ಹಾವೇರಿ

ದುಪ್ಪಟ್ಟಾದ ನೀರಿನ ಬೆಲೆ: ಪರದಾಟ

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.7
ಬೇಸಿಗೆ ಕಾಲಿಡುವ ಮುನ್ನವೇ ಹಾವೇರಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ತಲೆ ಎತ್ತಿದೆ. ಈಗ್ಲೇ ಹೀಗೆ ಇನ್ ಬ್ಯಾಸಿಗಿ ಟೈಮ್‌ದಾಗ ನಮ್ ಗತಿ ಹರೋಹರ ಎಂದು ಈಗಾಗಲೇ ಹಾವೇರಿ ವಾಸಿಗಳು ಬೇಸಿಗೆ ನೆನೆಸಿಕೊಂಡು ಬೆವರುತ್ತಿದ್ದಾರೆ.
ಪ್ರಸಕ್ತ ನಗರಸಭೆ ಆಡಳಿತಕ್ಕೆ ಬಂದ ಮೇಲೆ ಹಾವೇರಿಗರಿಗೆ ಒಂದರ ಮೇಲೊಂದರಂತೆ ಕಹಿ ನೆನಪುಗಳನ್ನು ಉಳಿಸಿದೆ ಹೊರತು ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯ. ಅಲ್ಲದೇ ವಿವೇಚನಾರಹಿತ ಕಾರ್ಯವೈಖರಿಯಿಂದಾಗಿ ಜನತೆಯ ಶಾಪಕ್ಕೆ ತುತ್ತಾಗಿದೆ.
ಈಗಾಗಲೇ ಕೊಡ ನೀರಿಗಾಗಿ ನೀರೆಯರು ಮತ್ತು ಮಕ್ಕಳು ಓಣಿಯಿಂದ ಓಣಿಗೆ ಅಲೆದಾಡಿ ಬೇಸತ್ತಿದ್ದಾರೆ. ಇನ್ನು ಕುಡಿಯಲು ನೀರೆಲ್ಲಿಂದ ತರಬೇಕು ಎಂಬ ಆತಂಕದಿಂದ ತಲೆ ಮೇಲೆ ಕೈಹೊತ್ತು ಕುಳಿತಾಗಲೇ ಹೊಳೆದದ್ದು ಮಿನರಲ್ ವಾಟರ್ ಐಡಿಯಾ...
ಮಿನರಲ್ ವಾಟರ್: ಹಾವೇರಿ ನಗರದಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ ಬರ ಶುರುವಾಗಿದೆ. ಇನ್ನು ಬಳಕೆಗೆ ಅಲ್ಲಲ್ಲಿ ಕೊರೆಸಿದ ಕೊಳವೆ ಬಾವಿಗಳು ನಾಗರಿಕರ ಬಳಕೆ ನೀರು ಪೂರೈಸಿದ್ದರಿಂದ ಕೊಂಚ ನೆಮ್ಮದಿ ನೀಡಿದೆ. ಇನ್ನು ಕುಡಿಯುವ ನೀರಿಗಾಗಿ ಅಲೆದಾಡಿದವರಿಗೆ ಹಾಗೂ ಕೊಂಚ ಸಿರಿವಂತರು ಮಿನರಲ್ ವಾಟರ್ ತಂದಿರಿಸಿಕೊಂಡು ಜೀವನ ನಿರ್ವಹಿಸುವ ಗಮ್ಮತ್ತು ಆರಂಭವಾಗಿದೆ.
ಮಿನರಲ್ ವಾಟರ್ ತರಿಸುವುದು ಆರೋಗ್ಯಪೂರ್ಣ ಹಾಗೂ ಕೊಂಚ ದುಬಾರಿ ಎನಿಸಿದರೂ ಪಡೆಯಲೇಬೇಕಾಗಿದೆ. ಹೀಗಾಗಿ ಬಹುತೇಕ ಹಾವೇರಿ ನಗರ ವಾಸಿಗಳು ಆರಂಭದಲ್ಲಿ 20 ಲೀ. ಸಾಮರ್ಥ್ಯದ 1-2 ಕ್ಯಾನ್ ತಂದಿರಿಸಿಕೊಂಡು ಮಡದಿ, ಮಕ್ಕಳನ್ನು ಸಲುಹುತ್ತಿದ್ದಾರೆ. ಆದರೆ, ಉಳ್ಳವರು ಹಾಗೂ ಮಧ್ಯಮ ವರ್ಗದವರಿಗೆ ಇದು ಓಕೆ. ಆದರೆ, ಬಡವರ ಸ್ಥಿತಿ ಕೇಳೋರ್ಯಾರು?
ದುಪ್ಪಟ್ಟು ಬೆಲೆ: ಹಾವೇರಿ ನಗರ ಸೇರಿದಂತೆ ಜಿಲ್ಲಾದ್ಯಂತ ಬಹುತೇಕ 20 ಲೀಟರ್‌ನ ಮಿನರಲ್ ವಾಟರ್ ಕ್ಯಾನ್ ಬೆಲೆ ರು. 30. ಆದರೆ, ಹಾವೇರಿ ನಗರದಲ್ಲಿ ಇದರ ಬೆಲೆ ದುಪ್ಪಟ್ಟಾಗಿದೆ. ಕಳೆದ ಡಿಸೆಂಬರ್‌ನಲ್ಲಿ ರು. 30ಗೆ ಸಿಗುತ್ತಿದ್ದ ಕ್ಯಾನ್ ಮಿನರಲ್ ವಾಟರ್ ಜನವರಿಯಲ್ಲಿ ರು. 40 ಹಾಗೂ ಪ್ರಸಕ್ತ ರು. 50-60ಗೆ ಏರಿಕೆಯಾಗಿದೆ. ಈ ಕುರಿತಂತೆ ನೀರು ಸರಬರಾಜು ಮಾಡುವವರೊಂದಿಗೆ ಚೌಕಾಸಿ ಮಾಡಿದಿರೋ ಮುಗಿಯಿತು. ಮತ್ತೆ ನೀವು ಕರೆ ಮಾಡಿದಾಗ 'ಇಲ್ ಸರ್ ನೀರಿನ ಕ್ಯಾನ್ ಖಾಲಿ ಆಗಿವೆ' ನಾಳೆ ಕೊಡ್ತಿನಿ. ಇಲ್ಲವೇ 2 ದಿನ ಆಗಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳುವ ಮೂಲಕ ತಮ್ಮ ವ್ಯಾಪಾರಿ ಬುದ್ಧಿ ತೋರುತ್ತಾರೆ.
ಗ್ರಾಮೀಣ ಶುದ್ಧ ನೀರಿನ ಘಟಕದತ್ತ ದಾಪುಗಾಲು: ಇತ್ತೀಚೆಗೆ ಎಚ್.ಕೆ. ಪಾಟೀಲ ಪ್ರತಿಷ್ಠಾನ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿದ್ದು, ಇದು ಜನತೆಗೆ ಜೀವಜಲವಾಗಿದೆ. ಇದರಿಂದಾಗಿ ಬಹುತೇಕ ಗ್ರಾಮಗಳ ಜನತೆ ಆರೋಗ್ಯಪೂರ್ಣ ಕುಟುಂಬ ನಿರ್ವಹಣೆಗೆ ಮುಂದಾಗಿದ್ದು, ಪ್ರತಿ ಬಾರಿಯೂ ಇದರ ಸ್ಥಾಪಕರನ್ನು ಸ್ಮರಿಸುತ್ತಿದ್ದಾರೆ. ಇಲ್ಲಿ ರು. 2 ನಾಣ್ಯವನ್ನು ಯಂತ್ರದೊಳಗೆ ತಳ್ಳಿದರೆ 20 ಲೀಟರ್ ಶುದ್ಧ ನೀರನ್ನು ಧಾರಾಳವಾಗಿ ನೀಡುತ್ತದೆ. ಘಟಕ ಈಗ ನಗರ ವಾಸಿಗಳ ಆಕರ್ಷಣೆ ಕೇಂದ್ರಬಿಂದು. ಮೊದಲೇ ಶುದ್ಧ ನೀರಿನ ಘಟಕಗಳು ಸಾರ್ವಜನಿಕವಾಗಿದ್ದು, ಇಲ್ಲಿ ನಾಲ್ಕಾರು ಕ್ಯಾನ್‌ಗಳನ್ನು ಇರಿಸಿದರೇ ಮುಗಿತು. ಮತ್ತೆ 3 ದಿನ ಚಿಂತೆ ಇಲ್ಲ. ಇದರಿಂದಾಗಿ ಈಗ ಗ್ರಾಮಸ್ಥರೂ ನೀರಿಗಾಗಿ ಕ್ಯೂ ನಿಲ್ಲುವಂತಾಗಿದೆ. ಹಾವೇರಿ ಜಿಲ್ಲಾದ್ಯಂತ ಎಚ್.ಕೆ. ಪಾಟೀಲ ಪ್ರತಿಷ್ಠಾನವು ಗ್ರಾಮೀಣ ಭಾಗಗಳಲ್ಲಿ ಮಾತ್ರ ಇಂಥ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದೆ. ಅಲ್ಲದೇ ಜಿಲ್ಲೆಯ ಶಿಗ್ಗಾಂವಿ ಹಾಗೂ ಸವಣೂರು ತಾಲೂಕುಗಳಲ್ಲಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ಅಲ್ಲಲ್ಲಿ ಇಂಥ ಘಟಕಗಳನ್ನು ಸ್ಥಾಪಿಸುವ ಮೂಲಕ ಅಲ್ಲಿನವರಿಗೆ ಒತ್ತು ನೀಡಿದ್ದಾರೆ. ಹಾಗಾದರೆ, ಹಾವೇರಿ ಶಹರ ವಾಸಿಗಳ ಪಾಡೇನು? ಅನಾಥ ಮಕ್ಕಳಾದೆವು ನಾವು... ಇನ್ನು ನಮ್ಗೆ ಕುಡಿಯಲೂ ನೀರಿಲ್ಲ... ಎಂಬುದು ನಿತ್ಯದ ಪಾಡಾಗಿದೆ. ಇದಕ್ಕೆ ಕಾಲವೇ ಉತ್ತರಿಸಬೇಕು.
-ಕಿರಣ ಮಾಸಣಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!