ಕ.ಪ್ರ.ವಾರ್ತೆ ಹಾಸನ ಮಾ. 29
1906ರಲ್ಲಿ ಉಡುಪಿಯಲ್ಲಿ ಜನ್ಮತಾಳಿದ ಕಾರ್ಪೋರೇಷನ್ ಬ್ಯಾಂಕ್ ಸ್ವದೇಶಿ ಚಿಂತನೆಯಿಂದ ದೇಶದಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. 108ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದೇಶಾದ್ಯಂತ 500ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಯೋಜಿಸಿರುವುದು ಅಭಿನಂದನಾರ್ಹ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಗಿರಿಧರ್ ಶೆಣೈ ತಿಳಿಸಿದರು.
ಕಂದಲಿ ಕಾರ್ಪೋರೇಷನ್ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಂಪನಕುಪ್ಪೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಂಪನಕುಪ್ಪೆ ಹಾಗೂ ಸುತ್ತಮುತ್ತಲಿನ ಗ್ರಾಮ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಶಿಬಿರ ಹೆಚ್ಚು ಅರ್ಥಪೂರ್ಣವಾಗಿದ್ದು ಈ ಗ್ರಾಮದ ಜನರಿಗೆ ವೈದ್ಯಕೀಯ ಸೌಲಭ್ಯಕ್ಕೆ ಕನಿಷ್ಠ 10-15 ಕಿ.ಮೀ ದೂರದ ಹಾಸನ ಅಥವಾ ಆಲೂರಿಗೆ ಹೋಗಬೇಕಾಗಿತ್ತು. ಸುಮಾರು ಲಕ್ಷ ರು.ಗಳಿಗಿಂತ ಹೆಚ್ಚಿನ ಔಷಧಿ ಉಚಿತವಾಗಿ ವಿತರಿಸಲಾಗುತ್ತಿದ್ದು, ಇದಕ್ಕೆ ಶ್ರಮಿಸಿದ ಶಾಖೆಯ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಅವರನ್ನು ಅಭಿನಂದಿಸಿದರು.
ಸಾಮಾಜಿಕ ಸೇವೆಯಲ್ಲಿ ಕೊಡುಗೆ: ಮಂಜುನಾಥ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನ ಎನ್. ರಾವ್ ಮಾತನಾಡಿ, ಬ್ಯಾಂಕುಗಳೆಂದರೆ ಕೇವಲ ಠೇವಣಿ ಸಂಗ್ರಹಿಸುವುದು, ಸಾಲ ವಿತರಿಸುವುದು ಎಂದು ತಿಳಿದ ನಮಗೆ ಕಾರ್ಪೋರೇಷನ್ ಬ್ಯಾಂಕ್ ಕಂದಲಿ ಶಾಖೆ ಸಾಮಾಜಿಕ ಸೇವೆಯಲ್ಲಿ ನಮ್ಮ ಕೊಡುಗೆ ಇದೆ ಎನ್ನುವುದನ್ನು ಆರೋಗ್ಯ ಶಿಬಿರ ಸಂಯೋಜಿಸಿದ್ದಲ್ಲದೆ ಔಷಧಿ ಉಚಿತ ಪೂರೈಸುವುದರ ಮೂಲಕ ಇತರರಿಗೆ ಮಾದರಿಯಾಗಿದೆ ಮತ್ತು ಅವರ ಕಾರ್ಯ ಶ್ಲಾಘನೀಯ ಎಂದ ಅವರು, ವೈದ್ಯಕೀಯ ಸೌಲಭ್ಯವಿಲ್ಲದ ಹಂಪನಕುಪ್ಪೆ ಗ್ರಾಮದವರ ಅನುಕೂಲಕ್ಕಾಗಿ ವಾರಕ್ಕೊಮ್ಮೆ ಸಂಚಾರಿ ವಾಹನ ಸೌಲಭ್ಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಹಂಪನಕುಪ್ಪೆ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುಂದರಂ ಮಾತನಾಡಿ, ಒಂದೇ ಸೂರಿನಲ್ಲಿ ಎಲ್ಲ ತಜ್ಞ ವೈದ್ಯರು ಸಿಗುವಂತೆ ಮಾಡಿದ ಕಾರ್ಪೋರೇಷನ್ ಬ್ಯಾಂಕಿನ ಕಾರ್ಯವನ್ನು ಮರೆಯಲು ಸಾಧ್ಯವಿಲ್ಲ. ಕೇವಲ ಒಂದು ವಾರದ ಅವಧಿಯಲ್ಲಿ ಇಂತಹ ಬೃಹತ್ ಶಿಬಿರ ಸಂಯೋಜನೆ ಅನುಭವಿಗಳ ಮಾರ್ಗದರ್ಶನದಲ್ಲಿ ಮಾತ್ರ ಸಾಧ್ಯ. ಇಂತಹ ವ್ಯವಸ್ಥಾಪಕರು ಕಂದಲಿ ಶಾಖೆಗೆ ಸಿಕ್ಕಿರುವುದು ಸುಯೋಗ ಎಂದರಲ್ಲದೆ ಮುಂದೆಯೂ ಇಂತಹ ರಚನಾತ್ಮಕ ಕಾರ್ಯಗಳಿಗೆ ನಮ್ಮ ಸಹಾಯವಿದೆ ಎಂದರು.
ಡೆಪ್ಯೂಟಿ ಜನರಲ್ ಮ್ಯಾನೇಜರ್ ನಾಗರಾಜ ಉಡುಪ ಮಾತನಾಡಿ, ಮೈಸೂರು ವಲಯದಲ್ಲಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದಾಗ ಕಂದಲಿ ಶಾಖೆಯನ್ನು ಆರಿಸಿಕೊಂಡಿದ್ದೆವು. ಕ್ರಮಬದ್ಧವಾದ ಯೋಜನೆ, ಎಲ್ಲಾ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆ ಹಾಗೂ ಮುಖ್ಯವಾಗಿ ಜನರಿಗೆ ಅಗತ್ಯವಿರುವ ಕಡೆ ಕಾರ್ಯಕ್ರಮದ ಸಂಯೋಜನೆ ಕಂದಲಿ ಶಾಖೆಯ ವೈಶಿಷ್ಟ್ಯವಾಗಿದ್ದು, ವಲಯ ಕಚೇರಿ ಪರವಾಗಿ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
600ಕ್ಕೂ ಹೆಚ್ಚು ಜನರು ಹಂಪನಕುಪ್ಪೆ ಹಾಗೂ ಹತ್ತಿರದ ಗ್ರಾಮಗಳಾದ ಮಾಳಗನಹಳ್ಳಿ, ಮೇಗರಹಳ್ಳಿ, ಉಪ್ಪಳ್ಳಿ, ಶಿಂಗೋಡನಹಳ್ಳಿಕೊಪ್ಪಲು, ದೇವರ ಮನೆ ಕೊಪ್ಪಲು, ಕಿರಕಡಲು ಮೊದಲಾದ ಗ್ರಾಮಗಳಿಂದ ಆಗಮಿಸಿ ಉಚಿತ ತಪಾಸಣೆ ಹಾಗೂ ಔಷಧಿ ಮತ್ತು ಚಿಕಿತ್ಸೆ ಪಡೆದರು. ಎಸ್‌ಡಿಎಂ ಆಸ್ಪತ್ರೆಯ ತಜ್ಞ 20 ವೈದ್ಯರು ಭಾಗವಹಿಸಿದ್ದರು.
ಐ.ಆರ್.ವೆಂಕಟೇಶ ಸ್ವಾಗತಿಸಿದರು. ಕಂದಲಿ ಶಾಖಾಧಿಕಾರಿ ಆರ್.ಕೆ.ಬಾಲಚಂದ್ರ ನಿರೂಪಿಸಿದರು. ಸಾಲಗಾಮೆ ಶಾಖೆಯ ಹಿರಿಯ ವ್ಯವಸ್ಥಾಪಕ ಮಾಧವ ಪೈ, ಸುಂದರ ಭಟ್, ಪರಮಶಿವಯ್ಯ, ಪ್ರಕಾಶಕುಮಾರ ಇದ್ದರು.