ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2014-15ನೇ ಸಾಲಿಗೆ ರು. 2500 ಕೋಟಿ ಸಾಲ ಯೋಜನೆ ಪ್ರಕಟಿಸಲಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಕೃಷಿ ಮತ್ತು ಇತರ ಚಟುವಟಿಕೆಗಳಿಗಾಗಿ ರು. 2019 ಕೋಟಿ ಮೀಸಲಿಡಲಾಗಿದೆ. ಜಿಲ್ಲಾ ಸಾಲ ಯೋಜನೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.18 ಹೆಚ್ಚಳವಾಗಿದೆ.
ನಗರದ ಕಾರ್ಪೊರೇಷನ್ ಬ್ಯಾಂಕ್ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ 2014-15ನೇ ಸಾಲಿನ ಸಾಲ ಯೋಜನೆಯನ್ನು ಜಿ.ಪಂ. ಅಧ್ಯಕ್ಷ ಎಸ್.ಎನ್. ರಾಜಾರಾವ್ ಬಿಡುಗಡೆಗೊಳಿಸಿದರು.
ಕಳೆದ ವರ್ಷ ಕೃಷಿ ಮತ್ತು ಇತರ ಚಟುವಟಿಕೆಗಳಿಗಾಗಿ ರು. 1692 ಕೋಟಿ ಮೀಸಲಿಡಲಾಗಿತ್ತು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗಾಗಿ ಕಳೆದ ವರ್ಷ ರು. 47 ಕೋಟಿ ಮೀಸಲಿಟ್ಟಿದ್ದರೆ ಈ ಬಾರಿ ರು. 102 ಕೋಟಿ ಮೀಸಲಿಡಲಾಗಿದೆ. ಇತರ ಆದ್ಯತಾ ವಲಯಗಳಿಗೆ ಕಳೆದ ವರ್ಷ ರು. 157 ಕೋಟಿ ಮೀಸಲಿಟ್ಟಿದ್ದರೆ ಈ ವರ್ಷ 148 ಕೋಟಿ ಇಡಲಾಗಿದೆ. ಆದ್ಯತಾ ರಹಿತ ವಲಯಕ್ಕೆ ಈ ಬಾರಿ ರು. 231 ಕೋಟಿ (ಕಳೆದ ಬಾರಿ ರು. 224 ಕೋಟಿ) ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ 2014-15ನೇ ಸಾಲಿಗೆ 2500 ಕೋಟಿ ಸಾಲ ಯೋಜನೆ ಪ್ರಕಟಿಸಲಾಗಿದ್ದು, ಕಳೆದ ವರ್ಷ ರು. 2119 ಕೋಟಿ ಪ್ರಕಟಿಸಲಾಗಿತ್ತು.
ಕೃಷಿಗೆ ಸಿಂಹಪಾಲು: ಒಟ್ಟು ಸಾಲ ಯೋಜನೆಯ ಶೇ.81ರಷ್ಟನ್ನು ಕೃಷಿ ಮತ್ತು ಇತರ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದು, ಆದ್ಯತಾ ರಂಗಕ್ಕೆ ಶೇ.91ರಷ್ಟನ್ನು ಮೀಸಲಿಡಲಾಗಿದೆ. ಕಳೆದ ವರ್ಷಕ್ಕಿಂತ ಶೇ.20ರಷ್ಟು ಹೆಚ್ಚು ಸಾಲ ಯೋಜನೆಯನ್ನು ಆದ್ಯತಾ ರಂಗಕ್ಕೂ ಹಾಗೂ ಶೇ.18ರಷ್ಟು ಒಟ್ಟಾರೆ ಸಾಲಯೋಜನೆಯನ್ನು ಹೆಚ್ಚಿಸಲಾಗಿದೆ.
ಮಡಿಕೇರಿ ತಾಲೂಕಿಗೆ ರು. 871 ಕೋಟಿ (ಕಳೆದ ವರ್ಷ ರು. 741 ಕೋಟಿ), ವಿರಾಜಪೇಟೆ ತಾಲೂಕಿಗೆ ರು. 956 ಕೋಟಿ (ಕಳೆದ ಬಾರಿ ರು. 829 ಕೋಟಿ), ಸೋಮವಾರಪೇಟೆ ತಾಲೂಕಿಗೆ ರು. 674 ಕೋಟಿ (ಕಳೆದ ಬಾರಿ 549 ಕೋಟಿ ) ಗುರಿ ನಿಗದಿ ಮಾಡಲಾಗಿದೆ.
ಸಾಲ ಯೋಜನೆ ಬಿಡುಗಡೆಗೊಳಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಎಸ್.ಎನ್. ರಾಜಾರಾವ್, ಬ್ಯಾಂಕ್ಗಳು ಸಾಲಗಾರರಿಗೆ ಮತ್ತು ಮರುಪಾವತಿ ಮಾಡುವವರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಪೊರೇಷನ್ ಬ್ಯಾಂಕ್ ಮೈಸೂರು ವಲಯ ಕಚೇರಿಯ ಉಪಮಹಾಪ್ರಬಂಧಕ ನಾಗರಾಜ್ ಉಡುಪ, ರಿಸರ್ವ್ ಬ್ಯಾಂಕ್ ಇಂಡಿಯಾದ ಸಹಾಯಕ ಮಹಾಪ್ರಬಂಧಕ ಲಕ್ಷ್ಮೀಪತಿ, ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣಾಚಲ ಶರ್ಮ ಇದ್ದರು.