ಕೊಡಗು

ಸಾರಂಗ್ ತಂಡದಲ್ಲಿ ಮಡಿಕೇರಿ ಸಿಪಾಯಿ

ಯಲಹಂಕ ವಾಯುನೆಲೆ, ಫೆ.7: ಭಾರತದ ಹೆಸರಾಂತ ಏರೋಬಾಟಿಕ್ ತಂಡ ಸಾರಂಗ್‌ನ 14 ಜನರ ಪೈಲಟ್ ತಂಡದಲ್ಲಿ ಮಡಿಕೇರಿಯ ಕುವರನಿದ್ದಾನೆ!
ವಾಯು ಸೇನೆ ಸೇರಿ 11 ವರ್ಷವಾದ ಬಳಿಕ ಕನಸಿನ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗಿಯಾಗಿರುವ ಪೃಥ್ವಿ ಪೊನ್ನಪ್ಪ, ಸಾರಂಗ್ ತಂಡದ ಮೂಲಕ ಕನ್ನಡಿಗರ ಹೆಸರನ್ನು ಬಾನಯಾನದಲ್ಲಿ ಬರೆದಿದ್ದಾರೆ.
ಪ್ರತಿಷ್ಠಿತ ಸೂರ್ಯಕಿರಣ ತಂಡ ಕೊನೆಯಾದ ಬಳಿಕ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತೀಯ ಸೇನೆಯ ಹೆಮ್ಮೆಯ ಪ್ರತೀಕವಾದ ಸಾರಂಗ್ ತಂಡ ಫೆ. 6ರಿಂದ ಪ್ರತಿದಿನ 2 ಪ್ರದರ್ಶನ ನೀಡುತ್ತಿದೆ. ಜಾಗತಿಕ ವೈಮಾನಿಕ ಪ್ರದರ್ಶನಗಳಲ್ಲಿ ಹೆಲಿಕಾಪ್ಟರ್‌ಗಳ ಏರೋಬಾಟಿಕ್ ತಂಡವಿರುವುದು ಎರಡು ಮಾತ್ರ. ಇದರಲ್ಲಿ ಒಂದು ಭಾರತದ್ದು ಹಾಗೂ ಅದರಲ್ಲಿ ಕನ್ನಡಿಗನು ಸೇರಿರುವುದು ಹೆಮ್ಮೆಯ ವಿಷಯ.
ಕಳೆದ 2005ರ ಫೆಬ್ರವರಿಯಲ್ಲಿ ಸಿಂಗಾಪೂರ ಏಷಿಯನ್ ವೈಮಾನಿಕ ಪ್ರದರ್ಶನದ ಮೂಲಕ ಬಾನಯಾನಕ್ಕೆ ಕಾಲಿಟ್ಟ ಸಾರಂಗ್ ತಂಡ, ಇವತ್ತಿನವರೆಗೆ ಸುಮಾರು 35 ಪ್ರದರ್ಶನಗಳನ್ನು ನೀಡಿದೆ.
ವೃತ್ತಿಯ ಕನಸು ನನಸಾಗಿದೆ: 'ಕಳೆದ 11 ವರ್ಷಗಳಿಂದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಲಘು ಯುದ್ಧ ಹೆಲಿಕಾಪ್ಟರ್, ಚೀತಾ ಹೆಲಿಕಾಪ್ಟರ್ ಸೇರಿದಂತೆ ಇತರೆ ತಂಡಗಳಲ್ಲಿ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದೇನೆ. ಆದರೆ, ಏರೋ ಇಂಡಿಯಾದಲ್ಲಿ ಪ್ರದರ್ಶನ ನೀಡುವ ಸೌಭಾಗ್ಯ ದೊರೆತಿರಲಿಲ್ಲ. ಒಂದು ತಿಂಗಳ ಹಿಂದೆ ಸಾರಂಗ್ ತಂಡಕ್ಕೆ ಸೇರಿದ್ದೇನೆ. ಎರಡು ದಿನಗಳಿಂದ ನೀಡುತ್ತಿರುವ ಪ್ರದರ್ಶನದಿಂದ ರೋಮಾಂಚಿತನಾಗಿದ್ದೇನೆ. ನನ್ನ ತಾಯ್ನಾಡು ಹಾಗೂ ಕನ್ನಡಿಗರ ಎದುರೇ ಪ್ರದರ್ಶನ ನೀಡುತ್ತಿರುವುದು ಹೆಮ್ಮೆ ಎನಿಸುತ್ತಿದೆ' ಎಂದು ಸ್ಕ್ವಾಡ್ರನ್ ಲೀಡರ್ ಪೃಥ್ವಿ ಪೊನ್ನಪ್ಪ ಖುಷಿಯಿಂದ ಹೇಳುತ್ತಾರೆ.
'ರೆಡ್‌ಬುಲ್‌ನ ಸಾಹಸ ಪ್ರದರ್ಶನ ನೋಡಿ ಎಲ್ಲರೂ ರೋಮಾಂಚನಗೊಂಡಿರುತ್ತಾರೆ. ಆದರೆ ರೆಡ್‌ಬುಲ್ ಪ್ರದರ್ಶನ ನಡೆಯುವುದು ಲಘು ವಿಮಾನಗಳಿಂದ. ಅಲ್ಲಿ ವಿಮಾನಗಳ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ವಿಷಯವಲ್ಲ. ಆದರೆ ಹೆಲಿಕಾಪ್ಟರ್‌ನಲ್ಲಿ ಸಮತೋಲನ ಕಾಯ್ದುಕೊಂಡು ಸಾಹಸ ಪ್ರದರ್ಶನ ನೀಡುವುದು ಕ್ಲಿಷ್ಟಕರ. ನಮ್ಮ ಎದುರಿನ ಹೆಲಿಕಾಪ್ಟರ್‌ನ ಪೈಲೆಟ್ ಮೇಲೆ ಸಂಪೂರ್ಣ ವಿಶ್ವಾಸ ಹಾಗೂ ನಂಬಿಕೆಯಿದ್ದರೆ ಮಾತ್ರ ಚಲಿಸಲು ಸಾಧ್ಯ. ಸತತ ಪ್ರಯತ್ನಗಳ ಫಲವಾಗಿ ಇಂತಹ ಪ್ರದರ್ಶನ ನೀಡಬಹುದು. ಸಾರಂಗ್ ತಂಡದ ಮೂಲಕ ಭಾರತದ ಹೆಮ್ಮೆ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ' ಎಂದು ಪೊನ್ನಪ್ಪ ಅಭಿಪ್ರಾಯಪಡುತ್ತಾರೆ.
ಎಚ್‌ಎಎಲ್ ನಿರ್ಮಿಸಿರುವ ಧ್ರುವ ಹೆಲಿಕಾಪ್ಟರ್ ಮೂಲಕ ಸಾರಂಗ್ ತಂಡವು ಈ ಪ್ರದರ್ಶನ ನೀಡುತ್ತಿದೆ.
ಇದರಲ್ಲಿ ನಾಲ್ಕು ಹೆಲಿಕಾಪ್ಟರ್ ಪಾಲ್ಗೊಳ್ಳುತ್ತದೆ.
ಸಾರಂಗ್ ತಂಡದ ಸದಸ್ಯರು: ಆರ್.ಸಿ. ಪಾಠಕ್, ವಿನೋದ್ ನೇಗಿ, ಶೈಲೇಂದ್ರ ಪಾಂಡೆ, ಮುದಿತ್ ಚೌರಾಸಿಯಾ, ಎಸ್. ಶರವಣಲು, ಪೃಥ್ವಿ ಪೊನ್ನಪ್ಪ, ಅನಿಲ್ ಯಾದವ್, ಎಸ್. ಜಾಮ್ಕರ್, ಅಭಿಜಿತ್ ಕುಮಾರ್, ಗುರುಪ್ರೀತ್ ಸಿಂಗ್, ಭೂಷಣ್ ರಾವ್, ಎಸ್.ಕೆ. ಸಿಂಗ್, ನಿಖಿತ್ ತಿವಾರ್, ಪಿ.ಎಸ್. ಕಾರ್ತಿಕ್, ಪ್ರಿಯಾಂಶು ಮುಖರ್ಜಿ, ಭಾರತ್ ಬಜಾಜ್, ವಿಜಯ್ ಕಾರ್ತಿಕ್, ಗುರುಜೀತ್ ಸಿಂಗ್, ಭಾವನಾ ಮೆಹ್ರಾ ಸಾರಂಗ್ ತಂಡದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್