ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.8
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಕುರಿತಂತೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆ ಜನತೆಗೆ ಕೊಂಚ ಸಿಹಿ ಕೊಂಚ ಕಹಿ ದೊರೆತಂತಾಗಿದೆ.
ಜಿಲ್ಲೆಯ ಜನತೆಯ ಬಹುದಿನಗಳ ನಿರೀಕ್ಷೆಯ ಸರ್ವಜ್ಞ ಪ್ರಾಧಿಕಾರಕ್ಕೆ ರು. 2ಕೋಟಿ ನೀಡಿದ್ದು, ಜಿಲ್ಲೆಯ ಜನರಲ್ಲಿ ಕೊಂಚ ಸಂತಸ ಮೂಡಿಸಿದೆ.
ಕೃಷಿ ಉತ್ಪನ್ನ ಕ್ಷೇತ್ರದ ಸುಧಾರಣೆಗಾಗಿ ಬಜೆಟ್ನಲ್ಲಿ ತಕ್ಕಮಟ್ಟಿಗೆ ಅನುದಾನ ಕಲ್ಪಿಸುವ ಮೂಲಕ ಕೃಷಿಗೆ ಪೂರಕವಾಗಿ ಜಿಲ್ಲೆಯ ರೈತರಿಗೆ ಕಾಣಿಕೆ ನೀಡಿದ್ದಾರೆ.
ಪ್ರಸಕ್ತ ಬಜೆಟ್ನಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ ರು. 2 ಕೋಟಿ, ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ, ಸವಣೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ರು. 7 ಕೋಟಿ, ರಾಣಿಬೆನ್ನೂರಿನ ಕೃಷಿ ಉತ್ಪನ್ನಗಳ ಉತ್ತೇಜನಕ್ಕೆ ಹಾಗೂ ದಾಸ್ತಾನಿಗಾಗಿ ರು. 1 ಕೋಟಿ ಹಾಗೂ ಕನಕನ ಬಾಡದ ಅಭಿವೃದ್ಧಿಗೆ ರು. 1 ಕೋಟಿ, ದೇಶದ ಏಕೈಕ ಜಾನಪದ ವಿಶ್ವ ವಿದ್ಯಾಲಯ ಜಿಲ್ಲೆ ಗೊಟಗೋಡಿಯಲ್ಲಿದ್ದು, ವಿವಿಗೆ ರು. 3 ಕೋಟಿ, ಶಿಗ್ಗಾಂವಿಯ ಅಟಲ್ಜಿ ಶಾಲೆಗೆ ರು. 8 ಕೋಟಿ ಅನುದಾನ ನೀಡುವ ಮೂಲಕ ಜಿಲ್ಲೆಯ ಜನರನ್ನು ಒಲಿಸಿಕೊಳ್ಳುವ ಒಂದು ಪ್ರಯತ್ನ ಸಾಗಿದೆ.
ಇದರೊಂದಿಗೆ ಹಾವೇರಿ ಹಾಗೂ ರಾಣಿಬೆನ್ನೂರು ನಗರಗಳ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡುವ ಭರವಸೆ ನೀಡಿದ್ದಾರೆ.
ಆದರೆ, ಜಿಲ್ಲೆಯ ಜನತೆ ಬಹುದಿನಗಳಿಂದ ಕಾತರದಿಂದ ಕಾಯುತ್ತಿರುವ ಸ್ಪೈಸ್ ಪಾರ್ಕ್, ಜಿಲ್ಲೆಯ ವಿವಿಧ ಏತ ನೀರಾವರಿ ಯೋಜನೆಗಳು, ನಿಜಶರಣ ಅಂಬಿಗರ ಚೌಡಯ್ಯ ಪ್ರಾಧಿಕಾರ, ಗೋವಿನಜೋಳ ಹಾಗೂ ಹತ್ತಿ ಬೆಳೆಯನ್ನು ಆವರ್ತನಿಧಿ ಪಟ್ಟಿಗೆ ಸೇರಿಸುವ ಕಾರ್ಯ ಹಾಗೂ ಬಹುನಿರೀಕ್ಷಿತ ಜಾನಪದ ವಿವಿಗೆ ಈಗ ನೀಡಿರುವ ಅನುದಾನ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಜಿಲ್ಲೆಯ ಜನತೆ ಬಹುದಿನಗಳಿಂದ ಕಾತರದಿಂದ ಕಾಯುತ್ತಿರುವ ಸ್ಪೈಸ್ ಪಾರ್ಕ್, ವಿವಿಧ ಏತ ನೀರಾವರಿ ಯೋಜನೆಗಳು, ನಿಜಶರಣ ಅಂಬಿಗರ ಚೌಡಯ್ಯ ಪ್ರಾಧಿಕಾರ, ಗೋವಿನಜೋಳ ಹಾಗೂ ಹತ್ತಿ ಬೆಳೆಯನ್ನು ಆವರ್ತನಿಧಿ ಪಟ್ಟಿಗೆ ಸೇರಿಸುವ ಕಾರ್ಯ, ಬಹುನಿರೀಕ್ಷಿತ ಜಾನಪದ ವಿವಿಗೆ ನೀಡಿರುವ ಅನುದಾನ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.