ಮಡಿಕೇರಿ: ಕೊಡಗು-ಕೇರಳ ರಾಜ್ಯದ ಗಡಿಯಲ್ಲಿ ನಕ್ಸಲರು ಸಂಚರಿಸುತ್ತಿರುವುದು ಖಚಿತಪಟ್ಟಿದ್ದು, ಗುರುವಾರ ರಾತ್ರಿ ಮುಂಡ್ರೋಟ್ ಸಮೀಪದ ಉಡುಂಬೆ ಅರಣ್ಯ ಪ್ರದೇಶದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ.
ಸಂಜೆ ಸುಮಾರು 6.30ಕ್ಕೆ ಉಡುಂಬೆಯಲ್ಲಿರುವ ಅರಣ್ಯ ವಸತಿ ಗೃಹದ ಬಳಿ ಬಂದ ನಕ್ಸಲರು, ಅಲ್ಲಿದ್ದ ಅರಣ್ಯ ಸಿಬ್ಬಂದಿ ವಿಜೇಂದ್ರ ಎಂಬವರನ್ನು ಹೊರಗೆ ಕರೆದಿದ್ದಾರೆ. 20 ಕೆ.ಜಿ. ಅಕ್ಕಿ ಕೊಡುವಂತೆ ವಿಜೇಂದ್ರರನ್ನು ನಕ್ಸಲರು ಕೇಳಿದ್ದಾರೆ.
ಅಷ್ಟು ಪ್ರಮಾಣದ ಅಕ್ಕಿ ಇಲ್ಲ ಎಂದು ಹೇಳಿದ ಅರಣ್ಯ ಸಿಬ್ಬಂದಿಯನ್ನು ಸುಮಾರು ಅರ್ಧ ಕಿ.ಮೀ. ದೂರ ಕರೆದುಕೊಂಡು ಹೋದ ನಕ್ಸಲರು ಕೇರಳ ರಾಜ್ಯದ ನಿವಾಸಿ ವೆಲ್ಲಪ್ಪನ್ ಎಂಬವರ ಮನೆಗೆ ವಿಜೇಂದ್ರ ಅವರನ್ನು ಕಳುಹಿಸಿ ಅಲ್ಲಿಂದ ಅಕ್ಕಿ ತರಿಸಿಕೊಂಡಿದ್ದಾರೆ.
ವೆಲ್ಲಪ್ಪನ್ ಅರಣ್ಯ ಸಿಬ್ಬಂದಿ ವಿಜೇಂದ್ರರಿಗೆ ಪರಿಚಯವಿದ್ದ ಹಿನ್ನೆಲೆಯಲ್ಲಿ ಅಕ್ಕಿ ಕೊಟ್ಟಿದ್ದಾರೆ. ಅಕ್ಕಿ ಪಡೆದ ನಕ್ಸಲರು ಕಾಡಿನಲ್ಲಿ ಮರೆಯಾಗಿದ್ದಾರೆ. ಘಟನೆ ನಡೆದ ಕೆಲವು ಗಂಟೆ ಬಳಿಕ ಅರಣ್ಯ ಕಚೇರಿಗೆ ಬಂದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಎನ್ಎಫ್: ನಕ್ಸಲರ ಚಲನವಲನ ಬಗ್ಗೆ ಮಾಹಿತಿ ತಿಳಿದೊಡನೆ ನಕ್ಸಲ್ ನಿಗ್ರಹ ದಳ ಉಡುಂಬೆಗೆ ಧಾವಿಸಿದೆ. ನಕ್ಸಲ್ ನಿಗ್ರಹ ದಳದ ಐಜಿ ಅಲೋಕ್ ಕುಮಾರ್, ಎಸ್ಪಿ ವಾಸುದೇವ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್, ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್, ಕೇರಳ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ.
ಕೇರಳ ಪೊಲೀಸ್ ಪಡೆ ಮತ್ತು ನಕ್ಸಲ್ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್ ತಿಳಿಸಿದ್ದಾರೆ.