ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.30
ಕೃಷಿ ಅಥವಾ ಖಾಲಿ ಭೂಮಿಯನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲು ಸಾವಿರಾರು ರೈತರು ಮುಂದೆ ಬಂದಿದ್ದಾರೆ. ಆದರೆ ಅದಕ್ಕೆ ಪರಿಹಾರ ನೀಡಲು ಹಣದ ಕೊರತೆಯಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾ ಹೇಳಿದ್ದಾರೆ.
ಹಾಸನದ ಸಕಲೇಶಪುರ ತಾಲೂಕೊಂದರಲ್ಲೇ ಸುಮಾರು 25 ಸಾವಿರ ಎಕರೆ ಭೂಮಿ ನೀಡಲು ರೈತರು ಮುಂದೆ ಬಂದಿದ್ದಾರೆ. ಅರಣ್ಯ ಇಲಾಖೆಯ ನಾನಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ರೈತರಿಗೆ ಪರಿಹಾರ ನೀಡಲು ಸುಮಾರು 1 ಸಾವಿರ ಕೋಟಿ ಹಣದ ಅಗತ್ಯವಿದೆ. ಅರಣ್ಯ ಭಾಗದ ಸುತ್ತಲಿನ ಇಂತಹ ಭೂಮಿಗಳು ಸಿಗುವುದರಿಂದ ಮಾನವ-ಪ್ರಾಣಿಗಳ ಸಂಘರ್ಷ ನಿಯಂತ್ರಿಸಬಹುದು ಎಂದು ವಿವೇಕ್ ಮೆನನ್ ಅವರ “BMt¾Úß«é ಮ್ಯಾಮಲ್ಸ್- ಎ ಫೀಲ್ಡ್ Væçsé’ ಪುಸ್ತಕ ಬಿಡುಗಡೆಯಲ್ಲಿ ಹೇಳಿದರು.
ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳ ಕಾಡಂಚಿನ ಪ್ರದೇಶದ ಕೃಷಿ ಭೂಮಿಗಳು ನಿರುಪಯೋಗಿಯಾಗಿವೆ. ಬಹುತೇಕರು ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. ಆ ಭೂಮಿ ನೀಡಿ ಅರಣ್ಯ ಇಲಾಖೆಗೆ ಸಹಕಾರ ನೀಡಲು ರೈತರು ಉತ್ಸುಕವಾಗಿದ್ದಾರೆ. ಸರ್ಕಾರದಿಂದ ಮಾತ್ರ ಇದನ್ನು ಮಾಡಲು ಸಾಧ್ಯವಿಲ್ಲ. ಅನ್ಯ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಬೇಕಿದೆ ಎಂದು ಲೂತ್ರಾ ಅಭಿಪ್ರಾಯಪಟ್ಟರು.
ವನ್ಯಮೃಗಗಳ ರಕ್ಷಣೆ ಎಂದಾಕ್ಷಣ ಹುಲಿ ಹಾಗೂ ಆನೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಇದನ್ನು ಸೇರಿಸಿದಂತೆ ಇನ್ನಿತರ ವನ್ಯಮೃಗಗಳ ರಕ್ಷಣೆ ನಮ್ಮೆಲ್ಲರ ಮೇಲಿದೆ. ಪಶ್ಚಿಮಘಟ್ಟಗಳಲ್ಲಿರುವ ಕೆಲ ಅಪರೂಪದ ಪ್ರಾಣಿಗಳ ರಕ್ಷಣೆ ಜರೂರಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ ಇರುವಂತೆ ರಾಜ್ಯದಲ್ಲೂ ಅದೇ ರೀತಿ ಘೋಷಿಸಿ ಪೋಷಿಸುವ ಯೋಜನೆಯಿತ್ತು. ಆದರೆ ನಾನಾ ಕಾರಣಕ್ಕೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸಿಗಲಿಲ್ಲ ಎಂದರು.
ಪ್ರಾಣಿಗಳಿಗೆ ಧ್ವನಿಯಾಗೋಣ: ಕುಂಬ್ಳೆ: ಪ್ರಾಣಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮಾತು ಬರುವುದಿಲ್ಲ. ಆದರೆ ನಾವೇ ಅವುಗಳ ಕಷ್ಟ ಅರಿತು ವನ್ಯ ಮೃಗಗಳ ಧ್ವನಿಯಾಗಬೇಕು. ಅಂತಹ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು. ಈಗ ಭಾರತದಲ್ಲಿರುವ ವನ್ಯ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಹೊರಬೇಕು ಎಂದು ಖ್ಯಾತ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದಲ್ಲಿ 450ಕ್ಕೂ ಅಧಿಕ ಪ್ರಾಣಿಗಳಿವೆ ಎಂದು ಮಾಹಿತಿ ಹೇಳುತ್ತಿದೆ. ಇದರಲ್ಲಿ ಕೆಲವು ಪ್ರಾಣಿಗಳು ಈಗಾಗಲೇ ಅಳಿವಿನಂಚಿನಲ್ಲಿರುವ ಮೃಗಗಳಾಗಿವೆ. ಇದರ ರಕ್ಷಣೆಗಾಗಿ ಪಣತೊಡಬೇಕಿದೆ ಎಂದು ಹೇಳಿದರು.