ಕೋಲಾರ: ನಗರಸಭೆಯ 35 ವಾರ್ಡುಗಳಿಗೆ ಮಾ.7ರಂದು ನಡೆಯುವ ಚುನಾವಣೆಗೆ 290 ಮಂದಿ ಉಮೇದುವಾರಿಕೆ ಸಲ್ಲಿಸಿದ್ದು, ಸೋಮವಾರ ಇವುಗಳ ಪರಿಶೀಲನಾ ಕಾರ್ಯ ನಡೆಯಲಿದೆ.
ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ವರ್ತೂರ್ ಪ್ರಕಾಶ್ ಬಣದಿಂದ 35 ವಾರ್ಡುಗಳಿಗೆ ಪ್ರಭಾವಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಕೆಲವು ಕಡೆ ಸ್ಪರ್ಧೆಗೆ ಅವಕಾಶ ಸಿಗಬಹುದೆಂದು ನಾಮಪತ್ರ ಸಲ್ಲಿಸಿರುವವರಿಂದ ಗೊಂದಲ ಉಂಟಾಗಬಹುದು ಎಂದು ಮುಖಂಡರು ಬಿರುಸಿನ ಚಟುವಟಿಕೆ ಮೂಲಕ ಬಂಡಾಯ ತಡೆಯಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
ವರ್ತೂರ್ ಬಣದಿಂದ ಸ್ಪರ್ಧಿಸಲು ಅವಕಾಶ ವಂಚಿತರಾಗಿರುವವರನ್ನು ಜೆಡಿಎಸ್ ಮುಖಂಡರು ಪಕ್ಷಕ್ಕೆ ಸೆಳೆಯಲು ಈಗಾಗಲೇ ಗಾಳ ಬೀಸಿದ್ದು, ನಾಮಪತ್ರ ಹಿಂದಕ್ಕೆ ಪಡೆದು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವಂತೆ ಲಾಬಿ ಮಾಡುತ್ತಿರುವುದರಿಂದ ಸಚಿವ ವರ್ತೂರ್ ಪ್ರಕಾಶ್ ಅವರೇ ಖುದ್ದಾಗಿ ನಾಮಪತ್ರ ಸಲ್ಲಿಸಿರುವವರ ಮನೆಗಳಿಗೆ ಭೇಟಿ ನೀಡಿ ಮನವೊಲಿಸಲು ಯತ್ನಿಸುತ್ತಿದ್ದಾರೆ.
ವಾ.ನಂ.5, 26, 19, 25ರಲ್ಲಿ ವರ್ತೂರ್ ಬಣದಿಂದ ಸ್ಪರ್ಧಿಸಲು ಐದಾರು ಮಂದಿ ಅಕಾಂಕ್ಷಿಗಳು ನಾಮಪತ್ರ ಸಲ್ಲಿಸಿರುವುದರಿಂದ ಬಂಡಾಯ ತಪ್ಪಿಸಲು ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಪಕ್ಷದ ಸವಾಲುಗಳನ್ನು ಎದುರಿಸಬಲ್ಲ ಸಮರ್ಥರನ್ನು ಕಣಕ್ಕೆ ಇಳಿಸಲು ರಾಜಕೀಯ ಲೆಕ್ಕಾಚಾರ ನಡೆಸಲಾಗುತ್ತಿದೆ.
ಜೆಡಿಎಸ್ನಲ್ಲೂ ಅನೇಕರು ತೆನೆ ಹೊತ್ತ ಮಹಿಳೆಯ ಚಿಹ್ನೆಯಡಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದು, ವರ್ತೂರ್ ಬಣದ ವಿರುದ್ಧ ಗಟ್ಟಿ ಅಸಾಮಿಗಳನ್ನೇ ಕಣಕ್ಕೆ ಇಳಿಸಬೇಕೆಂದು ಮುಖಂಡರು ಚಿಂತನೆ ನಡೆಸಿರುವುದರಿಂದ ಟಿಕೆಟ್ ವಂಚಿತರು ಪಕ್ಷ ಬಿಡಲು ನಿರ್ಧರಿಸಿದ್ದಾರೆ. ಇದರಿಂದ ಮುಖಂಡರು ಧರ್ಮಸಂಕಟಕ್ಕೆ ಸಿಲುಕಿದ್ದಾರೆ.
ವಾ.ನಂ 2, 9, 13, 14,35 ಸೇರಿದಂತೆ ಇನ್ನಿತರ ವಾರ್ಡುಗಳಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಜೆಡಿಎಸ್ ಕಾರ್ಯಕರ್ತರು ತಮ್ಮನ್ನು ಅಧಿಕೃತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡದಿದ್ದಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಕೆಲವರು ಪ್ರಚಾರ ಆರಂಭಿಸಿರುವುದರಿಂದ ಈ ಪಕ್ಷದ ಮುಖಂಡರು ಪೈಪೋಟಿ ತಪ್ಪಿಸಲು ತಂತ್ರ-ಪ್ರತಿತಂತ್ರ ರೂಪಿಸಲು ಕಾರ್ಯೋನ್ಮುಖರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಎರಡು ವಾರ್ಡುಗಳಿಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಉಳಿದಂತೆ ವಾ.ನಂ 1, 7, 11, 15, 16 ರಲ್ಲಿ ಸ್ಪರ್ಧೆಗೆ ಅವಕಾಶ ನೀಡಲೇಬೇಕೆಂದು ಕೆಲವರು ಹಠ ಹಿಡಿದಿರುವುದು ಕಾಂಗ್ರೆಸ್ ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದೆ.
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಾರ್ಡುವಾರು ಸಮೀಕ್ಷೆಗಾಗಿ ನೇಮಿಸಿದ್ದ ಕೆಲ ಮುಖಂಡರು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿಲ್ಲ. ಜೆಡಿಎಸ್ ಜತೆ ಒಳಒಪ್ಪಂದ ಮಾಡಿಕೊಂಡು ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಇದೇ ರೀತಿ ಕೆಲ ಮುಖಂಡರು ವರ್ತೂರ್ ಬಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಲಿದೆ. 290 ನಾಮಪತ್ರಗಳ ಪೈಕಿ ಕಾಂಗ್ರೆಸ್ನಿಂದ 49, ಬಿಜೆಪಿ-20, ಜೆಡಿಎಸ್-51, ಸಿಪಿಐಎಂ-1, ಪಕ್ಷೇತರರು-133, ರೈತ ಸಂಘ-1, ಜನತಾಪಕ್ಷ-2, ಕೆಜೆಪಿ-11, ಬಿಎಸ್ಆರ್-11, ಆರ್.ಪಿ.ಐ-4 ಹಾಗೂ ಎಸ್.ಡಿ.ಪಿ.ಐ-7 ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್ ಜೆಡಿಎಸ್ ಮತ್ತು ವರ್ತೂರ್ ಬಣದಿಂದ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದು ನಾಮಪತ್ರಗಳ ಪರಿಶೀಲನೆ ನಂತರ ಯಾರ್ಯಾರು ತಮ್ಮ ನಾಯಕರಿಗೆ ನಿಷ್ಠೆ ತೋರಿಸಿ ಬಂಡಾಯ ತಪ್ಪಿಸುತ್ತಾರೋ ಕಾದು ನೋಡಬೇಕಾಗಿದೆ.
-ಪಾ.ಶ್ರೀ. ಅನಂತರಾಮ್