ಶಿಗ್ಗಾಂವಿ: ಸಮಗ್ರ ಭಾರತದಾದ್ಯಂತ ಸಂಚಾರ ಮಾಡಿ ಹಿಂದೂ ಧರ್ಮ ಎತ್ತಿ ಹಿಡಿಯುವುದಕ್ಕೆ ಆದಿ ಶಂಕರಾಚಾರ್ಯರು ಮಾಡಿದ ಪ್ರಯತ್ನ ಅತ್ಯಂತ ಮಹತ್ವದ್ದಾಗಿದೆ. ಶಂಕರರ ಅವತಾರದಿಂದ ಹಿಂದು ಧರ್ಮದ ಉಳಿವಿಕೆ ಹಾಗೂ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದು ಧಾರವಾಡದ ಅವಧೂತ ಶಾಸ್ತ್ರಿ ಹೇಳಿದ್ದಾರೆ.
ಅವರು ಇಲ್ಲಿಯ ದೇಸಾಯಿಗಲ್ಲಿಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜರುಗಿದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಭಗವತ್ಪಾದರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆದಿ ಶಂಕರರು ಅನೇಕ ಕೃತಿ ರಚಿಸಿದ್ದಾರೆ. ಭಗವದ್ಗೀತೆ, ಉಪನಿಷತ್ಗಳಿಗೆ ಭಾಷೆ ನೀಡಿ ಹೆಚ್ಚು ತಿಳವಳಿಕೆ ಹೊಂದಿದವರಿಗೆ ಹೆಚ್ಚಿನ ಜ್ಞಾನ ಸಿಗುವಂತೆ ಮಾಡಿದರೆ, ಮಧ್ಯಮ ಜ್ಞಾನವಿದ್ದವರಿಗಾಗಿ ವಿವೇಕ ಚೂಡಾಮಣಿ, ಆತ್ಮಬೋಧ, ಅಪರೋಕ್ಷಾನೂಭೂತಿಗಳಂತಹ ಕೃತಿ ನೀಡಿದ್ದಾರೆ. ಅಲ್ಲದೆ, ಸರ್ವರಿಗೂ ಅರ್ಥವಾಗುವಂತಹ ನೂರಾರು ಸ್ತೋತ್ರವನ್ನು ಕೊಟ್ಟಿದ್ದಾರೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಸ್.ವಿ. ದೇಶಪಾಂಡೆ ಮಾತನಾಡಿದರು. ಜೆ.ಎ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎಲ್. ದೇಶಪಾಂಡೆ, ಎಸ್.ಪಿ. ಜೋಷಿ, ಕೆ.ಜಿ. ಹುರಳಿಕುಪ್ಪಿ, ಕೆ.ಡಿ. ದೇಶಪಾಂಡೆ, ಪಿ.ಜಿ. ದೇಶಪಾಂಡೆ, ಶೀನಪ್ಪ ದೇಶಪಾಂಡೆ, ದಿವಾಕರ ದೀಕ್ಷಿತ್, ವೆಂಕಟಾಚಲ ಗುಡಿ, ಶ್ರೀಕಾಂತ ಪೂತದಾರ, ಅಶೋಕ ದೇಶಪಾಂಡೆ, ವಿಕ್ರಂ ದೇಸಾಯಿ, ಶಶಿ ದೇಶಪಾಂಡೆ, ಪ್ರಕಾಶ್ ಕುಲಕರ್ಣಿ, ರಮಾ ದೇಶಪಾಂಡೆ, ಮಾಲತಿಬಾಯಿ ಜೋಷಿ, ಸುಧಾಬಾಯಿ ದೇಶಪಾಂಡೆ, ಲೀಲಾಬಾಯಿ ದೇಶಪಾಂಡೆ, ವಿಜಯಾಬಾಯಿ ದೇಶಪಾಂಡೆ ಇದ್ದರು. ಶಿಕ್ಷಕ ಆನಂದ ಕುಲಕರ್ಣಿ ನಿರ್ವಹಿಸಿದರು. ಇದಕ್ಕೂ ಪೂರ್ವ ಶ್ರೀ ಶಂಕರ ಕಲಶ ಪ್ರತಿಷ್ಠಾಪನೆ, ರುದ್ರಾಭಿಷೇಕ ಕಾರ್ಯಕ್ರಮ ಜರುಗಿತು.