ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿದ ಜೆಡಿಎಲ್ಪಿ ನಾಯಕ ರೇವಣ್ಣ ಅಭಿಮತ
ಬೇಲೂರು: ತಿಗಳ ಜನಾಂಗ ತನ್ನದೇ ಆದ ಇತಿಹಾಸ ಹೊಂದಿದ್ದು, ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಜೆಡಿಎಸ್ ಆದ್ಯತೆ ನೀಡಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.
ಬೇಲೂರು ಪಟ್ಟಣದ ಸಿದ್ದೇಶ್ವರ ಬೀದಿಯ ಸಿದ್ದೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಜಿಲ್ಲಾ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಇಂದು ಪ್ರತಿಯೊಂದು ಜನಾಂಗದವರು ರಾಜಕೀಯವಾಗಿ ಪ್ರಬಲವಾಗಲು ಸಂಘಟನೆ ಹೆಚ್ಚು ಮಹತ್ವ ನೀಡುತ್ತಿವೆ. ಈ ದಿಸೆಯಲ್ಲಿ ತಿಗಳರು ಕೂಡ ತಮ್ಮ ಮಹತ್ವ ಹೆಚ್ಚು ಮಾಡಿಕೊಳುವ ನಿಟ್ಟಿನಲ್ಲಿ ಜನಾಂಗದ ಸಂಘಟನೆ ಮಖ್ಯವಾಗಿದೆ ಎಂದು ಕಿವಿಮಾತು ಹೇಳಿದರು. ಈ ನಿಟ್ಟಿನಲ್ಲಿ ತಿಗಳ ಜನಾಂಗದ ಪ್ರತಿಯೊಂದು ಕೆಲಸಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ಈ ಸಂದರ್ಭದಲ್ಲಿ ರೇವಣ್ಣ ಭರವಸೆ ನೀಡಿದರು.
ಗೌಡರು ಹೋರಾಟ ನಡೆಸಿದ್ದರು: ಹೆಚ್.ಡಿ.ದೇವೇಗೌಡರು ಹಿಂದೆ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿದ್ದ ವೇಳೆಯಲ್ಲಿ ರಾಜಕೀಯವಾಗಿ ಹಿಂದುಳಿದ ಜನಾಂಗಕ್ಕೆ ಒಳ ಮಿಸಲಾತಿ ನೀಡುವ ದಿಸೆಯಲ್ಲಿ ಭಾರಿ ಹೋರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಶಿವಗಂಗೆ ಮಹಾಲಕ್ಷ್ಮಿ ಮಹಾಸಂಸ್ಥಾನದ ಜ್ಞಾನಾನಂದ ಸ್ವಾಮಿಜಿ ಮಾತನಾಡಿ, ತಿಗಳ ಜನಾಂಗಕ್ಕೆ ಯಾವುದೇ ರಾಜಕೀಯ ಪಕ್ಷಗಳು ಸೂಕ್ತ ಸ್ಥಾನ-ಮಾನ ನೀಡುವಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನಾಂಗಕ್ಕೆ ರಾಜ್ಯಸಭೆ ಸ್ಥಾನ ನೀಡಬಹುದು. ಆದರೆ ರಾಜ್ಯದ ಪ್ರಮುಖ ಪಕ್ಷಗಳು ರಾಜ್ಯಸಭಾ ಸ್ಥಾನಗಳನ್ನು ಪ್ರಬಲ ಜನಾಂಗಕ್ಕೆ ಮಾರಾಟ ಮಾಡಿಕೊಂಡಿವೆ ಎಂದು ಆರೋಪಿಸಿದರು.
ಸಂಘಟನೆ ಕೊರತೆ ಕಾರಣ: ಇಂದಿನ ದಿನಮಾನದಲ್ಲಿ ಪ್ರತಿಯೊಂದು ಜನಾಂಗ ರಾಜಕೀಯವಾಗಿ ಪ್ರಮುಖ ಸ್ಥಾನ ಪಡೆದಿವೆ. ಆದರೆ, ತಿಗಳ ಜನಾಂಗಕ್ಕೆ ಯಾವುದೇ ಸ್ಥಾನವಿಲ್ಲ ಎಂದು ವಿಷಾದಿಸಿದ ಅವರು, ಇದಕ್ಕೆ ಪ್ರಮುಖ ಕಾರಣ ತಿಗಳರ ಜನಾಂಗದಲ್ಲಿ ಸಂಘಟನೆ ಕೊರತೆ ಎಂದ ಅವರು ಸಂಘಟನೆ ಇಲ್ಲದಿದ್ದರೆ ಯಾರು ನಿಮ್ಮ ಬಳಿಗೆ ಬರುವುದಿಲ್ಲ ಎಂದು ತಿಳಿಸಿದರು. ಬೆಂಗಳೂರು ಬಾಲಯೋಗಿ ಸಾಯಿ ಮಂಜುನಾಥ ಸ್ವಾಮೀಜಿ, ಭವಾನಿ ರೇವಣ್ಣ, ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹೇಮಾವತಿ ಮಂಜುನಾಥ್, ಜಿ.ಟಿ.ಇಂದಿರಾ ಧರ್ಮಪ್ಪ, ಅಮಿತ್ಶೆಟ್ಟಿ, ಜೆಡಿಎಸ್ ಯುವ ಮುಖಂಡ ಸುನಿಲ್ ಮಂಜುನಾಥ್, ತಿಗಳರ ಜನಾಂಗದ ಅಧ್ಯಕ್ಷ ಹಲ್ಮಡಿ ಗುರುಸಿದ್ದೇಗೌಡ ಇತರರು ಇದ್ದರು.