ಬ್ಯಾಡಗಿ: ಆಶ್ರಯ ಮನೆ ಒದಗಿಸುವಂತೆ ಆಗ್ರಹಿಸಿ ನಿವೇಶನ ರಹಿತ ನೂರಾರು ಮಹಿಳೆಯರು ಶುಕ್ರವಾರ ಪುರಸಭೆಗೆ ಮುತ್ತಿಗೆ ಹಾಕಿ 2 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಮಂಜುನಾಥ ಪೂಜಾರ ಮಾತನಾಡಿ, ಇದೀಗ ಆಯ್ಕೆ ಮಾಡಿದ ಪಟ್ಟಿಯಲ್ಲಿ 35ಕ್ಕೂ ಫಲಾನುಭವಿಗಳು ಸ್ವಂತ ನಿವೇಶನ ಹೊಂದಿದ್ದಾರೆ. ಸುಳ್ಳು ದಾಖಲೆ ಸಲ್ಲಿಸಿ ನಿವೇಶನ ಪಡೆದಿದ್ದಾರೆ, ಮೂರಿ ಬಾರಿ ಅರ್ಜಿ ಸಲ್ಲಿಸಿದವರಿಗೂ ನಿವೇಶನ ಸಿಕ್ಕಿಲ್ಲ. ಮಾಜಿ ಶಾಸಕರ, ಪುರಸಭೆ ಸದಸ್ಯರ ಆಪ್ತರಿಗೆ ಆಶ್ರಯ ಮನೆ ನೀಡಲಾಗಿದೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ಕೂಡಲೇ ಮರುಪರಿಶೀಲನೆ ಮಾಡಿ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಿ ಎಂದು ಆಗ್ರಹಿಸಿದರು. ಸುಮಾರು 70ಕ್ಕೂ ಹೆಚ್ಚು ಆಶ್ರಯ ಮನೆಗಳಲ್ಲಿ ಬಾಡಿಗೆದಾರರು ವಾಸಿಸುತ್ತಿದ್ದಾರೆ. ತನಿಖೆ ನಡೆಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಖ್ಯಾಧಿಕಾರಿಗಳು ಮಧ್ಯ ಪ್ರವೇಶಿಸಿ ಬಾಡಿಗೆ ಮನೆ ಸ್ವಾಧೀನಪಡಿಸಿಕೊಂಡು ನಿವೇಶನ ರಹಿ ತರಿಗೆ ನೀಡುವಂತೆ ಆಗ್ರಹಿಸಿದರು. ರಮೀಜ್ ಹಮ್ಮಿಗಿ ಮಾತನಾಡಿ, ಫಲಾನುಭವಿಗಳಿಂದ ರು. 10ರಿಂದ 15 ಸಾವಿರ ಪಡೆದು ಆಯ್ಕೆ ಸಮಿತಿ ಮೇಲೆ ಕಾಣದ ಕೈಗಳು ಪ್ರಭಾವ ಬೀರಿವೆ. ಸರ್ಕಾರಿ ನೌಕರಿ ಇದ್ದವರೂ ಆಶ್ರಯ ಮನೆ ಪಡೆದಿದ್ದು, ಅರ್ಹರೇ ಸೌಲಭ್ಯದಿಂದ ವಂಚಿತರಾಗಿರುವ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದರು. ಮುಖ್ಯಾಧಿಕಾರಿ ಪಿ.ಎಂ. ಚನ್ನಪ್ಪನವರ ಮಾತನಾಡಿ, ನಿವೇಶನ ಕೋರಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆಕ್ರಮ ನಿವೇಶನ ಪಡೆದವರ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು. ಹೊಸದಾಗಿ ನಿವೇಶನ ರಚಿಸಲಾಗುತ್ತಿದ್ದು, ಆ ವೇಳೆ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ ಎಂದರು.