ಕನ್ನಡಪ್ರಭ ವಾರ್ತೆ, ಹಾವೇರಿ, ಜ.23
ಜಿಲ್ಲೆಯ ಜಲಾನಯನ ಇಲಾಖೆಯಲ್ಲಿ ಹೆಚ್ಚಿನ ಭ್ರಷ್ಟತೆ ತುಂಬಿದೆ. ಈ ಇಲಾಖೆಯಲ್ಲಿ ಉದ್ಯೋಗ ಖಾತ್ರಿಯ ಅನುದಾನ ಅಧಿಕ ಮಟ್ಟದಲ್ಲಿ ದುರುಪಯೋಗವಾಗಿದೆ. ಅದರ ಪ್ರಮಾಣ # 4,27,786ಗಳಾಗಿದ್ದು, ಸಂಬಂಧಿಸಿದ ಅಧಿಕಾರಿಗಳಲ್ಲಿ ಈ ಕುರಿತಂತೆ ಅಪರಾಧಿ ಭಾವವೇ ಇಲ್ಲ ಎಂದು ಓಂಬುಡ್ಸ್ಮನ್ ಎಸ್.ಸಿ. ಮತ್ತಿಹಳ್ಳಿ ವಿಷಾದ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿನ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುರುಪಯೋಗದ ಪ್ರಕರಣಗಳು ಕಡಿಮೆಯಾಗುತ್ತಿರುವುದು ಸಂತಸ ತಂದಿದೆ.
ಸತ್ಯಾಸತ್ಯತೆ ಬಳಿಕ ಕ್ರಮ: ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಏಜೆನ್ಸಿಗಳ ಮೂಲಕ ಕೂಲಿಕಾರರಿಗೆ ಹಣ ಬಟವಡೆ ಮಾಡುವ ನಿಟ್ಟಿನಲ್ಲಿ # 12,68,344ಗಳ ದುರುಪಯೋಗ ನಡೆದಿದೆ. ಇದರಲ್ಲಿ ತಪ್ಪಿತಸ್ಥ ಗ್ರಾಪಂ ಕ್ಲರ್ಕ್ ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸರ್ಕಾರ ನಿರ್ದೇಶನ ನೀಡಿದ್ದರೂ ತಾಪಂ ಇಓ ಹಾಗೂ ಪಿಡಿಓ ವಿಳಂಬ ಮಾಡಿದ್ದರಿಂದ ಇದು ನ್ಯಾಯಾಲಯ ಮೆಟ್ಟಿಲೇರಿದೆ. ಅದರ ಸತ್ಯಾಸತ್ಯತೆ ನಂತರ ಕ್ರಮ ಜರುಗಿಸಲಾಗುವುದು ಎಂದರು.
ನಷ್ಟಕ್ಕೆ ಕಡಿವಾಣ: ತಾವು ಅಧಿಕಾರ ಸ್ವೀಕರಿಸಿ 2 ವರ್ಷ ಸಂದಿದ್ದು, ಕಳೆದೊಂದು ವರ್ಷದಲ್ಲಿ ಒಟ್ಟು 95 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಲೋಪಗಳಿಲ್ಲದ 67 ಪ್ರಕರಣಗಳನ್ನು ಕೈಬಿಡಲಾಗಿದೆ. ದುರುಪಯೋಗ ಕಂಡು ಬಂದ 23 ಪ್ರಕರಣಗಳು ಪತ್ತೆಯಾಗಿದ್ದು, 5 ಪ್ರಕರಣ ತನಿಖಾ ಹಂತದಲ್ಲಿವೆ. ಈ ಎಲ್ಲ ಪ್ರಕರಣಗಲ್ಲಿ ಒಟ್ಟು 27,43.461ಗಳಷ್ಟು ಮೊತ್ತ ದುರುಪಯೋಗವಾಗಿದ್ದು, ಅದರಲ್ಲಿ # 4,84,027 ಲಕ್ಷ ವಸೂಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ದುರುಪಯೋಗವಾಗುತ್ತಿದೆ ಎಂಬ ಅನುಮಾನದ ಮೇಲೆ # 5,41,725ಗಳಷ್ಟು ಹಣವನ್ನು ಬಿಡುಗಡೆಗೆ ಮುನ್ನವೇ ತಡೆ ಹಿಡಿದು ಸರ್ಕಾರಕ್ಕೆ ಆಗುತ್ತಿದ್ದ ನಷ್ಟ ಕಡಿಮೆ ಮಾಡಲಾಗಿದೆ ಎಂದರು.
ಉದ್ಯೋಗ ಖಾತ್ರಿಯಲ್ಲಿನ ಅನುದಾನದ ದುರುಪಯೋಗ ತಡೆಗೆ ಓಂಬುಡ್ಸಮನ್ ನೇಮಕದಂತೆ ಇತರ ಎಲ್ಲ ಇಲಾಖೆಗಳಿಗೂ ಓಂಬುಡ್ಸಮನ್ ನೇಮಕಗೊಳಿಸಿ ಅಕ್ರಮ ತಡೆಯಲು ಸರ್ಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
2010-11ರಲ್ಲಿ # 71,59,398 ವ್ಯಯಿಸಲಾಗಿದೆ. ಇದರಲ್ಲಿ ಲೆಕ್ಕಪತ್ರ ಒದಗಿಸದ ಕಾರಣಕ್ಕೆ # 36,68,675ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಇದರಿಂದ ಗ್ರಾಪಂದಲ್ಲಿಯ ಒಟ್ಟು ದುರುಪಯೋಗದ ಮೊತ್ತ ಅಂದಾಜು # 30 ಲಕ್ಷಕ್ಕೂ ಹೆಚ್ಚಾಗಲಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 2011-12ರಲ್ಲಿ ದುರುಪಯೋಗದ ಪ್ರಮಾಣ ಕಡಿಮೆ. ಅದರಂತೆ ಎಂಜಿನೀಯರಿಂಗ್ ವಿಭಾಗದಲ್ಲಿಯೂ ದುರುಪಯೋಗ ನಡೆದಿದೆ. ಈ ಕುರಿತಂತೆ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ಹಿರೆಕೇರೂರು ತಾಲೂಕಿನ ಕೋಡ ಗ್ರಾಪಂದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೌಕರರು, ಸತ್ತವರು, ವಿದ್ಯಾರ್ಥಿನಿಯರನ್ನು ಕಾರ್ಮಿಕರೆಂದು ಸುಳ್ಳು ದಾಖಲೆ ಸೃಷ್ಠಿಸಿ ಹಣ ದುರುಪಯೋಗ ಮಾಡಿಕೊಂಡಿದ್ದು, ಅದರಲ್ಲಿ # 1,37,625ಗಳನ್ನು ವಸೂಲಿ ಮಾಡಲಾಗಿದೆ ಎಂದರು.