ರಾಣಿಬೆನ್ನೂರು: ಕಳೆದ 15 ದಿನಗಳಿಂದೀಚೆಗೆ ತಾಲೂಕಿನಾದ್ಯಂತ ಮುಂಗಾರು ಮಳೆ ಉತ್ತಮವಾಗಿದ್ದು, ಮುಂಗಾರು ಬಿತ್ತನೆಗಾಗಿ ರೈತರು ಭೂಮಿಯನ್ನು ಭರದಿಂದ ಹದಗೊಳಿಸುತ್ತಿದ್ದು, ಹೊಲದಲ್ಲಿನ ಕಸ ಕಡ್ಡಿ ತೆರವುಗೊಳಿಸಿ ಬಿತ್ತನೆಗಾಗಿ ಭೂಮಿ ಹಸನುಗೊಳಿಸುವ ಕಾರ್ಯದಲ್ಲಿ ಅನ್ನದಾತ ಮಗ್ನನಾಗಿದ್ದಾನೆ.
ಕಳೆದ ಸಾಲಿನ ಮುಂಗಾರಿನಲ್ಲಿ ಹತ್ತಿ ಬಿತ್ತಿ ಹಾನಿಗೊಳಗಾಗಿದ್ದ ರೈತರು ಕೂಡ ಈ ಭಾರಿಯಾದರೂ ಉತ್ತಮ ಬೆಳೆ ಕೈಗೆ ಸಿಗುವುದೆಂಬ ನಿರೀಕ್ಷೆಯಲ್ಲಿ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಸೀಡ್ಸ್ ಕಂಪನಿಗಳ ತವರೂರೆಂಬ ಖ್ಯಾತಿಗೆ ಪಾತ್ರವಾದ ತಾಲೂಕಿನ ಅನೇಕ ಗ್ರಾಮಗಳ ರೈತರು ಯಾವ ಕಂಪನಿ ಬಿತ್ತನೆ ಬೀಜ ಬಿತ್ತಿದಲ್ಲಿ ಉತ್ತಮ ಇಳುವರಿ ಬರುವುದೆಂಬುದರ ಚರ್ಚೆಯಲ್ಲಿ ತೊಡಗಿದ್ದಾರೆ.
ಬೀಜದ ಅಂಗಡಿಗೆ ಅಲೆದಾಟ: ರೈತರು ಹಾಗೂ ರೈತ ಮುಖಂಡರು ಯೋಗ್ಯ ಇಳುವರಿ ನೀಡಬಲ್ಲ ಬಿತ್ತನೆ ಬೀಜಗಳ ಆಯ್ಕೆಗಾಗಿ ನಗರದ ಖಾಸಗಿ ಬೀಜ ಮಾರಾಟದಂಗಡಿ ಹಾಗೂ ತಾಲೂಕಿನ ಕುಪ್ಪೆಲೂರು, ಮೇಡ್ಲೆರಿ, ತುಮ್ಮಿನಕಟ್ಟಿ ಮತ್ತು ನಗರದ ಪಿಬಿ ರಸ್ತೆಯ ಪಕ್ಕದ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸಿ ಉತ್ತಮ ಇಳುವರಿ ನೀಡಬಲ್ಲ ಬಿತ್ತನೆ ಬೀಜ ಪಡೆಯಲು ರೈತರು ಮುಂದಾಗಿದ್ದಾರೆ.
ಸರಾಸರಿ 32.08 ಮಿಮೀ ಮಳೆ: ತಾಲೂಕಿನಾದ್ಯಂತ ಕಳೆದ 15 ದಿನಗಳಿಂದ ಮಳೆ ಬೀಳುತ್ತಿದ್ದು, ಸರಾಸರಿ 32.08 ಮಿಮೀ ಮಳೆಯಾಗಿದೆ. ಉತ್ತಮ ಮುಂಗಾರು ನಿರೀಕ್ಷೆಯಲ್ಲಿರುವ ರೈತರು ಬಿತ್ತನೆಗಾಗಿ ಭೂಮಿ ಹದಗೊಳಿಸುತ್ತಾ, ಯೋಗ್ಯ ಬಿತ್ತನೆ ಬೀಜದ ಜೊತೆಗೆ ರಸಗೊಬ್ಬರ ಖರೀದಿಗಾಗಿ ಬೀಜ, ಗೊಬ್ಬರದ ಅಂಗಡಿಗೆ ಅಲೆಯುತ್ತಿದ್ದಾರೆ.
ಅಧಿಕಾರಿಗಳ ಹೇಳಿಕೆ: ತಾಲೂಕಿನಾದ್ಯಂತ ಒಟ್ಟು 68,148 ಸಾವಿರ ಹೆಕ್ಟೇರ್ ಪ್ರದೇಶವನ್ನು ಕೃಷಿ ಚಟುವಟಿಕೆ ಪ್ರದೇಶವೆಂದು ಗುರುತಿಸಿದ್ದು, ಈ ವರ್ಷದ ಮುಂಗಾರು ಹಂಗಾಮಿಗಾಗಿ ಅಂದಾಜು 45,696 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳಾಗಿ, ಹತ್ತಿ, ಗೋವಿನ (ಮೆಕ್ಕೆ)ಜೋಳ, ಹೈಬ್ರೀಡ್ ಜೋಳ, ತೊಗರಿ, ಅಲಸಂದಿ, ಉದ್ದು, ಹೆಸರು ಬೆಳೆಗಳನ್ನು ಬೆಳೆಯಲು ರೈತರು ಭೂಮಿ ಹದಗೊಳಿಸಿ ಬಿತ್ತನೆಗಾಗಿ ಸಿದ್ಧಪಡಿಸಿದ್ದು, ಮುಂಗಾರು ಬಿತ್ತನೆಗಾಗಿ 2521.13 ಕ್ವಿಂಟಲ್ ಗೋವಿನ (ಮೆಕ್ಕೆ)ಜೋಳ, 376.24 ಕ್ವಿಂಟಲ್ ಹೈಬ್ರೀಡ್ ಜೋಳ, 210.98 ಕ್ವಿಂಟಲ್ ತೊಗರಿ, 17.4 ಕ್ವಿಂಟಲ್ ಹೆಸರು, 75 ಸಾವಿರ ಕ್ವಿಂಟಲ್ ಹತ್ತಿ ಬಿತ್ತನೆ ಬೀಜಗಳನ್ನು ಪೂರೈಸುವಂತೆ, ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದಿರುವ ಬೀಜೋತ್ಪಾದನಾ ಸಂಸ್ಥೆಗಳಿಗೆ ಬೇಡಿಕೆ ಸಲ್ಲಿಸಿದ್ದು, 4 ದಿನಗಳೊಳಗಾಗಿ ಮಾರುಕಟ್ಟೆಯ ಎಲ್ಲಾ ಬೀಜ ಮಾರಾಟ ಅಂಗಡಿಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟದ ಮೂಲಕ ರೈತರಿಗೆ ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳುತ್ತೆವೆಂದು ಹಾಗೂ ಮುಂಗಾರು ಬಿತ್ತನೆಗಾಗಿ 72.6 ಮೆಟ್ರಿಕ್ ಟನ್ ಡಿಎಪಿ, 154 ಮೆಟ್ರಿಕ್ ಟನ್ ಎಂಓಪಿ, 64.35 ಮೆಟ್ರಿಕ್ ಟನ್ ಯೂರಿಯಾ, 648.15 ಮೆಟ್ರಿಕ್ ಕಾಂಪ್ಲೆಕ್ ಸೇರಿದಂತೆ ಒಟ್ಟು 939.10 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, 2014-15ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೆ ರೀತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ಸಿದ್ಧರಿದ್ದೇವೆಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗನಗೌಡ ರೆಡ್ಡಿ ತಿಳಿಸಿದರು.
ತಾಂತ್ರಿಕ ಮಾಹಿತಿ: ಭೂಮಿಯನ್ನು ಬಿತ್ತನೆಗಾಗಿ ಹದಗೊಳಿಸಲು ಸುಲಭ ಕಂತುಗಳಲ್ಲಿ ಹಾಗೂ ರಿಯಾಯಿತಿ ದರದಲ್ಲಿ ವಿವಿಧ ಯಂತ್ರೋಪಕರಣಗಳು ಕೃಷಿ ಇಲಾಖೆ ಆವರಣದಲ್ಲಿ ಲಭ್ಯವಿದ್ದು, ಆಸಕ್ತ ರೈತರು ಹಾಗೂ ಟ್ರ್ಯಾಕ್ಟರ್ ಹೊಂದಿರುವ ರೈತರು ತಮ್ಮನ್ನು ಸಂಪರ್ಕಿಸಿದಲ್ಲಿ ತಾವು ಸಹಕರಿಸುತ್ತೆವೆಂದು ಮತ್ತು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಹತ್ತಿ, ಗೋವಿನಜೋಳದ ಬೆಳೆಗಳಿಗೆ ತಗುಲಬಹುದಾದ ರೋಗಗಳ ನಿಯಂತ್ರಣಕ್ಕಾಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಾಲೂಕು ಕೃಷಿ ಇಲಾಖೆಯ ವ್ಯವಸ್ಥಾಪಕ, ಕೃಷಿ ತಾಂತ್ರಿಕಾಧಿಕಾರಿ ಶಿವಾನಂದ ಹೇಳಿದರು.
ಸಾಬ್ಜನ್ ಇಟಗಿ