ಮಡಿಕೇರಿ: ನಗರವನ್ನು ಕಸಮುಕ್ತ ನಗರವಾಗಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಾರಂಭದಿಂದಲೇ ಎಲ್ಲಾ 31 ವಾರ್ಡ್ಗಳ ಮನೆಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತದೆ ಎಂದು ನಗರಸಭೆಯ ಪೌರಾಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲೂ ನಗರಸಭೆ ಸರ್ವಸಜ್ಜಾಗಿದ್ದು, ನಗರ ವ್ಯಾಪ್ತಿಯಲ್ಲಿ 7 ಹೊಸ ಬೋರ್ವೆಲ್ಗಳನ್ನು ಕೊರೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಡಿಕೇರಿಯಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ನಗರಸಭೆಯ ಪೌರಾಯುಕ್ತ ಶಶಿಕುಮಾರ್, ಪ್ರಸ್ತುತ ಮಡಿಕೇರಿಯ 23 ವಾರ್ಡ್ಗಳ ಪೈಕಿ ಮಾತ್ರವೇ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದ್ದು, ಇದರಿಂದಾಗಿ ಉಳಿದ ವಾರ್ಡ್ಗಳಲ್ಲಿ ಕಸವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ.
ಮಡಿಯಾದ ಕೇರಿಯಾಗಿಸುವ ಉದ್ದೇಶ: ಕೆಲವೊಂದು ವಾರ್ಡ್ಗಳಲ್ಲಿ ರಸ್ತೆ ಬದಿಯೇ ಕಸದ ರಾಶಿಯೇ ಕಂಡುಬರುತ್ತಿದೆ. ಇದನ್ನು ನಿವಾರಿಸುವ ಉದ್ದೇಶದಿಂದ ಫೆ.1 ರಿಂದಲೇ ನಗರದ ಎಲ್ಲಾ 31 ವಾರ್ಡ್ಗಳಲ್ಲಿನ ಪ್ರತೀ ಮನೆಗಳಿಂದ ಕಸ ಸಂಗ್ರಹಣೆ ಮಾಡುವ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದ್ದು, ನಗರಸಭೆ ಇದಕ್ಕಾಗಿ 2 ಹೊಸ ಟ್ರಾಕ್ಟರ್ ಖರೀದಿಸಿದ್ದು, ಸ್ತ್ರೀಶಕ್ತಿ ಗುಂಪುಗಳನ್ನೂ ಈ ಉದ್ದೇಶಕ್ಕಾಗಿ ಗುರುತಿಸಿದೆ ಎಂದು ತಿಳಿಸಿದರು. ಪ್ರವಾಸಿಗರು ಹೆಚ್ಚುತ್ತಲೇ ಇರುವ ಹಿನ್ನಲೆಯಲ್ಲಿ ಮಡಿಕೇರಿಯನ್ನು ಮಡಿಯಾದ ಕೇರಿಯಾಗಿರಿಸಿಕೊಳ್ಳುವ ಉದ್ದೇಶದಿಂದ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾಗುತ್ತದೆ ಎಂದೂ ಶಶಿಕುಮಾರ್ ತಿಳಿಸಿದರು.
ರು. 360 ವಾರ್ಷಿಕ ಶುಲ್ಕ: ಮೂಲದಲ್ಲಿಯೇ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನೂ ಆರಂಭಿಸಲಾಗುತ್ತದೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು. ಮಡಿಕೇರಿಯ ಪ್ರತಿ ಮನೆಯಿಂದಲೂ ಕಸ ಸಂಗ್ರಹಣೆಯ ಉದ್ದೇಶಕ್ಕಾಗಿ ವಾರ್ಷಿಕ ರು. 360 ಶುಲ್ಕ ಸಂಗ್ರಹಿಸಲಾಗುತ್ತದೆ ಎಂದೂ ಅವರು ಮಾಹಿತಿ ನೀಡಿದರು.
ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿದ್ದು, ಈಗಾಗಲೇ ರು. 19.30 ಕೋಟಿ ಅಂದಾಜು ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಆರ್ಥಿಕ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಈ ಮಾಸಾಂತ್ಯದಲ್ಲಿ ಸರ್ಕಾರದಿಂದ ಅನುಮೋದನೆ ದೊರಕುವ ನಿರೀಕ್ಷೆಯಿದೆ ಎಂದೂ ಶಶಿಕುಮಾರ್ ಹೇಳಿದರು.
ಮಡಿಕೇರಿಗೆ ಕುಡಿಯುವ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ ಶಶಿಕುಮಾರ್ ಸದ್ಯಕ್ಕೆ ಕೂಟುಹೊಳೆಯಲ್ಲಿ ಫೆಬ್ರವರಿ ಮಾಸಾಂತ್ಯದವರೆಗೂ ನೀರಿನ ಸಂಗ್ರಹವಿದೆ. ಪುಟಾಣಿ ನಗರದ ಕೆರೆಯಲ್ಲಿ ಮಾತ್ರ ನೀರು ಬತ್ತಿ ಹೋಗಿದ್ದು ಈ ವ್ಯಾಪ್ತಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ಮಡಿಕೇರಿಯಲ್ಲಿ 72 ಬೋರ್ ವೆಲ್ಗಳು ಕಾರ್ಯನಿರ್ವಹಿಸುತ್ತಿದ್ದು, 28 ಮೋಟಾರ್ ಅಳವಡಿಕೆಯ ಬೋರ್ವೆಲ್ಗಳು ನೀರು ಸರಬರಾಜು ಮಾಡುತ್ತಿವೆ.
ಇನ್ನೂ ಹಸದ್ದಾಗಿ 7 ಬೋರ್ವೆಲ್ಗಳನ್ನು ಮಾಸಾಂತ್ಯದಲ್ಲಿ ಕೊರೆಯಲಾಗುತ್ತದೆ. ಕುಂಡಾಮೇಸ್ತ್ರೀ ಯೋಜನೆಯಿಂದ ಮುಂದಿನ ವರ್ಷವಷ್ಟೇ ಮಡಿಕೇರಿಗೆ ಸಂಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರಿನ ಸರಬರಾಜು ಸಾಧ್ಯವಾಗಲಿದ್ದು ಈ ವರ್ಷ ಯಾವುದೇ ರೀತಿಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆದಲ್ಲಿ ಅದನ್ನು ಎದುರಿಸಲು ನಗರಸಭೆ ಸಿದ್ಧವಾಗಿದೆ ಎಂದೂ ಶಶಿಕುಮಾರ್ ಭರವಸೆ ನೀಡಿದರು.