಗೆ ಸಲ್ಲುತ್ತದೆ ಎಂದು ಹೇಳಿದರು. ತಾಲೂಕು ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್, ಕಾರ್ಯದರ್ಶಿ ಎ.ಟಿ. ಮಲ್ಲೇಶ್, ಗ್ರಂಥಪಾಲಕ ನಾಗರಾಜ್ ಇತರರು ಇದ್ದರು.