ಸವಣೂರು: ಇಂದಿನ ದಿನಗಳಲ್ಲಿ ಶಿಕ್ಷಣವಂತ ಮಹಿಳೆಯರಿಗೂ ಸಾಮಾನ್ಯ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮುಂದಾಗಬೇಕು. ಆ ಮೂಲಕ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದಾಗಿದೆ ಎಂದು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರ ಆರ್. ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಸಮಾಖ್ಯಾ ಕರ್ನಾಟಕ ಜಿಲ್ಲಾ ಘಟಕದ ಆಶ್ರಯದಲ್ಲಿ ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಮಹಿಳಾ ಸಮಾಖ್ಯಾ ಕರ್ನಾಟಕ ಜಿಲ್ಲಾ ಘಟಕದಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಮಹಿಳೆಯರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಕಾನೂನುಗಳನ್ನು ಬಳಸಿಕೊಂಡು ಸಮಾಜದಲ್ಲಿ ಉನ್ನತಿ ಹೊಂದುವ ಮೂಲಕ ಉತ್ತಮ ಜೀವನ ಕೈಗೊಳ್ಳಬಹುದಾಗಿದೆ ಎಂದರು.
ಮಹಿಳಾ ಸಮಾಖ್ಯಾ ಕರ್ನಾಟಕ ಜಿಲ್ಲಾ ಸಂಪನ್ಮೂಲ ವ್ಯಕ್ತಿ ರೇಣುಕಾ ತ್ರಿಪಾಠಿ, ಗ್ರಾಮೀಣ ಪ್ರದೇಶದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯಾಗುವ ಮೂಲಕ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ತಮ್ಮ ಮೇಲೆ ನಡೆಯುವ ಸಾಮಾಜಿಕ ಹಾಗೂ ಕೌಟುಂಬಿಕ ದೌರ್ಜನ್ಯ ತಡೆಯುವಂತರಾಗಬೇಕು. ಈ ಕುರಿತು ಸಂಸ್ಥೆ ಹಲವಾರು ರೀತಿಯ ಮಹಿಳಾ ಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಕೀಲರಾದ ಎಫ್.ಎನ್. ನೆಲ್ಲೂರ, ಬಾಲ ಕಾರ್ಮಿಕರ ಮತ್ತು ಮಹಿಳೆಯರ ಹಕ್ಕುಗಳು ಹಾಗೂ ಜಿ.ಎಂ. ಮರಿಗೌಡ್ರ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು.
ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಪಿ.ಆರ್. ಕಲಾಲ ಅಧ್ಯಕ್ಷತೆ ವಹಿಸಿದ್ದರು. ಎಪಿಪಿ ಮಂಜುನಾಥ ನಾಯ್ಕ, ಗ್ರಾಪಂ ಅಧ್ಯಕ್ಷ ಬಸಪ್ಪ ಕನಕಣ್ಣನವರ, ಪಿಡಿಒ ಡಿ.ಎಸ್. ಚಹ್ವಾಣ ಇತರರಿದ್ದರು.
ಮಹಿಳಾ ಸಮಾಖ್ಯಾ ಘಟಕದ ಸುನಾಂದ ಚಿನ್ನಾಪುರ ಸ್ವಾಗತಿಸಿದರು. ಸುವರ್ಣಾ ಬಾಳಮ್ಮನವರ ಕಾರ್ಯಕ್ರಮ ನಿರ್ವಹಿಸಿದರು.