ಹಾಸನ: ಜಿಲ್ಲಾದ್ಯಂತ ಬುಧವಾರ ಭಾರಿ ಮಳೆ ಆಗುತ್ತಿದೆ. ವಾರದಿಂದ ಮಳೆ ಸುರಿಯುತ್ತಲೇ ಇರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಮಳೆ ಇದೇ ರೀತಿ ಮುಂದುವರಿದರೇ ಬೆಳೆಗಳಿಗೆ ಹಾನಿ ಉಂಟಾಗುವ ಆತಂಕ ಎದುರಾಗಿದೆ.
ಬುಧವಾರ ಬೆಳಗ್ಗೆ ಆರಂಭವಾದ ಮಳೆ ಸಂಜೆಯಾಗುತ್ತಲೇ ಬಿರುಸುಗೊಂಡಿತು. ಇದರಿಂದ ಶಾಲೆ ಮಕ್ಕಳು, ಸರ್ಕಾರಿ ಕಚೇರಿ ನೌಕರರು ಮನೆಗೆ ಹೋಗಲು ತೀವ್ರ ತೊಂದರೆಯಾಯಿತು. ಮಾರುಕಟ್ಟೆಗಳಿಗೆ ಜನ ಬಾರದ ಪರಿಣಾಮ ವ್ಯಾಪಾರ ವಹಿವಾಟಿನ ಪ್ರಮಾಣ ಕುಸಿದಿತ್ತು.
ಹೇಮಾವತಿ ಜಲಾಶಯಕ್ಕೆ ಭಾರಿ ನೀರು: ಸಕಲೇಶಪುರ, ಬೇಲೂರು ಮತ್ತಿತರ ಕಡೆ ಭಾರಿ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಈಗ ಜಲಾಶಯಕ್ಕೆ 30 ಸಾವಿರ ಕ್ಯುಸೆಕ್ ಹರಿದು ಬರುತ್ತಿದೆ. ಜಲಾಶಯದ ಮಟ್ಟದಲ್ಲೂ ಏರಿಕೆಯಾಗಿದೆ. ಜಲಾಶಯದ ಮಟ್ಟ ಬುಧವಾರ ಸಂಜೆ 2905.28 ಅಡಿಗಳಿಗೆ ಏರಿಕೆಯಾಗಿದೆ. ಜಲಾಶಯದಿಂದ 250 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 250 ಕ್ಯುಸೆಕ್ ಹೊರ ಬಿಡಲಾಗುತ್ತಿದೆ.
ವಾಟೆಹೊಳೆ: ಈ ಜಲಾಶಯದ ಇಂದಿನ ಮಟ್ಟ 3142.71 ಅಡಿ. ಒಳ ಹರಿವು 144 ಕ್ಯುಸೆಕ್ ಹೊರ ಹರಿವು ಇಲ್ಲ.
ಯಗಚಿ: ಜಲಾಶಯದ ನೀರಿನ ಮಟ್ಟ 3154.226 ಅಡಿ. ಒಳ ಹರಿವು 225 ಕ್ಯುಸೆಕ್, ಹೊರ ಹರಿವು ನಾಲೆಗೆ 50 ಕ್ಯುಸೆಕ್.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಆಲೂರು-15 ಮಿ.ಮೀ. ಕೆಂಚಮ್ಮನಹೊಸಕೋಟೆ-80, ಕುಂದೂರು-65., ಪಾಳ್ಯ-29.4, ಅರಕಲಗೂಡು-3.4, ಮಲ್ಲಿಪಟ್ಟಣ-39, ರಾಮನಾಥಪುರ-2.4, ಕೊಣನೂರು- 1.2, ದೊಡ್ಡಮಗ್ಗೆ-10.2, ದೊಡ್ಡಬೆಮ್ಮತ್ತಿ-15.6, ಅರಸೀಕೆರೆ-4.5, ಬಾಣಾವರ-2.2, ಗಂಡಸಿ-2.4, ಯಳವಾರೆ-1, ಜಾವಗಲ್-3.6, ಬೇಲೂರು-1.4, ಹಳೇಬೀಡು-3, ಅರೇಹಳ್ಳಿ-23.8, ಬಿಕ್ಕೋಡು-12.2, ಗೆಂಡೆಹಳ್ಳಿ-9, ಹಗರೆ-1.4 ಚನ್ನರಾಯಪಟ್ಟಣ-4.2, ಉದಯಪುರ-0.6, ಶ್ರವಣಬೆಳಗೊಳ-2.1. ಹಾಸನ-1.2, ಕಟ್ಟಾಯ 16.2, ಸಾಲಗಾಮೆ-4.2, ಶಾಂತಿಗ್ರಾಮ-4, ದುದ್ದ-1.6, ಗೊರೂರು -28.2, ಹೊಳೆನರಸೀಪುರ-11.2, ಹಳ್ಳಿಮೈಸೂರು 2.8, ಹಳೇಕೋಟೆ-19.6, ಸಕಲೇಶಪುರ-77.2, ಬಾಳ್ಳುಪೇಟೆ-51, ಯಸಳೂರು-131, ಬೆಳಗೋಡು-86.2, ಹಾನಬಾಳು 43.2, ಹೆತ್ತೂರು 143.4 ಮಿಮೀ. ಮಾರನಹಳ್ಳಿ-175.2 ಹೊಸೂರು-76.2., ಶುಕ್ರವಾರಸಂತೆ-116.2, ಬಾಳ್ಳುಪೇಟೆ-40.4ಮಿಮೀ ಮಳೆಯಾಗಿದೆ.
ಅತಿವೃಷ್ಟಿ ಹಾನಿ ಪ್ರದೇಶಕ್ಕೆ ಪುರಸಭೆ ಅಧ್ಯಕ್ಷ, ಸದಸ್ಯರ ಭೇಟಿ
ಸಕಲೇಶಪುರ: ಅತಿವೃಷ್ಟಿಯಿಂದ ಹಾನಿಯಾಗಿರುವ ಪಟ್ಟಣದ ಕುಶಾಲ ನಗರದ ಪ್ರದೇಶಕ್ಕೆ ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆಗೆ ಸುಮಾರು 15 ಅರ್ಜಿಗಳು ಬಂದಿವೆ. ಈ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ ಎಂದರು.
ಕಳಪೆ ಕಾಮಗಾರಿಯಿಂದ ತಡೆಗೋಡೆ ಕುಸಿದು ಆತಂಕದಲ್ಲಿ ಬದುಕುತ್ತಿರುವ ಕುಟುಂಬಕ್ಕೆ ತಾತ್ಕಾಲಿಕ ವ್ಯವಸ್ಥೆಮಾಡಲಾಗುವುದು. ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು. ಹಾನಿಯಾಗಿರುವ ಪ್ರದೇಶಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಹಾನಿಯಾಗಿರುವ ಜನರಿಗೆ ಪರಿಹಾರ ನೀಡಲಾಗುವುದು. ಈ ಪ್ರದೇಶಕ್ಕೆ ತಡೆಗೋಡೆಗಳ ಅವಶ್ಯಕತೆ ಇದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮುಕೇಶ್ ಶೆಟ್ಟಿ, ಸದಸ್ಯರಾದ ಸಯ್ಯದ್ ಮಫೀರ್, ಸುನೀತ, ಗಿರೀಶ್, ಉಮೇಶ್, ಪದ್ಮ ಇತರರು ಇದ್ದರು.