ಕೊಡಗು

ಆನೆ ಹಾವಳಿ ತಡೆಗೆ ಖಾರದ ಪುಡಿ ಪ್ರಯೋಗ..!

ಸಿದ್ದಾಪುರ: ಖಾರ ಪುಡಿ, ಗೋಣಿ ಚೀಲ, ವೇಸ್ಟ್ ಆಯಿಲ್ ಇಷ್ಟನ್ನು ಉಪಯೋಗಿಸಿ ಕಾಡಾನೆ ಹಾವಳಿ ತಡೆಗಟ್ಟಲು ಹೊಸ ಪ್ರಯತ್ನವನ್ನು ನಡೆಸಲಾಗಿದೆ.
 ಏನಪ್ಪ ಇದು ಆನೆ ಹಾವಳಿ ತಡೆಗೆ ಇದರಿಂದ ಸಾಧ್ಯವೇ...? ಎಂದು ಹುಬ್ಬೇರಿಸಬೇಡಿ. ಈಗ ಇದು ಸಾಧ್ಯ ಎನ್ನುತ್ತಾರೆ ಅಸ್ಸಾಂನಿಂದ ಬಂದ ಡಾಕ್ಟರ್.
ಡಾಕ್ಟರ್ ರುದ್ರ ಅವರು ಈ ನಿಟ್ಟಿನಲ್ಲಿ ಹೊಸ ಪ್ರಯತ್ನದ ಬಗ್ಗೆ ಪ್ರಯೋಗ ನಡೆಸಿದ್ದಾರೆ. ಕೊಡಗಿನಲ್ಲಿ ನಿರಂತರವಾಗಿ ಅರಣ್ಯ ಇಲಾಖೆ ಹಾಗೂ ಬೆಳೆಗಾರರನ್ನು ಕಾಡುತ್ತಿರುವ ಆನೆ ಹಾವಳಿಯನ್ನು ತಡೆಗಟ್ಟಲಿಕ್ಕೆ ಹಲವು ಯೋಜನೆಗಳು ನಡೆಸಿದೆಯಾದರೂ ಇದುವರೆಗೆ ಯಾವುದೇ ಯೋಜನೆಗಳು ಫಲಕಾರಿಯಾಗಲಿಲ್ಲ.
 ಇಂದಿಗೂ ಅರಣ್ಯದಿಂದ ನೇರವಾಗಿ ಕಂದಕ, ಸೋಲಾರ್ ಬೇಲಿಗಳನ್ನೂ ಲೆಕ್ಕಿಸದೆ ತೋಟಗಳಿಗೆ ದಾಟುತ್ತಿರುವ ಆನೆಗಳನ್ನು ತಡೆಯಲಿಕ್ಕೆ ಯಾವುದೇ ಒಂದು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಆಗದೆ ಅರಣ್ಯ ಇಲಾಖೆ ಹಾಗೂ ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿತ್ತು.
ಆದರೆ, ಆನೆಗಳ ಹಾವಳಿ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಬಗೆಹರಿಸಲು ಯಾರಿಂದಲೂ ಸಾಧ್ಯವಾಗದ ಸಂದರ್ಭ ಅಸ್ಸಾಂನಲ್ಲಿ ಟೀ ತೋಟದ ಬೆಳೆಗಾರರೊಬ್ಬರು ನಡೆಸಿದ ಪ್ರಯತ್ನದಿಂದ ಅಲ್ಲಿ ಶಾಶ್ವತವಾಗಿ ಆನೆ ಹಾವಳಿ ತಡೆಗಟ್ಟಿದಂತಾಗಿದೆ.
ಈಗಾಗಲೇ ಅಸ್ಸಾಂ ಸೇರಿದಂತೆ ಇತರ ಕಡೆ ಇಂತಹ ಪ್ರಯತ್ನ ನಡೆಸಲಾಗಿದ್ದು, ಯಶಸ್ವಿ ಕಂಡಿದೆ ಎನ್ನಲಾಗಿದೆ. ಆನೆ ಹಾವಳಿ ತಡೆಗಟ್ಟಲು ಸಾಧ್ಯವಾಗಿದ್ದು, ಇವರ ಪ್ರಯತ್ನವು ಇತರರಿಗೂ ಮಾರ್ಗದರ್ಶನವಾಗಲಿ ಎಂಬ ಉದ್ದೇಶದಿಂದ ಕೇರಳ, ಕರ್ನಾಟಕ, ತಮಿಳುನಾಡುಗಳಲ್ಲಿ ಇದರ ಪ್ರಯೋಗ ನಡೆಸಲಾಗಿದ್ದು, ಸ್ವಲ್ಪ ಮಟ್ಟದಲ್ಲಿ ಯಶಸ್ವಿಯಾಗಿದೆ.
ಸಿದ್ದಾಪುರದಲ್ಲಿ ಪ್ರಯೋಗ:  ಸಿದ್ದಾಪುರ ಸಮೀಪ ಕರಡಿಗೋಡು ಭುವನಹಳ್ಳಿ ಜೋಸೆಫ್ ಕಿರಣ್ ಅವರ ತೋಟದಲ್ಲಿ ಗುರುವಾರ ಇದರ ಪ್ರಯೋಗ ನಡೆಸಿ ಮಾತನಾಡಿದ ಡಾ. ರುದ್ರ, ಇದರಿಂದ ಶಾಶ್ವತವಾಗಿ ತಡೆಗಟ್ಟಬಹುದಾಗಿದೆ ಎಂದು ಹೇಳಿ ಅರಣ್ಯ ಇಲಾಖೆ ಹಾಗೂ ಬೆಳೆಗಾರರಿಗೆ ಇದರ ಮಾಹಿತಿ ನೀಡಿದರು.
ಬಳಸುವ ವಿಧಾನ: ಹಳೆ ಗೋಣಿ ಚೀಲ, ವಾಹನಗಳಿಗೆ ಉಪಯೋಗಿಸುವ ವೇಸ್ಟ್ ಆಯಿಲ್, ಖಾರ ಪುಡಿ, ಮರದಿಂದ ಮರಕ್ಕೆ ಕಟ್ಟುವ ಹಗ್ಗ ಮತ್ತು ತಂತಿಯನ್ನು ಬಳಸಿ ಗೋಣಿ ಚೀಲವನ್ನು ಆಯಿಲ್‌ನಿಂದ ಒದ್ದೆ ಮಾಡಬೇಕು, ನಂತರ ಖಾರ ಪುಡಿಯನ್ನು ಅದರಲ್ಲಿ ಎರಚಿ ಗೋಣಿ ಚೀಲವನ್ನು ಹಗ್ಗಕ್ಕೆ ತಂತಿಯಿಂದ ನೇತು ಹಾಕಿ ಇಟ್ಟರೆ ಸಾಕು ಖಾರದ ಪುಡಿಯ ವಾಸನೆಯಿಂದ ಆನೆಗಳು ಆ ಸ್ಥಳಕ್ಕೆ ಬರುವುದಿಲ್ಲ. 20 ದಿನಗಳವರೆಗೆ ಇದರ ವಾಸನೆ ಇರುತ್ತದೆ. ಇದಾದ ನಂತರ ಮತ್ತೆ ಅದೇ ಚೀಲಕ್ಕೆ ಸ್ವಲ್ಪ ಖಾರದ ಪುಡಿ ಎರಚಿದರೆ ಸಾಕು.
 ಕಡಿಮೆ ಖರ್ಚಿನಲ್ಲಿ ಹೊಸ ಒಂದು ಪ್ರಯೋಗ ನಡೆಸಿರುವುದರಿಂದ ಆನೆ ಹಾವಳಿಯನ್ನು ತಡೆಗಟ್ಟಬಹುದಾಗಿದೆ. ಈಗಾಗಲೇ ಚಾಮರಾಜನಗರದಲ್ಲಿ ಈ ಪ್ರಯೋಗ ನಡೆಸಲಾಗಿದೆ ಎಂದು ತಿಳಿಸಿದರು.
 ಇದರಿಂದ ಆನೆಗಳ ಹಾವಳಿಯನ್ನು ತಡೆಗಟ್ಟುವುದರಲ್ಲಿ ಯಶಸ್ವಿಯಾದರೆ ಎಲ್ಲ ಬೆಳೆಗಾರರಿಗೂ ಕಡಿಮೆ ವೆಚ್ಚದಲ್ಲಿ ಇಂತಹ ಪ್ರಯತ್ನ ನಡೆಸಬಹುದು ಮಾತ್ರವಲ್ಲದೆ ಬೆಳೆಗಾರರಿಗೆ ನಿರಂತರವಾಗಿ ಕಾಡುತ್ತಿದ್ದ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
 ಈ ಸಂದರ್ಭ ಡಿ.ಎಫ್.ಒ. ಪುಟ್ಟುಸ್ವಾಮಿ, ಎ.ಸಿ.ಎಫ್. ಅಲೆಗ್ಸಾಂಡರ್, ಆರ್.ಎಫ್.ಒ. ಗೋಪಾಲ್, ಕಾಫಿ ಬೇಳೆಗಾರರಾದ ನಂದಾ ಸುಬ್ಬಯ್ಯ, ಜೀವನ್ ಮಂದಣ್ಣ, ಕೆ.ಪಿ. ಗಣಪತಿ, ತಾಲೂಕು ಪಂಚಾಯಿತಿ ಸದಸ್ಯ ಜಾನ್ಸನ್, ತೋಟದ ಮಾಲೀಕ ಜೋಸೆಫ್ ಕಿರಣ್ ಹಾಜರಿದ್ದರು.
-ಎಸ್.ಎಂ. ಮುಬಾರಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್