ಮಡಿಕೇರಿ/ಸುಬ್ರಹ್ಮಣ್ಯ: ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಹಾಗೂ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶನಿವಾರ ಅಪರಾಹ್ನ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಮಡಿಕೇರಿ ನಗರದಲ್ಲಿಗುಡುಗಿನೊಂದಿಗೆ ಸುರಿದ ಮಳೆಯಿಂದಾಗಿ ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ನೀರು ಹರಿದಿದೆ.
ಮಳೆಗಾಲದ ದಿನಗಳನ್ನು ನೆನಪಿಸುವಂತೆ ಮಡಿಕೇರಿಯಲ್ಲಿ ಮಧ್ಯಾಹ್ನದಿಂದಲೇ ಗುಡುಗಿನೊಂದಿಗೆ ಕೂಡಿದ ಮಳೆ ಸುರಿಯತೊಡಗಿತು. ಆಗಿಂದಾಗ್ಗೆ ಮಿಂಚು ಕಂಡುಬಂತು. ದಟ್ಟ ಮೋಡ ಕವಿದ ವಾತಾವರಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಸೆಖೆಯಿಂದ ಕೂಡಿದ್ದ ವಾತಾವರಣದಲ್ಲಿ ಚಳಿಯ ಅನುಭವವಾಯಿತು.
ಮಳೆಯಿಂದಾಗಿ ಸಂಜೆಯವರೆಗೂ ಜನ ಕೊಡೆ ಹಿಡಿದು ಸಾಗಬೇಕಾದ ಅನಿವಾರ್ಯತೆ ಉಂಟಾಗಿತ್ತು.
ನಾಪೋಕ್ಲು ವ್ಯಾಪ್ತಿಯಲ್ಲಿಯೂ ಧಾರಾಕಾರ ಮಳೆಯಾಗಿದ್ದು ನಿರಂತರ ಎರಡನೇ ದಿನವೂ ನಾಪೋಕ್ಲುವಿನಲ್ಲಿ ಧಾರಾಕಾರ ಮಳೆ ಬಿದ್ದಿದೆ.
ಸುಂಟಿಕೊಪ್ಪ ವರದಿ: ಸುಂಟಿಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲೂ ಶನಿವಾರ ಸಂಜೆ ಈ ವರ್ಷದ ಮೊದಲ ಮಳೆ ಸುರಿದಿದೆ. ಇದರಿಂದಾಗಿ ರೈತಾಪಿ ವರ್ಗದವರ ಮೊಗದಲ್ಲಿ ಹರ್ಷ ಮೂಡಿದೆ. ಕೆಲ ಕೃಷಿಕರಿಗೆ ಮಳೆ ಸಂಕಟ ತಂದಿದ್ದು, ಬೆಳೆಗಳು ಕೊಯ್ಲಿಗೆ ಬಂದಿದ್ದು ಮಳೆಯಿಂದಾಗಿ ನಷ್ಟ ಭೀತಿಯಲ್ಲಿದ್ದಾರೆ. ಪಟ್ಟಣದಲ್ಲಿ ಸುಮಾರು 3.45 ರ ಸಮಯದಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ಈ ವರ್ಷಧಾರೆ ತಂಪೆರೆಯಿತು.
ಕುಶಾಲನಗರ ವರದಿ: ಕುಶಾಲನಗರ ಪಟ್ಟಣ ಹಾಗು ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿ ಶನಿವಾರ ಸಂಜೆ ವೇಳೆ ಭಾರಿ ಮಳೆಯಾಗಿದೆ. ಬೇಸಿಗೆಯ ಬಿರುಬಿಸಿಲಿನ ನಡುವೆ ಭೂಮಿ ತಂಪಾದರೂ ಜನಜೀವನ ಕೆಲ ಕಾಲ ಅಸ್ತವ್ಯಸ್ತವಾಯಿತು. ದಿಢೀರ್ ಮಳೆಯಿಂದ ಕುಶಾಲನಗರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಏರುಪೇರು ಉಂಟಾಯಿತು.