ಹಾಸನ: ಬೇಲೂರು ವಿಧಾನಸಭೆ ಮಲೆನಾಡು ಮತ್ತು ಬಯಲುಸೀಮೆ ಮಿಶ್ರಿತ ಕ್ಷೇತ್ರ. 2008 ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಪರಿಣಾಮ ಅರಸೀಕೆರೆ ತಾಲೂಕು ವ್ಯಾಪ್ತಿಯಲ್ಲಿದ್ದ ಜಾವಗಲ್ ಹೋಬಳಿ ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. ಅಲ್ಲದೇ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿಯೂ ಮಾರ್ಪಟ್ಟಿತು.
ಜಾವಗಲ್ ಹೋಬಳಿ ಸೇರಿದ ಕಾರಣ ಬೇಲೂರು ಕ್ಷೇತ್ರದಲ್ಲಿ ವೀರಶೈವ ಮತದಾರರ ಸಂಖ್ಯೆ ಹೆಚ್ಚಳವಾಯಿತು. ಕಾಫಿ ಬೆಳೆಯುವ ಮತದಾರರ ಜೊತೆ ರಾಗಿ, ಜೋಳ ಬೆಳೆಯುವ ಮತದಾರರು ಸೇರ್ಪಡೆಯಾದರು.
1978 ರಿಂದ 2008 ರವರೆಗೆ ನಡೆದ 8 ಚುನಾವಣೆ ಫಲಿತಾಂಶ ಗಮನಿಸಿದಾಗ ಇದು ಕಾಂಗ್ರೆಸ್ ವಿರೋಧಿ ಕ್ಷೇತ್ರ ಎಂಬುದು ತಿಳಿಯುತ್ತದೆ. 5 ಬಾರಿ ಜನತಾದಳ, ಒಂದು ಬಾರಿ ಬಿಜೆಪಿ ಮತ್ತು ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. 1989 ಮತ್ತು 2008 ರಲ್ಲಿ ಕಾಂಗ್ರೆಸ್ ಗೆದ್ದಿದ್ದರೇ, 1999 ರಲ್ಲಿ ಬಿಜೆಪಿ ಗೆದ್ದಿದೆ. ಉಳಿದ 5 ಚುನಾವಣೆಗಳಲ್ಲಿ ಜನತಾದಳ ಗೆಲವು ಸಾಧಿಸಿದೆ.
ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಾತ್ಯಾತೀತ ಜನತಾದಳದಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿಂದ 2008 ರಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಇದರ ಲಾಭ ಕಾಂಗ್ರೆಸ್ ಅಭ್ಯರ್ಥಿ ವೈ.ಎನ್. ರುದ್ರೇಶಗೌಡರಿಗೆ ಆಯಿತು. 2013 ರ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಸಮರ್ಥ ಅಭ್ಯರ್ಥಿ ಯಾರೆಂಬ ಗೊಂದಲ ವಿಪರೀತವಾಗಿಯೇ ಇದೆ. ವೀರಶೈವ ಮತಗಳು ಹೆಚ್ಚಿಗೆ ಇರುವುದರಿಂದ ಜೆಡಿಎಸ್ ನಿಂದ ಕೆಜೆಪಿಗೆ ವಲಸೆ ಬಂದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಕೆಜೆಪಿಯಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.
ಇದಕ್ಕೆ ಒಪ್ಪದ 2008 ರ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮತ ಪಡೆದಿದ್ದ ಬಿ. ಶಿವರುದ್ರಪ್ಪ, ಮತ್ತು ಕೊರಟಗೆರೆ ಪ್ರಕಾಶ್ ಅವರು ಸ್ಥಳೀಯರಾದ ತಮಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಿಸಲು ಬೆಣ್ಣೂರು ರೇಣುಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷಣ ನಡುವೆ ಸ್ಪರ್ಧೆ ಇದೆ.
ಅಡ್ಡ ಮತದಾನದ ಎಫೆಕ್ಟ್: ಹಾಲಿ ಶಾಸಕರಿಗೆ ಮತ್ತೊಮ್ಮೆ ಟಿಕೆಟ್ ನೀಡಬೇಕೆಂಬ ನಿಯಮ ಕಾಂಗ್ರೆಸ್ ಹೈಕಮಾಂಡ್ ಅಳವಡಿಸಿಕೊಂಡಿದ್ದರೂ ಹಾಲಿ ಶಾಸಕ ವೈ.ಎನ್. ರುದ್ರೇಶ್‌ಗೌಡರಿಗೆ ಟಿಕೆಟ್ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೆಂದರೆ, ವರ್ಷದ ಹಿಂದೆ ರಾಜ್ಯ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ರುದ್ರೇಶ್‌ಗೌಡರ ಅಡ್ಡ ಮತದಾನ ಮಾಡಿದ್ದರಿಂದ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದರೇ ಈ ಕ್ಷೇತ್ರದ ವೀರಶೈವ ಮುಖಂಡರಾದ ಚಂದ್ರಕಲಾಗೆ ಲಭ್ಯವಾಗಬಹುದು.
ಜೆಡಿಎಸ್‌ನಲ್ಲಿ ಅವಾಂತರ: ಜೆಡಿಎಸ್‌ನಲ್ಲಿ ಯಾರಿಗೆ ಟಿಕೆಟ್ ಎಂಬ ವಿಚಾರದಲ್ಲಿ ಅವಾಂತರವೇ ಉಂಟಾಗಿದೆ. ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ. ಜವರೇಗೌಡರು ಈಗಾಗಲೇ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಕುರುಬ ಸಮಾಜದ ಬಿ.ಸಿ. ಮಂಜುನಾಥ್ ಹಾಗೂ ವೀರಶೈವ ಸಮಾಜದ ಕೆ.ಎಸ್ . ಲಿಂಗೇಶ್ ತಮಗೆ ಟಿಕೆಟ್ ನೀಡಬೇಕೆಂದು ಹೋರಾಟವನ್ನೇ ಮಾಡುತ್ತಿದ್ದಾರೆ.
ಆದರೆ ಪಕ್ಷದ ವರಿಷ್ಠರ ಆಲೋಚನೆಯೇ ಬೇರೆ ಇದೆ. ಕಾಂಗ್ರೆಸ್‌ನಿಂದ ಚಂದ್ರಕಲಾ ಮತ್ತು ಕೆಜೆಪಿಯಿಂದ ಶಿವರುದ್ರಪ್ಪನವರಿಗೆ ನೀಡಿದರೆ ವಕ್ಕಲಿಗ ಸಮುದಾಯದ ಜವರೇಗೌಡರಿಗೆ ಟಿಕೆಟ್. ಅದಾಗದೇ ಕಾಂಗ್ರೆಸ್‌ನಿಂದ ರುದ್ರೇಶ್‌ಗೌಡ, ಕೆಜೆಪಿಯಿಂದ ಎಚ್.ಎಂ. ವಿಶ್ವನಾಥ್ ಅವರಿಗೆ ನೀಡಿದರೆ ಬಿ.ಸಿ. ಮಂಜುನಾಥ್ ಅವರಿಗೆ ನೀಡುವ ಚಿಂತನೆ ನಡೆಸಿದ್ದಾರೆ. ಹೀಗೆ ಕ್ಯಾಸ್ಟ್ ಕೆಮಿಸ್ಟ್ರಿ ನಡೆಯುತ್ತಿದೆ.ಮಲೆನಾಡು, ಬಯಲು ಸೀಮೆ ಸಮ್ಮಿಶ್ರಣವಾಗಿರುವ ಬೇಲೂರಿನ ಪ್ರಮುಖ ಸಮಸ್ಯೆ ನೀರಾವರಿ. ಬೇಲೂರಿಗೆ ಹೊಂದಿ ಕೊಂಡಂತೆ ಯಗಚಿ ಜಲಾಶಯ ಇದ್ದರೂ, ಈ ನೀರು ಇಡೀ ಪಟ್ಟಣ ಮತ್ತು ತಾಲೂಕಿಗೆ ಕುಡಿಯಲು ಪೂರೈಕೆಯಾಗುತ್ತಿಲ್ಲ. ಹಳೇಬೀಡು ಮಾದಿಹಳ್ಳಿ ಏತನೀರಾವರಿ ಯೋಜನೆ ಬಾಯಿ ಮಾತಿನಲ್ಲೇ ಇದೆ. ಕಳೆದ ಬಾರಿ ಕಾಂಗ್ರೆಸ್‌ನ ರುದ್ರೇಶ್‌ಗೌಡ ಆಯ್ಕೆಯಾಗಿದ್ದರು. ಈ ಬಾರಿ ಅವರ ಹಾದಿ ಅಷ್ಟು ಸುಲಭವಾಗಿಲ್ಲ. ಜೆಡಿಎಸ್ - ಕಾಂಗ್ರೆಸ್ - ಕೆಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಯಾವಾಗ ಯಾರು ಯಾರ ವಿರುದ್ಧ ಗೆದ್ದಿದ್ದರು.. ಸೋತಿದ್ದರು:
1978 ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಚ್. ಲಕ್ಷ್ಣಣಯ್ಯ 26,045 ಮತ ಪಡೆದು ಗೆದ್ದಿದ್ದರೆ, ರಾಷ್ಟ್ರೀಯ ಕಾಂಗ್ರೆಸ್‌ನ ಉದಯಕುಮಾರ್ 23,286 ಮತ ಪಡೆದು ಸೋತಿದ್ದರು.
1983 ರಲ್ಲಿ ಜನತಾಪಕ್ಷದ ಡಿ. ಮಲ್ಲೇಶ್ 25,648 ಮತ ಪಡೆದು ಗೆದ್ದಿದ್ದರೆ, ರಾಷ್ಟ್ರೀಯ ಕಾಂಗ್ರೆಸ್‌ನ ಎಸ್.ಎಚ್. ಪುಟ್ಟರಂಗನಾಥ್ 19, 806 ಮತ ಪಡೆದು ಸೋತಿದ್ದರು.
1985 ರಲ್ಲಿ ಜನತಾದಳದ ಎಚ್.ಕೆ. ಕುಮಾರಸ್ವಾಮಿ 33,382 ಮತ ಪಡೆದು ಚುನಾಯಿತರಾದರೆ, ಕಾಂಗ್ರೆಸ್‌ನ ಎಚ್.ಕೆ. ನರಸಿಂಹಸ್ವಾಮಿ 21,669 ಮತ ಪಡೆದು ಸೋತಿದ್ದರು.
1989 ರಲ್ಲಿ ಕಾಂಗ್ರೆಸ್‌ನ ಬಿ.ಎಚ್. ಲಕ್ಷಣಯ್ಯ 34,220 ಮತ ಪಡೆದು ಆಯ್ಕೆಯಾದರೆ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಶ್ರೀನಿವಾಸಮೂರ್ತಿ 20,927 ಮತ ಪಡೆದು ಸೋತಿದ್ದರು.
1994 ರಲ್ಲಿ ಮತ್ತೆ ಜನತಾದಳದಿಂದ ಎಚ್. ಕೆ.ಕುಮಾರಸ್ವಾಮಿ 24,927 ಮತಗಳಿಂದ ಗೆದ್ದಿದ್ದರೇ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್.ಎಚ್. ಪುಟ್ಟರಂಗನಾಥ್ 22,974 ಮತಗಳನ್ನು ಪಡೆದು ಸೋತಿದ್ದರು.
1999 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಎಚ್. ಪುಟ್ಟರಂಗನಾಥ್ 32,770 ಮತ ಪಡೆದು ಗೆದ್ದಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ. ಮಲ್ಲೇಶ್ 32,724 ಮತ ಪಡೆದು ಸೋಲು ಅನುಭವಿಸಿದ್ದರು.
2004 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಕೆ.ಕುಮಾರಸ್ವಾಮಿ 31,438 ಮತ ಪಡೆದು ವಿಜಯಿಯಾಗಿದ್ದರು. ಇವರ ಸಮೀಪ ಸ್ಪರ್ಧಿ ಗಂಗಾಧರ್ (ಬಿಜೆಪಿ) 25,884 ಮತ ಪಡೆದು ಪರಾಭವಗೊಂಡಿದ್ದರು.
2008 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರುದ್ರೇಶಗೌಡ (ಕಾಂಗ್ರೆಸ್) 46,451 ಮತ ಪಡೆದು ವಿಜೇತರಾಗಿದ್ದರು. ಆದರೆ ಇವರ ಸಮೀಪ ಸ್ಪರ್ಧಿ ಶಿವರುದ್ರಪ್ಪ (ಬಿಜೆಪಿ) 28,630 ಮತ ಪಡೆದು ಸೋಲನ್ನು ಅನುಭವಿಸಿದ್ದರು.