ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 15 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 6,275 ರು. ನಗದು, 2 ಬೈಕ್ ಹಾಗೂ ಒಂದು ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ. ಆಲೂರು ತಾಲೂಕು ಬೈರಾಪುರ ಗ್ರಾಮದಿಂದ ಹೊಸೂರು ಗ್ರಾಮಕ್ಕೆ ಹೋಗುವ ಕ್ರಾಸ್ ಹತ್ತಿರ ಮರದ ಕೆಳಗೆ ಅಂದರ್ ಬಹರ್ ಜೂಜಾಟಾಡುತ್ತಿದ್ದ ಬೈರಾಪುರ ಗ್ರಾಮದ ಆನಂದ, ದೇವರಾಜು, ಯಡವನಹಳ್ಳಇ ಗ್ರಾಮದ ದಾಸೇಗೌಡ, ಧರ್ಮಪುರಿ ಗ್ರಾಮದ ರವಿ, ಹಾಸನ ವಲ್ಲಭಾಯಿ ರಸ್ತೆಯ ವಾಸಿ ನೂರುಲ್ಲಾಖಾನ್, ಬೈರಾಪುರ ಗ್ರಾಮದ ಸುಬ್ಬೇಗೌಡ, ರಘುಪತಿ ಎಂಬವರನ್ನು ಬಂಧಿಸಲಾಗಿದೆ.
ಮೂವರ ಬಂಧನ: ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ಪಟ್ಟಣದ ಮಹೇಶ್ವರಿನಗರದ ಸ್ಮಶಾನ ಹತ್ತಿರ ಅಂದರ್ ಬಾಹರ್ ಜೂಜಾಡುತ್ತಿದ್ದ ಪಟ್ಟಣದ ವಾಸಿಗಳಾದ ಕುಮಾರ್, ವಸಂತ್ ಕುಮಾರ್, ಮಹೇಶ್ವರಿ ನಗರ ಬಡಾವಣೆಯ ಕೃಷ್ಣ ಎಂಬವರನ್ನು ಬಂಧಿಸಿ, 1,260 ರು. ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಬೇಲೂರು ತಾಲೂಕು ಯಕ್ಶೆಟ್ಟಿ ಗ್ರಾಮದ ಹತ್ತಿರ ಅಂದರ್ ಬಾಹರ್ ಬಾಹರ್ ಜೂಜಾಟಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಹನುಮನಹಳ್ಳಿ ಶಿವಣ್ಣ, ಕರಗಡದ ನಾಗೇಶ್, ಯಕ್ಶೆಟ್ಟಿ ಗ್ರಾಮದ ಶಿವ, ಗಿಣ, ಶಿವ ಎಂಬವರನ್ನು ಬಂಧಿಸಲಾಗಿದೆ. ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 650 ರು. ಮತ್ತು ಎರಡು ಬೈಕ್, ಒಂದು ಆಟೋ ವಶಪಡಿಸಿಕೊಂಡಿರುವ ಬೈಲೂರು ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವತಿ ನಾಪತ್ತೆ: ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿ, ಎಂ.ಹೊಸೂರು ಗ್ರಾಮದ ಜಯರಾಮ್ ಅವರ ಮಗಳು ದೀಪಿಕಾ (22) ಮನೆಯಿಂದ ಹೊರಗೆ ಹೋದವಳು ಹಿಂತಿರುಗಿಲ್ಲ ಎಂದು ದೂರು ನೀಡಲಾಗಿದೆ. 5 ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಹಿರೀಸಾವೆ ಠಾಣೆ ದೂ. 08176-226888 ಕ್ಕೆ ಸಂಪರ್ಕಿಸಲು ಕೋರಲಾಗಿದೆ.
ರಂಜಾನ್ ಪ್ರಯುಕ್ತ ಮುಸ್ಲಿಮರಿಗೆ ಪಡಿತರ
ಬೇಲೂರು: ರಂಜಾನ್ ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಮುಸ್ಲಿಂ ಬಾಂಧವರಿಗೆ ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ಭಾರತ್ ಪೆಟ್ರೋ ಲ್ ಬಂಕ್ ಮಾಲೀಕ ಸೈಯದ್ ತೌಫಿಕ್ ತಿಳಿಸಿದರು. ರಂಜಾನ್ ಹಬ್ಬದ ಅಂಗವಾಗಿ ಐಡಿಯಲ್ ಉರ್ದು ಪಬ್ಲಿಕ್ಶಾಲೆಯಲ್ಲಿ ಬಡ ಮುಸ್ಲಿಂ ಬಾಂಧವರಿಗೆ ಹಣದ ಜೊತೆಗೆ ಪಡಿತರವನ್ನು ವಿತರಿಸಿದ ನಂತರ ಮಾತನಾಡಿ, ಸಡಗರ ಸಂಬ್ರಮಕ್ಕೆ ಇನ್ನೊಂದು ಹೇಸರೇ ರಂಜಾನ್ ಹಬ್ಬವಾಗಿದೆ. ಇದನ್ನು ಸಮುದಾಯದ ಎಲ್ಲಾ ವರ್ಗದವರು ಆಚರಿಸಬೇಕು ಎಂಬುದು ತಮ್ಮ ಅಭಿಲಾಷೆಯಾಗಿದ್ದು, ಅದರಂತೆ ಪ್ರತಿವರ್ಷ ರಂಜಾನ್ ಹಬ್ಬದ ಹಿಂದಿನ ದಿನ ಪಡಿತರ ಹಾಗೂ ಹಬ್ಬದ ಖರ್ಚಿಗೆ ಹಣವನ್ನು ನೀಡುತ್ತಾ ಬಂದಿದ್ದೇವೆ. ಪಟ್ಟಣದ 23 ವಾರ್ಡುಗಳಲ್ಲಿ ವಾಸವಾಗಿರುವ ಕಡುಬಡವರ ಪಟ್ಟಿಯನ್ನು ತಯಾರಿಸಿ ಅವರಿಗೆ ನೀಡಲಾಗುತ್ತದೆ. 1 ಬ್ಯಾಗಿನಲ್ಲಿ ಅಕ್ಕಿ, ಎಣ್ಣೆ, ಸಕ್ಕರೆ, ಶ್ಯಾವಿಗೆ, ಈರುಳ್ಳಿ, ಬೆಳ್ಳುಳ್ಳಿ, ಮಸಾಲೆ ಪದಾರ್ಥಗಳನ್ನು ಇಡಲಾಗಿರುತ್ತದೆ ಎಂದರು. ಮುಸ್ಲಿಂ ಮುಖಂಡರಾದ ಶಫೀಕ್, ಫಾರೂಕ್, ಜಾಫರ್, ಗೌಸ್ ಶರೀಫ್, ಶಬ್ಬೀರ್, ನೌಷಾದ್, ಮಾಮು ಹಾಗೂ ಇತರರು ಇದ್ದರು.
ಜಿಲ್ಲಾ ಮಟ್ಟದ ಚೆಸ್: ರೂಪಶ್ರೀ ಪ್ರಥಮ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಂತರ ಶಾಲಾ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಸಂತ ಜೋಸೆಫರ ಪ್ರೌಢಶಾಲಾ 10 ನೇ ತರಗತಿ ವಿದ್ಯಾರ್ಥಿನಿ ರೂಪಶ್ರೀ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯನ್ನು ಪ್ರತಿನಿಧಿಸಿ ಶಾಲೆಗೆ ಗೌರವ ತಂದ ಆಕೆಯನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.
ಬಿಲ್ ಕಲೆಕ್ಟರ್ ನೇಮಕದಲ್ಲಿ ಅವ್ಯವಹಾರ ನಡೆದಿಲ್ಲ: ಸ್ಪಷ್ಟನೆ
ಬೇಲೂರು: ತಾಲೂಕಿನ ನಾರ್ವೆ ಪೇಟೆ ಗ್ರಾಮ ಪಂಚಾಯ್ತಿಯಲ್ಲಿ ಕರ ವಸೂಲಿಗಾರ ಹುದ್ದೆಯನ್ನು ಸರ್ಕಾರದ ನೀತಿ ನಿಯಮದಂತೆ ತೆಗೆದುಕೊಂಡಿದ್ದು ಯಾವುದೆ ಆದೇಶ ಉಲ್ಲಂಘಿಸಿಲ್ಲ ಎಂದು ನಾರ್ವೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗುರುಶಾಂತ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ ವಸೂಲಿಗಾರ ಹುದ್ದೆಗೆ 12 ಅಭ್ಯರ್ಥಿಗಳಿಂದ ಅರ್ಜಿ ಬಂದಿದ್ದು ಅದರಲ್ಲಿ ಪರಿಶಿಷ್ಟಜಾತಿಗೆ ಸೇರಿದ 2 ಅಭ್ಯರ್ಥಿಗಳ ಪೈಕಿ ನಾರಾಯಣ ಎಂಬುವನ್ನು ಆಯ್ಕೆ ಮಾಡಿದ್ದು ಇದರಲ್ಲಿ ಯಾವುದೆ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಆರೋಪ ನಿರಾಕರಣೆ: ಕೆಲವರು 3 ಲಕ್ಷ ರು. ಪಡೆದು ಹುದ್ದೆ ನೀಡಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದಾರೆ. ನಾರಾಯಣರ ಬಡತನ ಸ್ಥಿತಿಯನ್ನು ನೋಡಿ ಕೆಲಸ ನೀಡಲಾಗಿದೆ ಎಂದರು. ಹಲವಾರು ತಮ್ಮಣ್ಣ ಎಂಬುವರಿಗೆ ಹುದ್ದೆ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಅದರೆ ತಮ್ಮಣ್ಣ ಈಗಾಗಲೆ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಆದ್ದರಿಂದ ಅವರ ಆಯ್ಕೆಯನ್ನು ಪರಿಗಣಿಸಿಲ್ಲ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ಅನೀಲ್ಕುಮಾರ್, ಬಾಬು, ಪುಷ್ಪ ಹಾಜರಿದ್ದರು.
ವಾಸವಿ ಕ್ಲಬ್ ವತಿಯಿಂದ ಕಾವೇರಿಗೆ ಬಾಗಿನ ಅರ್ಪಣೆ
ರಾಮನಾಥಪುರ: ಕೊಣನೂರಿನಲ್ಲಿ ಭಾನುವಾರ ಸಂಜೆ ಕಾವೇರಿ ನದಿಗೆ ಕೊಣನೂರಿನ ವಾಸವಿ ಕ್ಲಬ್ ಮತ್ತು ಆರ್ಯವೈಶ್ಯ ಮಂಡಳಿ ಸಂಯೋಗದೊಂದಿಗೆ ಅಷ್ಟ ವಿದ್ಯಾರ್ಜನೆಗಳಿಂದ ಪೂಜಿಸಿ ಬಾಗಿನ ಸಲ್ಲಿಸಲಾಯಿತು. ವಾವಿ ಕ್ಲಬ್ನ ಅಧ್ಯಕ್ಷ ಬಿ.ಸಿ.ಮಂಜುನಾಥ್ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದೆ ಎಂದು ಸಂಸತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆರ್ಯವೈಶ್ಯ ಮಂಡಳಿ ಕಾರ್ಯಾಧ್ಯಕ್ಷ ಬಿ.ಆರ್. ಸುಬ್ಬರಾವ್, ಕ್ಲಬ್ನ ಮಹಿಳಾ ಅಧ್ಯಕ್ಷೆ ವಾಸವಿ ಲೋಕೇಶ್, ಹಾಗೂ ಮಹಿಳಾ ಸಂಘಟನೆಯವರು, ಗುರು, ಆನಂದ, ಬಿ.ಸತೀಶ್, ರಾಜೇಶ್, ಸುಬ್ರಹ್ಮಣ್ಯ, ರಾಘವೇಂದ್ರ, ರಾಮಚಂದ್ರ, ಮಂಜುನಾಥ್.ಕೆ.ಎಸ್.ಕೃಷ್ಣಕುಮಾರ್ ಇದ್ದರು.
ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ ಆ. 1ರಿಂದ
ಹಾಸನ: ವಿಶೇಷ ಒಲಂಪಿಕ್ಸ್ ಭಾರತ್ ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿಕಲಚೇತನ ಕ್ರೀಡಾಪಟುಗಳಿಗಾಗಿ ಆಗಸ್ಟ್ 1 ಮತ್ತು 2ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಕ್ರೀಡಾಕೂಟವು 10 ರಿಂದ 12, 13 ರಿಂದ 15, 16 ರಿಂದ 30ರವರೆಗಿನ ವಯೋವಾನದ ಬಾಲಕ-ಬಾಲಕಿಯರಿಗಾಗಿ ವಿವಿಧ ನ್ಯೂನತೆಯುಳ್ಳ ವಿಕಲಚೇತನರಿಗಾಗಿ ಒಟ್ಟು 4 ಗುಂಪುಗಳಲ್ಲಿ ಸ್ಪರ್ಧೆ ನಡೆಸಲಾಗುವುದು. ಕಿವುಡು ಮತ್ತು ಮೂಕರಿಗಾಗಿ 100 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ, 50 ಮೀ. ಈಜು, ಬ್ಯಾಡ್ಮಿಂಟನ್, ಫುಟ್ಬಾಲ್, ಟೇಬಲ್ ಟೆನ್ನಿಸ್ ಹಾಗೂ ಖೋ-ಖೋ ಸ್ಪರ್ಧೆಗಳು ನಡೆಯಲಿವೆ. ಮಾನಸಿಕ ವಿಕಲಚೇತನರಿಗಾಗಿ 50 ಮೀ. ಓಟ, 200 ಮೀ. ಓಟ, 4.100 ರಿಲೇ, ಗುಂಡು ಎಸೆತ, ಸ್ಟಾಂಡಿಂಗ್ ಲಾಂಗ್ ಜಂಪ್, ಲಾಂಗ್ ಜಂಪ್, ಸಾಫ್ಟ್ ಬಾಲ್ ಥ್ರೋ , 25 ಮೀ. ಈಜು, ಬೋಚಿ, ಬ್ಯಾಡ್ಮಿಂಟನ್, ಫುಟ್ಬಾಲ್, ಟೇಬಲ್ ಟೆನ್ನೀಸ್ಣ ಹಾಗೂ ಖೋ-ಖೋ ಸ್ಪರ್ಧೆಗಳು ನಡೆಯಲಿವೆ. ದೈಹಿಕ ನ್ಯೂನತೆಯುಳ್ಳವರಿಗಾಗಿ 50 ಮೀ. ಓಟ, ಸಾಫ್ಟ್ಬಾಲ್ ಥ್ರೋ, 100 ಮೀ. ಓಟ, 4..100 ಮಿ. ರಿಲೇ, 100 ಮೀ. ವ್ಹೀಲ್ಚೇರ್ ಓಟ, ಗುಂಡು ಎಸೆತ, 50 ಮೀ. ಈಜು, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ. ಅಂಧರಿಗಾಗಿ 100 ಮೀ. ಓಟ, 200 ಮೀ. ಓಟದ ಸ್ಪರ್ಧೆ ನಡೆಯಲಿದೆ. ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು ಆಗಸ್ಟ್ 1 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8-30ಕ್ಕೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದು.
ಮಕ್ಕಳಿಗೆ ಶಿಕ್ಷಣ ಕಡ್ಡಾಯ
ಹಾಸನ: ಪ್ರತಿಯೊಂದು ಮಗುವೂ ಕನಿಷ್ಠ 8ನೇ ತರಗತಿವರೆಗಿನ ಶಿಕ್ಷಣವನ್ನು ಪಡೆಯುವುದು ಆರ್ಟಿಇ-2009ರ ಪ್ರಕಾರ ಕಡ್ಡಾಯವಾಗಿದೆ. ಶಾಲಾ ಅವಧಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡು ಬಂದರೆ ದೂರವಾಣಿ ಸಂಖ್ಯೆ 9480695243, 9449394865ಗೆ ಮಾಹಿತಿ ನೀಡುವುದು. ಅರ್ಹ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುವಂತೆ ಮಾಡಲು ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಹಾಸನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಸಹಕಾರ ಸಂಘದ ಕಾರ್ಯದರ್ಶಿ ರಾಜಿನಾಮೆಗೆ ಆಗ್ರಹ
ಹಾಸನ: ಸರಿಯಾಗಿ ಕಚೇರಿಗೆ ಹಾಜರಾಗದ ಹಾಗೂ ಲೆಕ್ಕಪತ್ರ ಒದಗಿಸದ ಕೆಂಚಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವಸಂತ ಕೂಡಲೇ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಸಂಘದ ಅಧ್ಯಕ್ಷ, ನಿರ್ದೇಶಕರು ಮತ್ತು ಹಾಲು ಉತ್ಪಾದಕರು ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಕೆಂಚಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾಜಿ, ಕಳೆದ 15 ದಿನಗಳ ಹಿಂದೆ ಕಾರ್ಯದರ್ಶಿ ವಸಂತ ಅವರಿಗೆ ವ್ಯವಹಾರದ ಲೆಕ್ಕಪತ್ರವನ್ನು ನೀಡುವಂತೆ ಕೇಳಲಾಗಿತು. ಇದಕ್ಕೆ ನಿರಾಕರಿಸಿದ ಕಾರ್ಯದರ್ಶಿ ಅಂದಿನಿಂದ ಸರಿಯಾಗಿ ಕಚೇರಿಗೆ ಆಗಮಿಸುತ್ತಿಲ್ಲ ಎಂದು ದೂರಿದರು.
ರಾಜಿನಾಮೆಗೆ ಆಗ್ರಹ: ಕಾರ್ಯದರ್ಶಿ ಕಚೇರಿಗೆ ಗೈರು ಹಾಜರಿ ಆಗಿರುವುದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದರೇ ಲೆಕ್ಕಪತ್ರವನ್ನು ನೀಡಿ, ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದ ಅವರು, ಬೇಡಿಕೆಗೆ ಸ್ಪಂದಿಸದಿದ್ದರೇ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ನಿರ್ದೇಶಕ ಹಾಗೂ ಹಾಲು ಉತ್ಪಾದಕ ಚಂದ್ರೇಗೌಡ, ಜಗದೀಶ್, ಇತರರು ಇದ್ದರು.
ಟೇಕ್ವಾಂಡೊ ತರಬೇತಿ ಆ.1 ರಿಂದ
ಹಾಸನ: ಒಲಂಪಿಕ್ ಕ್ರೀಡೆಯಾದ ಟೇಕ್ವಾಂಡೊ ತರಗತಿಗಳನ್ನು ಆಗಸ್ಟ್ 1 ರಿಂದ ವಾರಕ್ಕೆ ಮೂರು ದಿನ ಸೋಮವಾರ, ಬುಧವಾರ, ಶುಕ್ರವಾರ ಸಂಜೆ 5.30 ರಿಂದ 7.00 ರವರೆಗೆ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾರಂಭಿಸಲಾಗುತ್ತಿದೆ. ಟೇಕ್ವಾಂಡೊ ಕ್ರೀಡೆ ಒಲಂಪಿಕ್ ಕ್ರೀಡೆಯಾಗಿದ್ದು ಭಾರತ ಸರ್ಕಾರ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ಸರ್ಕಾರದ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿದೆ. ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಂದ್ಯಾವಳಿ ಹಾಗೂ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವಕಾಶವಿದೆ. ಇದೊಂದು ರಕ್ಷಣಾತ್ಮಕ ಮಾರ್ಷಲ್ ಆರ್ಟ್ ಆಗಿದ್ದು ಹೆಣ್ಣು ಮಕ್ಕಳಿಗೆ
ಹೆಚ್ಚು ಪ್ರಯೋಜನಕಾರಿಯಾಗಲಿದೆ. ಆಸಕ್ತರು ಟೇಕ್ವಾಂಡೊ ತರಬೇತಿದಾರ ಸಚಿನ್ ಕೆ. ಗೌಡ (ಮೊ.9916806274) ಮತು ಅಂಜನ್ ನಾಗೇಂದ್ರ (ಮೊ.8495817045) ಸಂಪರ್ಕಿಸಬಹುದಾಗಿದೆ.
ವಿಡಿಯೋಗ್ರಫಿ ತರಬೇತಿ
ಹಾಸನ: ಎಂಎಸ್ಎಂಇ, ಹೈದರಾಬಾದ್ ಮತ್ತು ಎಂಎಸ್ಎಂಇ, ಸಚಿವಾಲಯ ನವದೆಹಲಿ ಇವರ ಸಹಯೋಗದಲ್ಲಿ ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಇವರು ಹಾಸನ ಜಿಲ್ಲೆಯ ವಿದ್ಯಾವಂತ ನಿರುದ್ಯೋಗ ಯುವಕ ಮತ್ತು ಯುವತಿಯವರಿಗೆ 18 ದಿನಗಳ ಡಿಜಿಟಲ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ವೃತ್ತಿ ಕೌಶಲ್ಯಾಭಿವೃದ್ದಿ ತರಬೇತಿಯನ್ನು ಆಗಸ್ಟ್ 5 ರಿಂದ ನಡೆಸಲು ಉದ್ದೇಶಿಸಿದೆ. ತರಬೇತಿ ಪಡೆಯಲಿಚ್ಚಿಸುವ 21 ರಿಂದ 35 ವರ್ಷ ವಯೋವುತಿವುಳ್ಳ ಕನಿಷ್ಠ ಪಿಯುಸಿ ಶಿಕ್ಷಣ ಪಡೆದಿರುವ ಯುವಕ, ಯುವತಿಯರು ಆ.1 ರೊಳಗೆ ವಿವರಗಳೊಂದಿಗೆ ಅರ್ಜಿಯನ್ನು ಉಪನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಬಿ.ಎಂ. ರಸ್ತೆ, ಡೇರಿ ಸರ್ಕಲ್, ಹಾಸನ ಇವರಿಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9481543245 ಸಂಪರ್ಕಿಸಬಹುದಾಗಿದೆ.
ಅಧಿಕಾರಿಗಳ ಸಭೆ ನಾಳೆ
ಹಾಸನ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಹೇಮಾವತಿ ಸಭಾಂಗಣದಲ್ಲಿ ಜು. 30ರಂದು ಬೆಳಗ್ಗೆ 10.30ಕ್ಕೆ ಡೆಂಘೀ ವಿರೋಧಿ ಮಾಸಾಚರಣೆ ಕುರಿತು ಅಂತರ ಇಲಾಖೆ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9ಕ್ಕೆ ನಗರದ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ ಜಾಥಾ ಹೊರಡಲಿದ್ದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಜಾಥಾ ಉದ್ಘಾಟಿಸುವರು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಎನ್.ರಾಜ್ಗೋಪಾಲ್ ತಿಳಿಸಿದ್ದಾರೆ.
ಹುಚ್ಚು ನಾಯಿ ಕಡಿತ: ಗಾಯ
ಬೇಲೂರು: ಹುಚ್ಚು ನಾಯಿಯೊಂದು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯೊಬ್ಬರಿಗೆ ಕಚ್ಚಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಚೆನ್ನಕೇಶವಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗ ಹುಚ್ಚು ನಾಯಿ ಕಡಿದ ಘಟನೆ ಸಂಭವಿಸಿದೆ. ಪ್ರಸಾದಿಹಳ್ಳಿ ಗ್ರಾಮದ ನಂಜಮ್ಮ ಎಂಬುವರು ಸಂತೆಗಾಗಿ ಪಟ್ಟಣಕ್ಕೆ ಬಂದಿದ್ದು ರಸ್ತೆ ದಾಟುವಾಗ ಹುಚ್ಚು ನಾಯಿ ಕಾಲಿಗೆ ಕಡಿದಿದೆ. ನಾಯಿ ಕಡಿದ ರಭಸಕ್ಕೆ ಬಲಗಾಲಿನ ಹಿಮ್ಮಡಿಯ ಮಾಂಸಖಂಡ ಪೂರ್ತಿ ಕಿತ್ತುಬಂದಿದೆ. ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮುಖ್ಯ ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಓಡಾಡುತ್ತಿವೆ. ಬೀದಿ ನಾಯಿ ಉಪಟಳದ ಬಗ್ಗೆ ಈ ಹಿಂದೆಯೇ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಗ್ಯಾಧಿಕಾರಿ ವೆಂಕಟೇಶ್ ಅವರನ್ನು ತರಾಟೆ ತೆಗೆದುಕೊಂಡಿದ್ದರು. ಬೀದಿಗಳಲ್ಲಿ ಮಕ್ಕಳು ಹಾಗು ವೃದ್ಧರು ನಾಯಿಗಳ ಭಯದಿಂದ ಓಡಾಡಲು ಹೆದರುತ್ತಿದ್ದು ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಪುರಸಭೆ ಎಚ್ಚೆತ್ತು ಕೊಳ್ಳಲಿ ಎಂಬುದು ನಾಗರಿಕರ ಒತ್ತಾಯವಾಗಿದೆ.