ರಾಣಿಬೆನ್ನೂರು: ನಗರದ ಎಲ್ಲ ವರ್ಗದ ಬಡವರಿಗೆ ಮಣಿಪಾಲ ಎಜ್ಯುಕೇಶನ್ ಟ್ರಸ್ಟ್ ಉಚಿತ ವೈದ್ಯಕೀಯ ಸೌಲಭ್ಯ ನೀಡುತ್ತಿದ್ದು, ಬಡವರು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರಣ್ಣ ಅಂಗಡಿ ಹೇಳಿದರು.
ವಿವಿಧ ಆರೋಗ್ಯ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ವರ್ತಕರ ಸಂಘದ ಸಭಾಭವನದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭಾಧ್ಯಕ್ಷ ಡಾ ಗಣೇಶ ದೇವಗಿರಿಮಠ ಮಾತನಾಡಿ, ಸಾರ್ವಜನಿಕರಿಗೆ ಉತ್ತಮ ಕುಡಿಯುವ ನೀರು ಪೂರೈಸಲು ನಗರಸಭೆ ಸಾಕಷ್ಟು ಹಣ ಖರ್ಚು ಮಾಡಿ, ವಿವಿಧ ಓಣಿಗಳಲ್ಲಿ ಕುಡಿಯುವ ನೀರಿನ ಮಿನಿ ಟ್ಯಾಂಕ್ ನಿರ್ಮಿಸಿದೆ. ಅವುಗಳ ಸುತ್ತ ಸ್ವಚ್ಛತೆ ಕಾಪಾಡಬೇಕು. ಚರಂಡಿಗಳಲ್ಲಿ ಕಸ ಚೆಲ್ಲದೆ, ಕಸ ಸಂಗ್ರಹಕ್ಕಾಗಿ ಮನೆ ಮನೆಗೆ ಬರುವ ಗಾಡಿಯವರಿಗೆ ಕಸ ನೀಡಿ, ರೋಗರಹಿತ ಸುಂದರ ನಗರವಾಗಿಸಲು ಸಹಕರಿಸುವಂತೆ ಮನವಿ ಮಾಡಿದರು. ಪಂಚಮಸಾಲಿ ಸಮಾಜದ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಅಂಗಡಿ, ಜೆಡಿಎಸ್ ಮುಖಂಡ ನಾಗರಾಜ ಪವಾರ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅರುಣಕುಮಾರ ಪೂಜಾರ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ, ಮಣಿಪಾಲ ಎಜ್ಯುಕೇಶನ್ ಟ್ರಸ್ಟ್ನ ಮಂಜುನಾಥ ನಾಯಕ, ಅಶೋಕ ಕುಮಾರ ಇದ್ದರು.