ಮೂರ್ನಾಡು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸದಿಂದ ವಂಚಿತರಾಗದೆ ಪದವಿ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ನಿವೃತ್ತ ಮುಖ್ಯೋಪಧ್ಯಾಯ ಹಾಗೂ ಪದವಿ ಕಾಲೇಜಿನ ಕಟ್ಟಡದ ದಾನಿ ಬಾಚೇಟ್ಟಿರ ಲಾಲು ಮುದ್ದಯ್ಯ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟು ನೂತವನಾಗಿ ಆರಂಭಗೊಂಡ ಬಿ.ಕಾಂ ಪದವಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಮೂರ್ನಾಡಿನಲ್ಲಿ ಪದವಿ ಕಾಲೇಜು ಪ್ರಾರಂಭವಾಗಬೇಕು ಎಂಬ ಅಭಿಲಾಷೆ ಇಂದು ನೆರವೇರಿದೆ. ಮೂರ್ನಾಡಿನ ಸುತ್ತ ಮುತ್ತಲಿನ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಉನ್ನತ ಪ್ರಜೆಗಳಾಗಬೇಕು. ಆಡಳಿತ ಮಂಡಳಿಯ ಪರಿಶ್ರಮ ಇದರಲ್ಲಿಡಗಿದೆ ಎಂದು ಹೇಳಿದರು.
ನಿವೃತ್ತ ಮುಖ್ಯೋಪಧ್ಯಾಯಿನಿ ಕಮಲ ಮುದ್ದಯ್ಯ ಮಾತನಾಡಿ, ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಪದವಿ ತರಗತಿಗಳು ಪ್ರಾರಂಭವಾಗಿರುವುದು ಹೆಚ್ಚಿನ ಅನುಕೂಲವಾಗಿದೆ. ಪದವಿ ತರಗತಿಯ ವಿದ್ಯಾರ್ಥಿಗಳು ಶಿಸ್ತು ಸಂಯಮದೊಂದಿಗೆ ವರ್ತಿಸಿ, ಪ್ರಾಧ್ಯಾಪಕರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದರೊಂದಿಗೆ, ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದರು.
ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ ಜಿ. ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ, ನಗರ ಪ್ರದೇಶದಲ್ಲಿ ಡೊನೇಷನ್ ಹೆಚ್ಚು ನೀಡಿದರೆ ವಿದ್ಯಾಭ್ಯಾಸದ ಗುಣಮಟ್ಟವೇನೂ ಹೆಚ್ಚಾಗುವುದಿಲ್ಲ. ಪೋಷಕರು ಈ ಭ್ರಮೆಯಿಂದ ಹೊರ ಬರಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಡೊನೇಷನ್ ಇಲ್ಲದೆ ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯ. ಅದಕ್ಕಾಗಿಯೆ ಇಲ್ಲಿ ಪದವಿ ತರಗತಿಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಕೇವಲ ತರಗತಿಗಳನ್ನು ಪ್ರಾರಂಭ ಮಾಡಿದ್ದು, ಪದವಿ ಕಾಲೇಜಿನ ಕಟ್ಟಡ ಇನ್ನು ನಿರ್ಮಾಣ ಹಂತದಲ್ಲಿದೆ. ಕಟ್ಟಡ ಉದ್ಘಾಟನೆಯನ್ನು ಸಚಿವರ ಮುಖಾಂತರ ಮಾಡಲಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಸುಸಜ್ಜಿತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಳಂಗಂಡ ಮುದ್ದಪ್ಪ, ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಖಜಾಂಚಿ ಪುದಿಯೊಕ್ಕಡ ಸುಬ್ರಮಣಿ, ಮಾಜಿ ಅಧ್ಯಕ್ಷ ಅವರೆಮಾದಂಡ ಮಂದಣ್ಣ, ನಿರ್ದೇಶಕ ಮುಕ್ಕಾಟಿರ ಉಮೇಶ್ ಬೆಳ್ಯಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲೆ ಸಿ.ಜೆ. ಪ್ರಿಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಸಹ ಶಿಕ್ಷಕ ಎಸ್.ಡಿ. ಪ್ರಶಾಂತ್, ಅಪ್ಪಣ್ಣ ಗೋಳ್ ಇದ್ದರು.
ವಿದ್ಯಾರ್ಥಿನಿ ನೀಲಮ್ಮ ಪ್ರಾರ್ಥಿಸಿ, ಪದವಿ ಕಾಲೇಜಿನ ಉಪನ್ಯಾಸಕಿ ಕಲ್ಪನಾ ಸಾಮ್ರಾಟ್ ಸ್ವಾಗತಿಸಿ, ಕೆ.ಎಸ್. ವಿಲ್ಮಾ ಕಾರ್ಯಕ್ರಮ ನಿರೂಪಿಸಿ, ಶಾರದ ಮುತ್ತಪ್ಪ ವಂದಿಸಿದರು.