ಕನ್ನಡಪ್ರಭ ವಾರ್ತೆ ಹಾಸನ ಮಾ. 7
ಜಿಲ್ಲಾದ್ಯಂತ ಗುರುವಾರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ. 72.74 ರಷ್ಟು ಮತದಾನವಾಗಿದೆ.
ಹಿಂದಿನ ಬಾರಿ ಅಂದರೆ 2007 ರಲ್ಲಿ ನಡೆದ ಚುನಾವಣೆಯಲ್ಲಿ ಶೇ. 66. 73 ರಷ್ಟು ಮತದಾನ ಆಗಿತ್ತು.
ಅರಕಲಗೂಡಿನಲ್ಲಿ 3 ಗಂಟೆಗೂ ಮುನ್ನವೇ ಶೇ. 81.74 ರಷ್ಟು ದಾಖಲೆ ಮತದಾನವಾಗಿತ್ತು.
ಯಾವ ವೇಳೆ ಎಷ್ಟೆಷ್ಟು ಮತದಾನ: ಹಾಸನ ನಗರಸಭೆ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ ಮತ್ತು ಬೇಲೂರು ಪುರಸಭೆ ಹಾಗೂ ಅರಕಲಗೂಡು, ಆಲೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದಲೇ ಮತದಾರರು ಹುರುಪಿನಿಂದ ಮತ ಚಲಾಯಿಸಿದರು.
ಸಕಲೇಶಪುರ ಅರಕಲಗೂಡು ಮತ್ತು ಅರಸೀಕೆರೆಗಳಲ್ಲಿ ಚುರುಕಿನ ಮತದಾನ ಪ್ರಾರಂಭವಾಯಿತು. ಈ ಮೂರು ಪಟ್ಟಣಗಳಲ್ಲಿ ಬೆಳಗ್ಗೆ 9 ಕ್ಕೆ ಶೇ.14 ರಷ್ಟು ಮತದಾನವಾಗಿತ್ತು.
ಇದೇ ಅವಧಿಯಲ್ಲಿ ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.12.27, ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ಶೇ.11.03, ಚನ್ನರಾಯಪಟ್ಟಣದಲ್ಲಿ ಶೇ.12.1, ಹಾಸನ ಶೇ.10 ಹಾಗೂ ಹೊಳೆನರಸೀಪುರದಲ್ಲಿ ಶೇ.10ರಷ್ಟು ಮತದಾನವಾಗಿತ್ತು.
ಬೆಳಗ್ಗೆ 9ರಿಂದ 11ರವರೆಗೆ ಅರಸೀಕೆರೆ ಪುರಸಭೆ ಮತ್ತು ಅರಕಲಗೂಡು ಪಟ್ಟಣ ಪಂಚಾಯತಿ ಹೊರತುಪಡಿಸಿದರೆ ಉಳಿದೆಲ್ಲಾ ಕಡೆಗಳಲ್ಲಿ ಮತದಾನ ಇನ್ನಷ್ಟು ಚುರುಕು ಪಡೆಯಿತು.
ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ರವರೆಗೆ ಶೇಕಡ 31.48ರಷ್ಟು ಮತದಾನವಾಗಿದ್ದರೆ, ಚನ್ನರಾಯಪಟ್ಟಣದಲ್ಲಿ ಶೇ. 29, ಹೊಳೆನರಸೀಪುರ ಪುರಸಭೆಯಲ್ಲಿ ಶೇ. 35.32, ಸಕಲೇಶಪುರದಲ್ಲಿ 33.41, ಬೇಲೂರಿನಲ್ಲಿ 36.80, ಆಲೂರಿನಲ್ಲಿ 33.61ರಷ್ಟು ಮತ ಚಲಾವಣೆ ಆಗಿತ್ತು. ಇದೇ ಅವಧಿಯಲ್ಲಿ ಅರಸೀಕೆರೆಯಲ್ಲಿ ಶೇಕಡ 27.60 ಮತ್ತು ಅರಕಲಗೂಡು ಪಪಂ ವ್ಯಾಪ್ತಿಯಲ್ಲಿ 27.31ರಷ್ಟು ಹಕ್ಕು ಚಲಾಯಿಸಿದ್ದರು.
ಇದೇ ರೀತಿ ಬೆಳಿಗ್ಗೆ11ರಿಂದ ಮಧ್ಯಾಹ್ನ1 ರವರೆಗೆ ಜಿಲ್ಲೆಯಲ್ಲಿ ಶೇಕಡ 52ಕ್ಕಿಂತಲೂ ಅಧಿಕದಷ್ಟು ಮತದಾನವಾಗಿತ್ತು. ಒಂದಷ್ಟು ಹಿನ್ನೆಡೆಯಾಗಿದ್ದ ಅರಕಲಗೂಡು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಇದೇ ಹೊತ್ತಿಗಾಗಲೇ ದಾಖಲೆ ಪ್ರಮಾಣ ಅಂದರೆ ಶೇ. 60.12ರಷ್ಟು ಮತದಾನವಾಗಿತ್ತು.
ಉಳಿದಂತೆ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಶೇ. 48.01, ಅರಸೀಕೆರೆ ಪುರಸಭೆ ಶೇ. 47.06, ಚನ್ನರಾಯಪಟ್ಟಣ ಪುರಸಭೆ ಶೇ. 51, ಹೊಳೆನರಸೀಪುರ ಪುರಸಭೆ ಶೇ. 46.09, ಸಕಲೇಶಪುರ ಪುರಸಭೆ ಶೇ. 51.99, ಬೇಲೂರು ಪುರಸಭೆ ಶೇ. 58, ಅರಕಲಗೂಡು ಶೇ. 60.12, ಆಲೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಶೇಕಡ 56.73ರಷ್ಟು ಮತದಾನವಾಗಿತ್ತು.
3 ಗಂಟೆಗೂ ಮುನ್ನವೇ: ಇದೇ ರೀತಿ ಮಧ್ಯಾಹ್ನ 3 ರ ವೇಳೆಗೆ ಜಿಲ್ಲೆಯಲ್ಲಿ ಶೇಕಡ 66.83ರಷ್ಟು ಮತ ಚಲಾವಣೆಗೊಂಡಿತ್ತು. ಅರಕಲಗೂಡಿನಲ್ಲಿ ಶೇಕಡ 81.74ರಷ್ಟು ಮಂದಿ ಮೂರು ಗಂಟೆಗೆ ಮುನ್ನವೇ ತಮ್ಮ ಹಕ್ಕು ಚಲಾಯಿಸಿ ಮತದಾನದ ಪ್ರಾಮುಖ್ಯತೆ ಸಾರಿದರು.
ಮತದಾನದ ಹಿನ್ನೋಟ (2007): ಜಿಲ್ಲೆಯಲ್ಲಿ 2007ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇಕಡ 66.73ರಷ್ಟು ಮತದಾನವಾಗಿತ್ತು. ಹಾಸನ ನಗರಸಭೆಯ 35 ವಾರ್ಡ್ಗಳ ವ್ಯಾಪ್ತಿಯಲ್ಲಿ 55.66ರಷ್ಟು ಮತದಾನವಾದರೆ, 2013ರಲ್ಲಿ ಗರಿಷ್ಠ ಮತದಾನವಾಗಿ ಗಮನ ಸೆಳೆದಿರುವ ಅರಕಲಗೂಡು ಪಪಂ ವ್ಯಾಪ್ತಿಯಲ್ಲಿ ಶೇಕಡ 74.01ರಷ್ಟು ಮತದಾನವಾಗಿದ್ದು, ಅರಸೀಕೆರೆಯಲ್ಲಿ ಶೇ.58.98, ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಶೇ.59.35, ಸಕಲೇಶಪುರ ಶೇ.64.12, ಹೊಳೆನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ 71.05, ಆಲೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 81.59, ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ಶೇ.69.09ರಷ್ಟು ಮತದಾನವಾಗಿತ್ತು.
ಮತದಾನ ಎಲ್ಲೆಲ್ಲಿ ಎಷ್ಟು?
ಹಾಸನ ನಗರಸಭೆ ಶೇ. 67.55
ಅರಸೀಕೆರೆ ಪುರಸಭೆ ಶೇ. 74.18
ಚನ್ನರಾಯಪಟ್ಟಣ ಪುರಸಭೆ ಶೇ.77.55
ಬೇಲೂರು ಪುರಸಭೆ ಶೇ.78.03
ಸಕಲೇಶಪುರ ಪುರಸಭೆ ಶೇ. 77.25
ಹೊಳೆನರಸೀಪುರ ಪುರಸಭೆ ಶೇ. 74.53
ಆಲೂರು ಪಪಂ ಶೇ. 85.75
ಅರಕಲಗೂಡು ಪಪಂ ಶೇ. 87.02