ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 4
ಹುಲಗೂರು ಗ್ರಾಮದಲ್ಲಿ ರಸ್ತೆ ಅಗಲಿಕರಣ, ಗೂಡಂಗಡಿ ತೆರವು, ನಿರಂತರ ಜ್ಯೋತಿ ಪೂರೈಕೆ, ಪಂಪ್ಸೆಟ್ಗೆ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ಹುಲಗೂರು ಗ್ರಾಮ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನ ಹುಲಗೂರು ಗ್ರಾಮಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿಗೆ ಬೀಗ
ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳಿಗಾಗಿ ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಿದರು.
ಮೇಲಾಧಿಕಾರಿ ಗಮನಕ್ಕೆ
ನಂತರ ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಅಧಿಕಾರಿ ಆರ್.ಎಸ್. ರಾಠೋಡ ನಿರಂತರ ಜೋತಿ ಪೂರೈಸುವುದು, ಪಂಪಸೆಟ್ಗೆ ನೀರಾವರಿ ವ್ಯವಸ್ಥೆ ಮಾಡಲು ಸಮರ್ಪಕ ವಿದ್ಯುತ್ ಪೂರೈಸಬೇಕು. ಅಲ್ಲದೆ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಕೈಕೊಟ್ಟರೆ ಗ್ರಾಮದಲ್ಲಿ ಕೂಡಾ ವಿದ್ಯುತ್ ನಿಂತು ಹೋಗುತ್ತದೆ. ಆದ್ದರಿಂದ ತಕ್ಷಣ ಹುಲಗೂರು ಗ್ರಾಮಕ್ಕೆ ಪ್ರತ್ಯೆಕ ಫೀಡರ್ ಅಳವಡಿಸಿ, ನಿರಂತರ ವಿದ್ಯುತ್ ಒದಗಿಸಬೇಕೆಂದರೂ ಆಗ್ರಹಿಸಿದಾಗ ಪ್ರತಿಕ್ರಿಯೆ ನೀಡಿದ ಅಧಿಕಾರಿ ರಾಠೋಡ ಸಂಬಂಧಿಸಿದ ವಿಷಯವನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಸಾರ್ವಜನಿಕರಿಗೆ ತಿಳಿಸಿದರು.
ಗ್ರಾಮಸ್ಥರ ಪಟ್ಟು
ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಟೈರ್ಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಬೆಂಕಿ ಹಚ್ಚುವುದನ್ನು ನಿಲ್ಲಿಸಿದರು. ರಸ್ತೆ ಬಂದ್ ಮಾಡಿ, ವಾಹನಗಳನ್ನು ತಡೆದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದರು.
ಹುಲಗೂರು ಗ್ರಾಮದಲ್ಲಿ ಹಲವಾರು ಮಾರ್ಗಗಳು ಕುಡಿಕೊಂಡಿದ್ದು, ಗ್ರಾಮದಲ್ಲಿ ಪೂರ್ಣ ಪ್ರಮಾಣವಾಗಿ ಇಕ್ಕಟ್ಟಾದ ರಸ್ತೆಗಳಿದ್ದು, ಅಕ್ಕಪಕ್ಕದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಿ, ಮಕಾನಕಟ್ಟಿಯಿಂದ ಹೊರ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ರಸ್ತೆ ಅಗಲಿಕರಣ ಮಾಡಬೇಕೆಂದು ವಿವಿಧ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಪ್ರತಿಭಟನಾ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ವಿ.ಎ. ಕುಲಕರ್ಣಿ, ಜಿಲ್ಲಾ ಪಿಡಬ್ಲ್ಯೂ ಮುಖ್ಯ ಅಭಿಯಂತರ, ಹೆಸ್ಕಾಂ ಅಧಿಕಾರಿ ಓ.ಎಚ್. ಶಶಿಧರ, ಸಿಪಿಐ ಬಿ.ಬಿ. ಪಾಟೀಲ್, ಪಿಎಸ್ಐ ಸುರೇಶ ಕುಂಬಾರ ಅಧಿಕಾರಿಗಳು ಸಾರ್ವಜನಿಕರ ಕುಂದು-ಕೊರತೆ ಸರಿಪಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯ ಲಕ್ಷ್ಮಣ ಹೊನ್ನಣ್ಣವರ, ಗ್ರಾಂಪಂ ಅಧ್ಯಕ್ಷ ಮೆರಂಬಿ ನೆರ್ತಿ, ರುದ್ರಪ್ಪ ಕೆಳಗಿನಮನಿ, ಅನಿಲ ಅತ್ತಿಗೇರಿ, ಶೇಖಣ್ಣ ಗಣಾಚಾರಿ, ಅಶೋಕ ದೇಸಾಯಿ, ಖಲೀಂಫೀರ ಖಾದ್ರಿ, ಗಿರಿಮಲ್ಲಪ್ಪ ದೇಸಾಯಿ, ಯಲ್ಲಪ್ಪಗೌಡ್ರ ಪಾಟೀಲ್, ರತ್ನವ್ವ ಸಂಶಿ, ಸರೋಜಾ ಪಾಟೀಲ್, ರೇಣುಕಾ ಪಾಟೀಲ್, ರೀಯಾಜ್ಅಹ್ಮದ್ ಮುಲ್ಲಾ, ಗ್ರಾಮದ ಮುಖಂಡರು, ಜನರು ಪಾಲ್ಗೊಂಡಿದ್ದರು.