ಹಾವೇರಿ: ಇಲ್ಲಿನ ಶಿವಲಿಂಗನಗರದ ಬನಶಂಕರಿ ಜಾತ್ರಾ ಮಹೋತ್ಸವ, ಕಳಸಾರೋಹಣ ಹಾಗೂ ನವಚಂಡಿಕಾ ಹೋಮ ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭ ಫೆ. 15ರಂದು ಜರುಗಲಿದೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು, ಸಿಂಧಗಿಯ ಶಾಂತವೀರ ಪಟ್ಟಾಧ್ಯಕ್ಷರು, ಅಗಡಿ ಆನಂದವನದ ಗುರುದತ್ತಮೂರ್ತಿ ಶ್ರೀಗಳು, ದಯಾನಂದ ಪುರಿ ಶ್ರೀಗಳು ಹಾಗೂ ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳು ಸಾನ್ನಿಧ್ಯ ವಹಿಸುವರು. ಫೆ. 15ರಂದು ಬೆಳಗ್ಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪೂರ್ಣಕುಂಭಮೇಳ ಹಾಗೂ ಮಂಗಲ ವಾದ್ಯಗಳೊಂದಿಗೆ ಕಳಸಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನ ತಲುಪಲಿದೆ. ದೇವಸ್ಥಾನದಲ್ಲಿ ಪುಣ್ಯಾಹವಾಚನ, ಗಣೇಶ ಪೂಜೆ, ನವಗ್ರಹ ಹೋಮ, ನವಚಂಡಿಕಾ ಹೋಮ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮತ್ತಿತರ ಕಾರ್ಯಕ್ರಮಗಳು ಜರುಗುವವು. ಮಧ್ಯಾಹ್ನ 1.30ಕ್ಕೆ ಮಹಾಪ್ರಸಾದ ನಂತರ 4 ಗಂಟೆಗೆ ಬನಶಂಕರಿ ದೇವಿಯ ಉತ್ಸವ ಮೂರ್ತಿಯ ಅಲಂಕೃತ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಸಾಗಿ ಮತ್ತೆ ದೇವಸ್ಥಾನವನ್ನು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪಡಿತರ ಚೀಟಿದಾರರ ಮಾಹಿತಿ ಪ್ರಕಟ
ಹಾವೇರಿ: ಜಿಲ್ಲೆಯ ಪಡಿತರ ಚೀಟಿದಾರರ ಮಾಹಿತಿಗಾಗಿ ಚಾಲ್ತಿಯಲ್ಲಿರುವ ಮತ್ತು ರದ್ದಾದ ಹಾಗೂ ನಿಲಂಬನೆಯಲ್ಲಿರುವ ಪಡಿತರ ಚೀಟಿಗಳ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗಳಲ್ಲಿ ಪ್ರಕಟಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆಯ ಉಪನಿರ್ದೇಶಕರು ಸೂಚಿಸಿದ್ದಾರೆ.